ಕಾನೂನು

ವಕ್ಫ್ ಆಸ್ತಿ ರಕ್ಷಣೆ ಹೋರಾಟಗಾರನಿಗೆ ಜೀವ ಬೆದರಿಕೆ ಆರೋಪ

ಆಸ್ತಿ ಸಂರಕ್ಷಣೆಗೆ ಹೋರಾಟ ನಡೆಸಿದ ಪರಿಣಾಮ ಕಿರುಕುಳ, ಸಂಚು ಮತ್ತು ಬೆದರಿಕೆ ಎದುರಿಸುತ್ತಿದ್ದೇನೆ ಎಂದು ಅಬ್ದುಲ್ ಸಮೀ ಆರೋಪ

ಕಳೆದ 15 ವರ್ಷಗಳಿಂದ ವಕ್ಫ್ ಆಸ್ತಿಗಳ ರಕ್ಷಣೆಗೆ ಹೋರಾಟ ನಡೆಸುತ್ತಿರುವ ತಾನು, ಪ್ರಭಾವಿ ವ್ಯಕ್ತಿಗಳ ವಿರುದ್ಧ ಆಸ್ತಿಗಳ ಸಂರಕ್ಷಣೆಯ ವಿಷಯವನ್ನು ಪ್ರಸ್ತಾಪಿಸಿದ ಬಳಿಕ ಸಂಚು ರೂಪಿಸಿ ಕಿರುಕುಳ ನೀಡಲಾಗುತ್ತಿದ್ದು, ಜೀವ ಬೆದರಿಕೆಯನ್ನೂ ಹಾಕಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಅಬ್ದುಲ್ ಸಮೀ ಆರೋಪಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ಆಸ್ತಿಗಳ ರಕ್ಷಣೆಗೆ ಸಂಬಂಧಿಸಿದಂತೆ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದು, ಅನೇಕ ಪ್ರಕರಣಗಳಲ್ಲಿ ನ್ಯಾಯಾಂಗದ ಮೊರೆ ಹೋಗಿದ್ದೇನೆ. ವಕ್ಫ್ ವ್ಯವಸ್ಥೆಯ ಸುಧಾರಣೆ ಕುರಿತಾಗಿಯೂ ಸರ್ಕಾರದ ಗಮನ ಸೆಳೆದಿದ್ದೇನೆ ಎಂದು ತಿಳಿಸಿದರು.

ವಕ್ಫ್ ಆಸ್ತಿಗಳ ಕುರಿತ ಅಕ್ರಮಗಳನ್ನು ಪ್ರಶ್ನಿಸಿದ ಬಳಿಕ ತಮ್ಮ ವಿರುದ್ಧ ವಿರೋಧದ ವಾತಾವರಣ ನಿರ್ಮಾಣವಾಯಿತು. ವಿವಿಧ ಭೂ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ಕಾನೂನುಬದ್ಧವಾಗಿ ನೋಂದಣಿ ಮಾಡಿಕೊಂಡಿದ್ದರೂ, ನಂತರ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಪಡಿಸಲಾಯಿತು ಎಂದು ದೂರಿದರು.

ತಮ್ಮ ಹೆಸರಿನಲ್ಲಿದ್ದ ದಾಖಲೆಗಳನ್ನು ಯಾವುದೇ ಪೂರ್ವ ಸೂಚನೆ ನೀಡದೆ ಬದಲಾಯಿಸಲಾಗಿದೆ. ಈ ಕ್ರಮವನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದ ಕಲಬುರಗಿ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದು, ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದೆ ಎಂದು ಹೇಳಿದರು.

ಆರ್ಥಿಕ ಹಾಗೂ ಮಾನಸಿಕ ಒತ್ತಡ ಉಂಟುಮಾಡುವ ಉದ್ದೇಶದಿಂದ ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಸಭೆಯೊಂದಕ್ಕೆ ಕರೆಸಿ ಹಲವರ ಸಮ್ಮುಖದಲ್ಲಿ ಒತ್ತಡ ಹೇರಲಾಗಿದ್ದು, ಅದರ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ ಎಂದು ಅವರು ಆರೋಪಿಸಿದರು.

ವಕ್ಫ್ ಆಸ್ತಿಗಳನ್ನು ರಕ್ಷಿಸುವುದು ಅಪರಾಧವೇ ಎಂದು ಪ್ರಶ್ನಿಸಿದ ಅವರು, ಈ ಪ್ರಕರಣದಲ್ಲಿ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ ತಮಗೆ ನ್ಯಾಯ ಮತ್ತು ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳನ್ನು ಆಗ್ರಹಿಸಿದರು.

Related Articles

Leave a Reply

Your email address will not be published. Required fields are marked *

Back to top button