ಉದ್ಯೋಗರಾಜ್ಯಶಿಕ್ಷಣ

ಆಗಸ್ಟ್ 2ರಂದು ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆ: ಅಕ್ರಮಕ್ಕೆ ಬ್ರೇಕ್, 40 ಕೇಂದ್ರಗಳಲ್ಲಿ ಬಿಗಿ ಭದ್ರತೆ

30 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ; ಸಿಸಿಟಿವಿ, ವೆಬ್‌ಕಾಸ್ಟಿಂಗ್ ಹಾಗೂ 200 ಮೀಟರ್ ನಿಷೇಧಾಜ್ಞೆಯೊಂದಿಗೆ ಕಟ್ಟೆಚ್ಚರ

ಕಲಬುರಗಿ, ಜು.29: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದ ಕರ್ನಾಟಕ ಪೊಲೀಸ್ ಇಲಾಖೆಯ ಸಿವಿಲ್ ಪೊಲೀಸ್ ಪೇದೆ ಹುದ್ದೆಗಳ ನೇಮಕಾತಿಗಾಗಿ ಆಗಸ್ಟ್ 2ರಂದು ಕಲಬುರಗಿ ನಗರದ 40 ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ. ಪರೀಕ್ಷೆಯನ್ನು ಯಾವುದೇ ಅಕ್ರಮಕ್ಕೆ ಅವಕಾಶ ನೀಡದೆ ಶಾಂತಿಯುತ ಹಾಗೂ ನ್ಯಾಯಸಮ್ಮತವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಇಕ್ರಂ ಶರೀಫ್ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬೆಳಗಿನ ಅವಧಿಯ ಪರೀಕ್ಷೆಗೆ 15,702 ಹಾಗೂ ಮಧ್ಯಾಹ್ನದ ಅವಧಿಯ ಪರೀಕ್ಷೆಗೆ 14,370 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮೂಲಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವಂತೆ ನಿರ್ದೇಶಿಸಿದರು.

ಪರೀಕ್ಷೆಗೆ ಮುನ್ನವೇ ಕೇಂದ್ರಗಳ ಮುಖ್ಯಸ್ಥರು ಕೊಠಡಿಗಳಲ್ಲಿನ ಗಾಳಿ, ಬೆಳಕು, ವಿದ್ಯುತ್ ವ್ಯವಸ್ಥೆ, ಮೇಜು-ಕುರ್ಚಿಗಳ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ಅಭ್ಯರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.

