‘ಸ್ವಯಂಘೋಷಿತ ಅಧ್ಯಕ್ಷ’ ಟೀಕೆಗೆ ದೇವೇಂದ್ರ ದೇಸಾಯಿ ತಿರುಗೇಟು
ವೈಯಕ್ತಿಕ ಟೀಕೆ ಬಿಟ್ಟು ಪ್ರಶ್ನೆಗಳಿಗೆ ಉತ್ತರ ನೀಡಿ; ಸಮಾಜದ ಹಿತಕ್ಕಾಗಿ ಹೋರಾಟ ಮುಂದುವರಿಯಲಿದೆ ಎಂದ ದೇಸಾಯಿ

ತಮ್ಮನ್ನು ‘ಸ್ವಯಂಘೋಷಿತ ಅಧ್ಯಕ್ಷ’ ಎಂದು ಟೀಕಿಸಿರುವವರ ವಿರುದ್ಧ ವಿಶ್ವಕರ್ಮ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರು ತಿರುಗೇಟು ನೀಡಿದ್ದು, ವೈಯಕ್ತಿಕವಾಗಿ ಟೀಕಿಸುವ ಬದಲು ತಾವು ಎತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿಶ್ವಕರ್ಮ ಸಮಾಜದ ಹೆಸರಿನಲ್ಲಿ ನಡೆಯುವ ಎಲ್ಲ ಕಾರ್ಯಗಳಲ್ಲಿ ಪಾರದರ್ಶಕತೆ, ನಿಯಮಬದ್ಧತೆ ಹಾಗೂ ಎಲ್ಲರಿಗೂ ಸಮಾನ ಅವಕಾಶ ಇರಬೇಕು ಎಂಬುದೇ ತಮ್ಮ ನಿಲುವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
“ನಾನು ಯಾವುದೇ ವ್ಯಕ್ತಿ ಅಥವಾ ಸಂಘಟನೆಯನ್ನು ಗುರಿಯಾಗಿಸಿಕೊಂಡು ಮಾತನಾಡಿಲ್ಲ. ಸಮಾಜದ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಪ್ರಶ್ನೆಗಳನ್ನು ಕೇಳುವುದು ಪ್ರತಿಯೊಬ್ಬ ಸಮಾಜಮುಖಂಡನ ಜವಾಬ್ದಾರಿಯಾಗಿದೆ. ಪ್ರಶ್ನೆಗಳಿಗೆ ಉತ್ತರ ನೀಡುವ ಬದಲು ವೈಯಕ್ತಿಕ ಟೀಕೆ ಮಾಡುವುದು ಸರಿಯಾದ ಕ್ರಮವಲ್ಲ” ಎಂದು ಅವರು ತಿಳಿಸಿದ್ದಾರೆ.
ವಿಶ್ವಕರ್ಮ ಸಮಾಜಕ್ಕೆ ಮಂಜೂರಾಗಿದೆ ಎಂದು ಹೇಳಲಾಗುತ್ತಿರುವ ಸಿಎ ನಿವೇಶನ ವಾಸ್ತವವಾಗಿ ವಿಶ್ವಕರ್ಮ ನೌಕರರ ಸಂಘಕ್ಕೆ ಮಂಜೂರಾಗಿದ್ದು, ಅದನ್ನು ಇಡೀ ವಿಶ್ವಕರ್ಮ ಸಮಾಜಕ್ಕೆ ಮಂಜೂರಾಗಿದೆ ಎಂಬ ರೀತಿಯಲ್ಲಿ ಬಿಂಬಿಸುವುದು ತಪ್ಪು ಎಂದು ಅವರು ಹೇಳಿದ್ದಾರೆ. ಸಮಾಜದ ಹೆಸರಿನಲ್ಲಿ ಗೊಂದಲ ಸೃಷ್ಟಿಸದೆ ಸತ್ಯಾಂಶವನ್ನು ಸಾರ್ವಜನಿಕರ ಮುಂದೆ ಇಡಬೇಕು ಎಂದು ಒತ್ತಾಯಿಸಿದ್ದಾರೆ.
ವಿಶ್ವಕರ್ಮ ಸಮಾಜದ ಅಭಿವೃದ್ಧಿಗಾಗಿ ಎಲ್ಲ ಸಂಘಟನೆಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಭಿನ್ನಾಭಿಪ್ರಾಯಗಳಿದ್ದರೆ ಸಂವಾದದ ಮೂಲಕ ಪರಿಹರಿಸಿಕೊಳ್ಳಬೇಕು. ವೈಯಕ್ತಿಕ ಆರೋಪ-ಪ್ರತ್ಯಾರೋಪಗಳಿಂದ ಸಮಾಜದಲ್ಲಿ ಅನಗತ್ಯ ಗೊಂದಲ ಮತ್ತು ವಿಭಜನೆ ಉಂಟು ಮಾಡಬಾರದು ಎಂದು ದೇವೇಂದ್ರ ದೇಸಾಯಿ ಅಭಿಪ್ರಾಯಪಟ್ಟಿದ್ದಾರೆ.



