ಜಿಲ್ಲಾಸುದ್ದಿ

ಗುರು-ಶಿಷ್ಯರ ಭಾವನಾತ್ಮಕ ಸಮ್ಮಿಲನಶಿಕ್ಷಕರೇ ವ್ಯಕ್ತಿತ್ವದ ಶಿಲ್ಪಿಗಳು: ಡಾ. ಹರೀಶ್ ರಾಠೋಡ್

ಚಿತ್ತಾಪುರ, ಸೆ.17: ಶಾಲಾ ದಿನಗಳು ಮುಗಿದು ಹಲವು ವರ್ಷಗಳು ಕಳೆದರೂ ಗುರುಗಳ ಮೇಲಿನ ಗೌರವ ಮತ್ತು ವಿದ್ಯಾರ್ಥಿಗಳ ಮೇಲಿನ ಶಿಕ್ಷಕರ ಪ್ರೀತಿ ಎಂದಿಗೂ ಮಾಸುವುದಿಲ್ಲ ಎಂಬುದಕ್ಕೆ ಪಟ್ಟಣದ ಒಳಾಂಗಣ ಕ್ರೀಡಾಂಗಣ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಸಾಕ್ಷಿಯಾಯಿತು.

ಆರ್‌ಇಎಸ್‌ಸಿ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಲವು ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಸೇರಿದ ಹಳೆಯ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳನ್ನು ಆತ್ಮೀಯವಾಗಿ ಸನ್ಮಾನಿಸಿ, ಶಾಲಾ ದಿನಗಳ ನೆನಪುಗಳನ್ನು ಮೆಲುಕು ಹಾಕಿದರು. ಗುರು-ಶಿಷ್ಯರ ಆತ್ಮೀಯ ಮಾತುಕತೆ, ಶಾಲಾ ದಿನಗಳ ಸಿಹಿ ನೆನಪುಗಳು ಹಾಗೂ ಭಾವನಾತ್ಮಕ ಕ್ಷಣಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.

ಭಾರತ ರತ್ನ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಆರ್‌ಇಎಸ್‌ಸಿ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಶಿಕ್ಷಕರಾದ ಮಸ್ತಾನ್ ಪಟೇಲ್, ಪಂಪಾಪತಿ, ಮಲ್ಲಿಕಾರ್ಜುನ, ಖಮರುಸಾ ಬೇಗಂ, ಶಶಿರೇಖಾ ಪವಾರ್, ಸಾವಿತ್ರಿ, ಮಂಜುಳಾ ಹಾಗೂ ಸುಂದರಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯಾದಗಿರಿ ಸರ್ಕಾರಿ ಬಾಲಕಿಯರ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಹರೀಶ್ ರಾಠೋಡ್ ಮಾತನಾಡಿ, ವಿದ್ಯಾರ್ಥಿಗಳ ಬದುಕಿನಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅಂಕ, ಪದವಿ ಅಥವಾ ಉದ್ಯೋಗಕ್ಕಿಂತ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರ ಮಾರ್ಗದರ್ಶನ ಪ್ರಮುಖವಾಗಿದೆ. ಗುರುಗಳಿಗೆ ಗೌರವ ಸಲ್ಲಿಸುವ ಸಂಸ್ಕೃತಿ ನಿರಂತರವಾಗಿ ಮುಂದುವರಿಯಬೇಕು ಎಂದು ಹೇಳಿದರು.

ರಾಜಶೇಖರ್ ಬಳ್ಳಾ ಮಾತನಾಡಿ, ವಿದ್ಯಾಭ್ಯಾಸ ಮುಗಿಸಿ ಜೀವನದ ವಿವಿಧ ಕ್ಷೇತ್ರಗಳಲ್ಲಿ ನೆಲೆಸಿರುವ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಮರೆಯದೆ ಮತ್ತೆ ಒಂದೆಡೆ ಸೇರಿ ಗೌರವಿಸುತ್ತಿರುವುದು ಸಂತಸದ ಸಂಗತಿ. ಇಂತಹ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೂ ಗುರು-ಶಿಷ್ಯರ ಸಂಬಂಧದ ಮಹತ್ವವನ್ನು ತಿಳಿಸಿಕೊಡುತ್ತವೆ ಎಂದರು.

ಶಿಕ್ಷಕ ಶಂಕರ್ ಮಾತನಾಡುವ ವೇಳೆ ಭಾವುಕರಾಗಿ, ವಿದ್ಯಾರ್ಥಿಗಳು ತಮ್ಮನ್ನು ನೆನಪಿಸಿಕೊಂಡು ಇಂತಹ ಗೌರವ ನೀಡಿರುವುದು ತಮ್ಮ ಜೀವನದಲ್ಲಿ ಮರೆಯಲಾಗದ ಕ್ಷಣವಾಗಿದೆ. ವಿದ್ಯಾರ್ಥಿಗಳ ಪ್ರೀತಿ ಮತ್ತು ಅಭಿಮಾನವೇ ಶಿಕ್ಷಕರಿಗೆ ದೊರೆಯುವ ಅತ್ಯಂತ ದೊಡ್ಡ ಬಹುಮಾನ ಎಂದು ಹೇಳಿದರು.

ಶಿಕ್ಷಕರ ದಿನಾಚರಣೆಯನ್ನು ಕೇವಲ ಸನ್ಮಾನ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ ಶಿಕ್ಷಕರಿಗಾಗಿ ಮನರಂಜನಾ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಶಿಕ್ಷಕರು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು. ವಿವಿಧ ಆಟಗಳಲ್ಲಿ ವಿಜೇತರಾದವರಿಗೆ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸಲು ಸಾಧ್ಯವಾಗದ ಹಳೆಯ ವಿದ್ಯಾರ್ಥಿಗಳು ಆನ್‌ಲೈನ್ ನೇರಪ್ರಸಾರದ ಮೂಲಕ ತಮ್ಮ ಗುರುಗಳಿಗೆ ಶುಭಾಶಯ ಕೋರಿದರು. ಅಮೆರಿಕದ ಪಲ್ಲವಿ, ಮುಂಬೈನ ಶಾಂತಿ ಚವ್ಹಾಣ್, ಬೆಂಗಳೂರಿನ ಮಲ್ಲು ಎಸ್.ಬಿ. ಹಾಗೂ ಬೆಳಗಾವಿಯ ಆನಂದ ಪಾಟೀಲ ಸೇರಿದಂತೆ ಹಲವು ಹಳೆಯ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಜಹೀರ್ ಅಹ್ಮದ್, ಅಬ್ದುಲ್ ವಾಜೀದ್, ನಾಮದೇವ್, ತಿರುಪತಿ ಚವ್ಹಾಣ್, ವಿಶ್ವನಾಥ ಕಾಶಿ, ಇಕ್ಬಾಲ್, ಮಲ್ಲಿಕಾರ್ಜುನ, ಮುಖೀಂ, ಅಬ್ದುಲ್ ಖಾದರ್, ಮಹೇಶ್ ಕಾಶಿ, ರವಿ ಚವ್ಹಾಣ್, ನಾಗರಾಜ್, ಮಹೇಶ್, ಪ್ರೀತಿ ಹಾಗೂ ಮೊಶಿನ್ ಸೇರಿದಂತೆ ಅನೇಕ ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button