ಪರೀಕ್ಷೆ ಸುಗಮವಾಗಿ ನಡೆಯಲು ಪ್ರತಿ ಕೇಂದ್ರಕ್ಕೆ ವೀಕ್ಷಕರು ಹಾಗೂ ಜಾಗೃತ ದಳದ ಸದಸ್ಯರನ್ನು ನಿಯೋಜಿಸಲಾಗಿದ್ದು, ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳ ಸುರಕ್ಷಿತ ಸಾಗಾಟಕ್ಕಾಗಿ ವಿಶೇಷ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪ್ರಶ್ನೆ ಪತ್ರಿಕೆಗಳ ಸಾಗಾಟವನ್ನು ಬಿಗಿ ಭದ್ರತೆಯಲ್ಲಿ ನಡೆಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್, ಬ್ಲೂಟೂತ್, ಮೈಕ್ರೋಚಿಪ್, ಗಡಿಯಾರ, ಇಯರ್‌ಫೋನ್, ಪೇಜರ್, ಕ್ಯಾಲ್ಕುಲೇಟರ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳು ಹಾಗೂ ಪಠ್ಯ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅಲ್ಲದೆ, ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪರೀಕ್ಷೆಯ ಸಂಪೂರ್ಣ ಪ್ರಕ್ರಿಯೆ ಸಿಸಿಟಿವಿ ಕಣ್ಗಾವಲು ಹಾಗೂ ವೆಬ್‌ಕಾಸ್ಟಿಂಗ್ ಮೂಲಕ ಮೇಲ್ವಿಚಾರಣೆಯಲ್ಲಿರಲಿದೆ. ಪ್ರಶ್ನೆ ಪತ್ರಿಕೆ ತೆರೆಯುವ ಕ್ಷಣದಿಂದ ಪರೀಕ್ಷೆ ಮುಕ್ತಾಯವಾಗುವವರೆಗೆ ಪ್ರತಿಯೊಂದು ಹಂತವನ್ನು ದಾಖಲಿಸಲಾಗುತ್ತದೆ. ಯಾವುದೇ ಅಕ್ರಮ ಅಥವಾ ಅಹಿತಕರ ಘಟನೆ ನಡೆದರೆ ಸಂಬಂಧಿತ ಪರೀಕ್ಷಾ ಕೇಂದ್ರದ ಮುಖ್ಯಸ್ಥರೇ ಹೊಣೆಗಾರರಾಗಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ನಗರ ಪೊಲೀಸ್ ಆಯುಕ್ತ ಡಾ. ಎಸ್.ಡಿ. ಶರಣಪ್ಪ ಮಾತನಾಡಿ, ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ಕಾಯ್ದೆ-2024ರ ಪ್ರಕಾರ ಪರೀಕ್ಷೆಯಲ್ಲಿ ಅಕ್ರಮ ನಡೆಸಿದರೆ ಅಥವಾ ಸಹಕರಿಸಿದರೆ ಐದು ವರ್ಷಗಳವರೆಗೆ ಶಿಕ್ಷೆ ವಿಧಿಸುವ ಅವಕಾಶವಿದೆ. ಇತ್ತೀಚಿನ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳ ಹಿನ್ನೆಲೆಯಲ್ಲಿ ಶಿಕ್ಷೆಯನ್ನು 10 ವರ್ಷಗಳವರೆಗೆ ಹೆಚ್ಚಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿರುವುದರಿಂದ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಬೇಕು ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅಭ್ಯರ್ಥಿಗಳ ಉಡುಪು ನಿಯಮಗಳ ಕುರಿತು ಮಾಹಿತಿ ನೀಡಿ, ಧಾರ್ಮಿಕ ಭಾವನೆಗೆ ಧಕ್ಕೆಯಾಗದ ರೀತಿಯಲ್ಲಿ ಫ್ರಿಸ್ಕಿಂಗ್ ನಡೆಸಬೇಕು ಎಂದರು. ಅಭ್ಯರ್ಥಿಗಳು ಉದ್ದ ತೋಳಿನ ಉಡುಪು, ಕಿವಿ, ತಲೆ ಅಥವಾ ಮುಖ ಮುಚ್ಚುವ ಉಡುಪುಗಳನ್ನು ಧರಿಸಬಾರದು. ಮೂಗುತಿ ಮತ್ತು ಮಂಗಳಸೂತ್ರ ಹೊರತುಪಡಿಸಿ ಯಾವುದೇ ಆಭರಣ ಅಥವಾ ಲೋಹದ ವಸ್ತುಗಳನ್ನು ಧರಿಸಲು ಅವಕಾಶ ಇರುವುದಿಲ್ಲ. ಶೂ ಧರಿಸಲು ಅನುಮತಿ ಇಲ್ಲದಿದ್ದು, ಕಡಿಮೆ ಹಿಮ್ಮಡಿಯ ಸ್ಯಾಂಡಲ್ ಧರಿಸಬಹುದು. ಎಐ ಆಧಾರಿತ ಮುಖ ಗುರುತಿನ ಪರಿಶೀಲನೆಯ ಬಳಿಕವೇ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರ ಪ್ರವೇಶ ನೀಡಲಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಡಿಸಿಪಿ ಶಾಲು, ಶಾಲಾ ಶಿಕ್ಷಣ (ಪದವಿ ಪೂರ್ವ) ಉಪನಿರ್ದೇಶಕ ದೇವನಗೌಡ ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button