ಮರಕ್ಕೆ ಜೀವ ತುಂಬುವ ಶಿಲ್ಪಿ ಚಿದಾನಂದ ವಿಶ್ವಕರ್ಮ: ಅಪರೂಪದ ಕಲಾವಿದನ ಬದುಕಿನ ಪಯಣ
ಸಾವಿರಾರು ಮರದ ಶಿಲ್ಪಗಳ ಮೂಲಕ ಸಂಸ್ಕೃತಿಯನ್ನು ಉಳಿಸಿರುವ ಜೆವರ್ಗಿ ತಾಲ್ಲೂಕಿನ ಪ್ರತಿಭಾವಂತ ಕಲಾವಿದ

ಕಲೆ ಎಂಬುದು ಕೇವಲ ಶಿಕ್ಷಣದಿಂದ ಬರುವುದಲ್ಲ, ಅದು ಮನಸ್ಸಿನ ಆಳದಿಂದ ಹೊರಹೊಮ್ಮುವ ದೈವಿಕ ಪ್ರೇರಣೆ. ಅಂತಹ ಅಪರೂಪದ ಪ್ರತಿಭೆಯಾಗಿ ಜೆವರ್ಗಿ ತಾಲ್ಲೂಕಿನ ಮಂದೇವಾಳ ಗ್ರಾಮದ ಚಿದಾನಂದ ವಿಶ್ವಕರ್ಮ ಗುರುತಿಸಿಕೊಂಡಿದ್ದಾರೆ ಎಂದು ಡಾ. ಧರ್ಮಣ್ಣ ಕೆ. ಬಡಿಗೇರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಕ್ಷರಜ್ಞಾನ ಕಡಿಮೆಯಿದ್ದರೂ ತಮ್ಮ ಅದ್ಭುತ ಕೈಚಳಕದಿಂದ ಮರದ ತುಂಡುಗಳಿಗೆ ಜೀವ ತುಂಬುವ ಶಿಲ್ಪಿಯಾಗಿ ಚಿದಾನಂದ ವಿಶ್ವಕರ್ಮ ಹೆಸರು ಮಾಡಿದ್ದಾರೆ. ಅವರ ಕೈಯಲ್ಲಿ ಸಾಮಾನ್ಯ ಮರದ ತುಂಡುಗಳು ದೇವರು–ದೇವತೆಗಳ ಸುಂದರ ಮೂರ್ತಿಗಳಾಗಿ ರೂಪುಗೊಳ್ಳುತ್ತವೆ. ಅವರ ಪ್ರತಿಯೊಂದು ಶಿಲ್ಪದಲ್ಲೂ ಭಕ್ತಿ, ಭಾವನೆ ಮತ್ತು ಸೂಕ್ಷ್ಮ ಕಲಾತ್ಮಕತೆ ಸ್ಪಷ್ಟವಾಗಿ ಕಾಣಿಸುತ್ತದೆ.
