ರಾಜಕೀಯ

ಮಂಕಾಳ ವೈದ್ಯ, ಗಾಯತ್ರಿ ಶಾಂತೇಗೌಡರಿಗೆ ಸಚಿವ ಸ್ಥಾನ ನೀಡದಿದ್ದರೆ ರಾಜ್ಯವ್ಯಾಪಿ ಹೋರಾಟ: ಅವಣ್ಣ ಮಾಕೇರಿ ಎಚ್ಚರಿಕೆ

ಕೋಳಿ-ಕಬ್ಬಲಿಗ ಹಾಗೂ ಕುರುಬ ಸಮುದಾಯದ ನಾಯಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಒತ್ತಾಯ

ಕಲಬುರಗಿ, ಆ.4: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಕೋಳಿ-ಕಬ್ಬಲಿಗ ಸಮುದಾಯದ ಭಟ್ಕಳ ಕ್ಷೇತ್ರದ ಶಾಸಕ ಮಂಕಾಳ ವೈದ್ಯ ಹಾಗೂ ಕುರುಬ ಸಮುದಾಯದ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರಿಗೆ ಸಚಿವ ಸ್ಥಾನ ನೀಡದಿರುವುದು ಸಮುದಾಯಗಳಿಗೆ ಮಾಡಿದ ಅನ್ಯಾಯವಾಗಿದೆ. ಕೂಡಲೇ ಇಬ್ಬರಿಗೂ ಸಚಿವ ಸ್ಥಾನ ನೀಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಜಿಲ್ಲಾ ಕೋಳಿ-ಕಬ್ಬಲಿಗ ಸಮನ್ವಯ ಸಮಿತಿ ಮುಖಂಡ ಅವಣ್ಣ ಮಾಕೇರಿ ಎಚ್ಚರಿಕೆ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಪದೇ ಪದೇ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು. ಹಿಂದೆ ಮುಖ್ಯಮಂತ್ರಿ ಹುದ್ದೆಯ ವಿಚಾರದಲ್ಲೂ ಹಿಂದುಳಿದ ವರ್ಗದ ನಾಯಕರಿಗೆ ಅನ್ಯಾಯ ಮಾಡಲಾಗಿದೆ. ಇದೀಗ ಸಚಿವ ಸಂಪುಟದಲ್ಲೂ ಸಮುದಾಯದ ಪ್ರಾತಿನಿಧ್ಯವನ್ನು ಕಡೆಗಣಿಸಿರುವುದು ಖಂಡನೀಯ ಎಂದು ಹೇಳಿದರು.

ರಾಜ್ಯದ ಸುಮಾರು 92 ಕ್ಷೇತ್ರಗಳಲ್ಲಿ ಕೋಳಿ-ಕಬ್ಬಲಿಗ ಸಮುದಾಯ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಹಿಂದಿನ ಸರ್ಕಾರಗಳಲ್ಲಿ ಕೃಷ್ಣಮೂರ್ತಿ, ಮನೋರಮಾ ಮಧ್ವರಾಜ್, ಬಾಬುರಾವ ಚಿಂಚನಸೂರ್, ಡಿ.ಡಿ. ಜಯಕುಮಾರ್, ದೇವೇಂದ್ರಪ್ಪ ಘಾಳಪ್ಪ, ಮಂಕಾಳ ವೈದ್ಯ ಸೇರಿದಂತೆ ಸಮುದಾಯದ ಪ್ರತಿನಿಧಿಗಳಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡಲಾಗುತ್ತಿತ್ತು. ಆದರೆ ಈ ಬಾರಿ ಸಮುದಾಯದ ಪ್ರಾತಿನಿಧ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಬಾಬುರಾವ ಚಿಂಚನಸೂರ್ ಅವರಿಗೂ ಸಚಿವ ಸ್ಥಾನ ನೀಡದೆ ಅವಮಾನ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಅದೇ ರೀತಿಯ ನಡೆ ಅನುಸರಿಸಿರುವುದು ಸಮುದಾಯಕ್ಕೆ ಮಾಡಿದ ದ್ರೋಹವಾಗಿದೆ. ಆದ್ದರಿಂದ ಮಂಕಾಳ ವೈದ್ಯ ಅವರಿಗೆ ತಕ್ಷಣ ಸಚಿವ ಸ್ಥಾನ ನೀಡಬೇಕು. ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.

ಮಹಿಳಾ ಸಬಲೀಕರಣ ಮತ್ತು ಮಹಿಳಾ ಮೀಸಲಾತಿಯ ಬಗ್ಗೆ ಮಾತನಾಡುವ ಸರ್ಕಾರವೇ ಮಹಿಳಾ ನಾಯಕರಿಗೆ ಸಚಿವ ಸಂಪುಟದಲ್ಲಿ ಸಮರ್ಪಕ ಸ್ಥಾನ ನೀಡಿಲ್ಲ. ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಸಚಿವರ ಪಟ್ಟಿಯಲ್ಲಿ ಉಲ್ಲೇಖಿಸಿ ನಂತರ ಕೈಬಿಟ್ಟಿರುವುದು ಮಹಿಳೆಯರು ಹಾಗೂ ಕುರುಬ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದು ಆರೋಪಿಸಿದರು.

ಗಾಯತ್ರಿ ಶಾಂತೇಗೌಡ ಅವರಿಗೆ ಸಚಿವ ಸ್ಥಾನ ನೀಡಿ ಮಹಿಳೆಯರು ಹಾಗೂ ಕುರುಬ ಸಮುದಾಯಕ್ಕೆ ಗೌರವ ಸಲ್ಲಿಸಬೇಕು. ಜೊತೆಗೆ ಮಂಕಾಳ ವೈದ್ಯ ಅವರಿಗೂ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಿ ಸಮುದಾಯದ ಆಶಯಕ್ಕೆ ಸ್ಪಂದಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬಸವರಾಜ ಪಪ್ಪಣಗೋಳ, ಬಸವರಾಜ ಬೂದಿಹಾಳ, ಶಾಂತಪ್ಪ ಕೂಡಿ, ಸಾಯಬಣ್ಣ ಜಾಲಗಾರ್, ಪ್ರೇಮ್ ಕೋಳಿ, ಚಂದ್ರಕಾಂತ ಕಿರಸಾವಳಗಿ, ಬಸವರಾಜ ಗುಂಡಲಗೇರಿ, ಪ್ರವೀಣ ಜಮಾದಾರ್, ಸಂತೋಷ ತಳವಾರ, ಸಂತೋಷ ಗುಂಬ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button