ಆರೋಗ್ಯ

ಕಲಬುರಗಿ ಜಿಮ್ಸ್‌ನಲ್ಲಿ ಆ.7ರಂದು ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ

ಅಲರ್ಜಿ, ಉಸಿರಾಟದ ಕಾಯಿಲೆಗಳು ಹಾಗೂ ರೋಗನಿರೋಧಕ ಚಿಕಿತ್ಸೆಗಳ ಕುರಿತು ತಜ್ಞರಿಂದ ಉಪನ್ಯಾಸ – ವೈದ್ಯರು, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಹ್ವಾನ

ಕಲಬುರಗಿ, ಆ.6: ನಗರದ ಜಿಮ್ಸ್ (ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ) ಆಸ್ಪತ್ರೆಯ 10ನೇ ಮಹಡಿಯ ವೈದ್ಯಕೀಯ ಮಹಾವಿದ್ಯಾಲಯ ಸಭಾಂಗಣದಲ್ಲಿ ಆಗಸ್ಟ್‌ 7ರಂದು ಬೆಳಿಗ್ಗೆ 9 ಗಂಟೆಯಿಂದ ನಿರಂತರ ವೈದ್ಯಕೀಯ ಶಿಕ್ಷಣ (CME) ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ್ ಸಿ.ಆರ್. ತಿಳಿಸಿದ್ದಾರೆ.

ಕಿವಿ, ಮೂಗು, ಗಂಟಲು (ಇಎನ್‌ಟಿ), ಶ್ವಾಸಕೋಶ ಹಾಗೂ ಇತರ ವೈದ್ಯಕೀಯ ವಿಭಾಗಗಳ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ವೈದ್ಯರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಬೋಧಕ ವರ್ಗ ಹಾಗೂ ಆರೋಗ್ಯ ಕ್ಷೇತ್ರದ ವೃತ್ತಿಪರರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಅಲರ್ಜಿ, ರೋಗನಿರೋಧಕ ಚಿಕಿತ್ಸೆ ಹಾಗೂ ಉಸಿರಾಟ ಸಂಬಂಧಿತ ಕಾಯಿಲೆಗಳ ಕುರಿತು ತಜ್ಞರು ಉಪನ್ಯಾಸ ನೀಡಲಿದ್ದಾರೆ. ಜಿಮ್ಸ್ ನಿರ್ದೇಶಕ ಹಾಗೂ ಡೀನ್ ಡಾ. ಉಮೇಶ್ ಎಸ್.ಆರ್. ಮುಖ್ಯ ಪೋಷಕರಾಗಿ ಭಾಗವಹಿಸಲಿದ್ದು, ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ್ ಸಿ.ಆರ್. ಮುಖ್ಯ ಅತಿಥಿಯಾಗಿರಲಿದ್ದಾರೆ.

ಇಎನ್‌ಟಿ ವಿಭಾಗದ ಮುಖ್ಯಸ್ಥೆ ಡಾ. ರೇಣುಕಾ ಎಸ್. ಮೇಲಕುಂದಿ, ಪಲ್ಮನರಿ ಮೆಡಿಸಿನ್ ವಿಭಾಗದ ಮುಖ್ಯಸ್ಥೆ ಡಾ. ಮಣಿ ದೇವಿ ಕರಂಪೂಡಿ, ಡಾ. ಗೌತಮ್ ಮೋದಿ, ಡಾ. ನರೇಂದ್ರ ತೆಂಗಳಿ, ಡಾ. ರೇವಣಸಿದ್ದ ಹಾಗೂ ಡಾ. ಶ್ರದ್ಧಾ ಪವಾರ್ ಸೇರಿದಂತೆ ಹಲವು ತಜ್ಞ ವೈದ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಅಲರ್ಜಿ ಮತ್ತು ಅಲರ್ಜನ್ ಇಮ್ಯುನೊಥೆರಪಿ ಕುರಿತು ಡಾ. ಗೌತಮ್ ಮೋದಿ, ಮೂಗು ಮತ್ತು ಸೈನಸ್ ಅಲರ್ಜಿ ನಿಯಂತ್ರಣ ಕುರಿತು ಡಾ. ಶ್ರದ್ಧಾ ಪವಾರ್ ಹಾಗೂ ಅಸ್ತಮಾ ಚಿಕಿತ್ಸೆಯಲ್ಲಿ ಜೈವಿಕ (ಬಯೋಲಾಜಿಕಲ್) ಚಿಕಿತ್ಸೆಗಳ ಕುರಿತು ಡಾ. ನರೇಂದ್ರ ತೆಂಗಳಿ ಉಪನ್ಯಾಸ ನೀಡಲಿದ್ದಾರೆ. ಇದೇ ವೇಳೆ ಸ್ಕಿನ್ ಪ್ರಿಕ್ ಅಲರ್ಜಿ ಪರೀಕ್ಷೆ ಕುರಿತು ಪ್ರಾಯೋಗಿಕ ಕಾರ್ಯಾಗಾರವನ್ನು ಡಾ. ರೇವಣಸಿದ್ದ ನಡೆಸಿಕೊಡಲಿದ್ದಾರೆ.

ಕಾರ್ಯಕ್ರಮದ ಬಳಿಕ ತಜ್ಞರೊಂದಿಗೆ ಸಂವಾದ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಕರ್ನಾಟಕ ವೈದ್ಯಕೀಯ ಮಂಡಳಿಯಿಂದ ಎರಡು ಕ್ರೆಡಿಟ್ ಪಾಯಿಂಟ್‌ಗಳಿಗೆ ಅರ್ಜಿ ಸಲ್ಲಿಸಲಾಗಿದ್ದು, ನೋಂದಣಿ ಶುಲ್ಕ 300 ರೂ. ನಿಗದಿಪಡಿಸಲಾಗಿದೆ. ಆಸಕ್ತ ವೈದ್ಯರು ಹಾಗೂ ಆರೋಗ್ಯ ವೃತ್ತಿಪರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಮ್ಸ್ ಆಡಳಿತ ಮನವಿ ಮಾಡಿದೆ.

Related Articles

Leave a Reply

Your email address will not be published. Required fields are marked *

Back to top button