‘ಶ್ರೀ ಸಿದ್ಧ ಶಂಕರ ಕರಕುಶಲ ಕಾರ್ಮಿಕರು’ ಸಂಸ್ಥೆಯ ಮೂಲಕ ಹಲವು ವರ್ಷಗಳಿಂದ ಶಿಲ್ಪಕಲೆಯಲ್ಲಿ ತೊಡಗಿಸಿಕೊಂಡಿರುವ ಅವರು ಜಿಲ್ಲೆಯ ಅನೇಕ ದೇವಸ್ಥಾನಗಳಿಗೆ ಪಲ್ಲಕ್ಕಿ, ರಥ, ದೇವರ ಮೂರ್ತಿಗಳು ಸೇರಿದಂತೆ ಹಲವು ಕಲಾಕೃತಿಗಳನ್ನು ನಿರ್ಮಿಸಿ ನೀಡಿದ್ದಾರೆ. ಇದುವರೆಗೆ ಸುಮಾರು 2,200 ಪಲ್ಲಕ್ಕಿಗಳು, 11 ರಥಗಳು, 10 ಉಚ್ಚಾಯಿ ರಥಗಳು, 150ಕ್ಕೂ ಹೆಚ್ಚು ದೇವರ ಮೂರ್ತಿಗಳು, 200ಕ್ಕೂ ಹೆಚ್ಚು ಮರದ ಬಾಗಿಲುಗಳು, 25 ಉತ್ಸವ ರಥಗಳು ಹಾಗೂ ಅನೇಕ ದೇವಾಲಯಗಳ ಶಿಲ್ಪಕೃತಿಗಳನ್ನು ನಿರ್ಮಿಸಿ ತಮ್ಮ ಕಲಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ದೇವಾಲಯಗಳಷ್ಟೇ ಅಲ್ಲದೆ ಮನೆಗಳ ಬಾಗಿಲು, ಕಿಟಕಿ, ದೇವರ ಕೋಣೆ, ಕಪಾಟು ಹಾಗೂ ಅಲಂಕಾರಿಕ ಮರದ ಕೆತ್ತನೆಗಳಲ್ಲಿಯೂ ಅವರ ಕಲೆ ಮಿಂಚಿದೆ. ಗ್ರಾಮೀಣ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಈ ಕಲಾಕೃತಿಗಳು ಅವರ ವಿಶಿಷ್ಟ ಪ್ರತಿಭೆಗೆ ಸಾಕ್ಷಿಯಾಗಿವೆ.
ಚಿದಾನಂದ ವಿಶ್ವಕರ್ಮ ಉತ್ತಮ ಶಿಲ್ಪಿ ಮಾತ್ರವಲ್ಲ, ಭಜನೆ, ಜನಪದ ಗೀತೆಗಳು, ತತ್ವಪದಗಳು ಹಾಗೂ ಶ್ಲೋಕಗಳನ್ನು ಸುಂದರವಾಗಿ ಹಾಡುವ ಗಾಯಕನೂ ಆಗಿದ್ದಾರೆ. ಆದರೆ ಅಪಾರ ಪ್ರತಿಭೆಯಿದ್ದರೂ ಸೂಕ್ತ ಪ್ರಚಾರದ ಕೊರತೆಯಿಂದ ಅವರ ಕಲೆ ರಾಜ್ಯ ಮಟ್ಟದಲ್ಲಿ ಹೆಚ್ಚಿನ ಗುರುತನ್ನು ಪಡೆಯಲಿಲ್ಲ. ಕೆಲವೊಮ್ಮೆ ಮಾಡಿದ ಕೆಲಸಕ್ಕೆ ತಕ್ಕ ಸಂಭಾವನೆಯೂ ದೊರೆಯದೆ ಸಂಕಷ್ಟ ಅನುಭವಿಸಿರುವುದಾಗಿ ತಿಳಿದುಬಂದಿದೆ.
ಸರಳ ಜೀವನ ನಡೆಸುತ್ತಿರುವ ಚಿದಾನಂದ ವಿಶ್ವಕರ್ಮ ಅವರು ಭವಿಷ್ಯದಲ್ಲಿ ಕಾಳಿಕಾದೇವಿ ಹಾಗೂ ಸಿದ್ಧಲಿಂಗ ಯತಿಗಳ ದೇವಾಲಯ ನಿರ್ಮಾಣದ ಕನಸನ್ನು ಹೊಂದಿದ್ದಾರೆ. ಇಂತಹ ಅಪರೂಪದ ಗ್ರಾಮೀಣ ಕಲಾವಿದರಿಗೆ ಸರ್ಕಾರ, ಸಂಘ–ಸಂಸ್ಥೆಗಳು ಹಾಗೂ ಸಮಾಜ ಸೂಕ್ತ ಪ್ರೋತ್ಸಾಹ ನೀಡಿದರೆ ನಮ್ಮ ಸಾಂಸ್ಕೃತಿಕ ಪರಂಪರೆ ಇನ್ನಷ್ಟು ಶ್ರೀಮಂತವಾಗಲಿದೆ ಎಂದು ಡಾ. ಧರ್ಮಣ್ಣ ಕೆ. ಬಡಿಗೇರ ಅಭಿಪ್ರಾಯಪಟ್ಟಿದ್ದಾರೆ.



