ಅಪರಾಧ
ಸಂಗಾರೆಡ್ಡಿಯಲ್ಲಿ ಹೃದಯವಿದ್ರಾವಕ ಘಟನೆ: 18 ದಿನದ ಮಗುವನ್ನು ನೆಲಕ್ಕೆ ಎಸೆದು ಕೊಂದ ತಂದೆ ಬಂಧನ
ದಾಂಪತ್ಯ ಕಲಹದ ನಡುವೆ ಅಮಾನವೀಯ ಕೃತ್ಯ; ತಲೆಗೆ ಗಂಭೀರ ಗಾಯವಾಗಿ ಶಿಶು ಸಾವು

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಜೋಗಿಪೇಟ್ ಪಟ್ಟಣದಲ್ಲಿ ದಾಂಪತ್ಯ ಕಲಹದ ನಡುವೆ ತಂದೆಯೇ ತನ್ನ 18 ದಿನದ ಗಂಡು ಮಗುವನ್ನು ನೆಲಕ್ಕೆ ಎಸೆದು ಕೊಂದಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ವಾಸವಿ ನಗರ ನಿವಾಸಿಗಳಾದ ಕೃಷ್ಣ ಮತ್ತು ಗೌರಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇತ್ತೀಚೆಗಷ್ಟೇ ಅವರಿಗೆ ಗಂಡು ಮಗು ಜನಿಸಿತ್ತು.
ಶನಿವಾರ ಬೆಳಿಗ್ಗೆ ಕೋಪಗೊಂಡ ಕೃಷ್ಣ, ಕೇವಲ 18 ದಿನದ ಮಗುವಿನ ಕಾಲುಗಳನ್ನು ಹಿಡಿದು ನೆಲಕ್ಕೆ ಬಲವಾಗಿ ಎಸೆದಿದ್ದಾನೆ. ಪರಿಣಾಮ ಮಗುವಿನ ತಲೆಗೆ ಗಂಭೀರ ಗಾಯಗಳಾಗಿವೆ.
ತಕ್ಷಣ ಮಗುವನ್ನು ಸಂಗಾರೆಡ್ಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರು ಪರೀಕ್ಷಿಸಿ ಮಗು ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿದೆ ಎಂದು ಘೋಷಿಸಿದರು.
ಘಟನೆಯ ಬಳಿಕ ಪೊಲೀಸರು ಆರೋಪಿ ಕೃಷ್ಣನನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.



