₹10 ಸಾವಿರ ಲಂಚ ಸ್ವೀಕರಿಸುತ್ತಿದ್ದ ಎಪಿಪಿ ಲೋಕಾಯುಕ್ತ ಬಲೆಗೆ
ನ್ಯಾಯಾಲಯದ ಪ್ರಕರಣದ ಕೆಲಸ ಪೂರ್ಣಗೊಳಿಸಲು ನಗದು ಜೊತೆಗೆ ಉಡುಗೊರೆಗಳ ಬೇಡಿಕೆ ಆರೋಪ; ಕಲಬುರಗಿಯಲ್ಲಿ ಕಾರ್ಯಾಚರಣೆ

ಕಲಬುರಗಿಯ 5ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ (ಎಪಿಪಿ) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂತೋಷ್ ಕುಮಾರ್ ಲೋಕಾಂಡೆ ಅವರು ₹10 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ರಾಹುಲ್ ಹೈದರಾಬಾದ್ ಅವರ ನ್ಯಾಯಾಲಯದ ಪ್ರಕರಣಕ್ಕೆ ಸಂಬಂಧಿಸಿದ ಬಾಕಿ ಕೆಲಸವನ್ನು ಪೂರ್ಣಗೊಳಿಸುವುದಾಗಿ ಹೇಳಿ, ಆರೋಪಿಯು ₹10,000 ನಗದು ಲಂಚದ ಜೊತೆಗೆ 9 ಸೀರೆಗಳು, 4 ಶರ್ಟ್‌ಗಳು, 4 ಜೀನ್ಸ್ ಪ್ಯಾಂಟ್‌ಗಳು, ಒಂದು ಜೋಡಿ ಶೂ, 4 ಮಹಿಳೆಯರ ಉಡುಪುಗಳು ಹಾಗೂ 6 ಜೋಡಿ ಮಹಿಳೆಯರ ಚಪ್ಪಲಿಗಳನ್ನು ಅಕ್ರಮವಾಗಿ ಬೇಡಿಕೆ ಇಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಅರುಣ್ ಕುಮಾರ್ ಅವರ ನೇತೃತ್ವದ ತಂಡ ಶುಕ್ರವಾರ ನ್ಯಾಯಾಲಯ ಸಂಕೀರ್ಣದ ಸಮೀಪ ಬಲೆ ಬೀಸಿ, ₹10 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಪಿಪಿಯನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿತು.
ಆರೋಪಿಯ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆಯನ್ನು ಲೋಕಾಯುಕ್ತ ಪೊಲೀಸರು ಮುಂದುವರಿಸಿದ್ದಾರೆ.



