ಆರ್ಟಿಐ ಹೆಸರಿನಲ್ಲಿ ಬ್ಲಾಕ್ ಮೇಲ್: ಭೂಮಾಪನ ಸಿಬ್ಬಂದಿ ತಹಸಿಲ್ದಾರ್ಗೆ ದೂರು

ಚಿತ್ತಾಪುರ, ಸೆ.೧೦- ಆರ್ಟಿಐ ಅರ್ಜಿಗಳ ಮೂಲಕ ಕೆಲವು ವ್ಯಕ್ತಿಗಳು ತಮಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಭೂಮಾಪನ ಸಿಬ್ಬಂದಿ ತಹಸಿಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ದೂರು ಸಲ್ಲಿಸಿದರು.ನಾಲವಾರ ಗ್ರಾಮದ ವಿಶ್ವನಾಥ ಚಂದನಕೇರಿ, ಅರುಣಕುಮಾರ್ ಪಟಶೆಟ್ಟಿ ಸೇರಿ ಕೆಲವು ಸಾರ್ವಜನಿಕರು (ಮಧ್ಯವರ್ತಿಗಳು) ನಮಗೆ ನಿರಂತರವಾಗಿ ದೂರವಾಣಿ ಕರೆ ಮಾಡುವ ಮೂಲಕ ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಜೀವ ಬೆದರಿಕೆ ಹಾಕುತ್ತಿದ್ದಾರೆ. ಅನಗತ್ಯವಾಗಿ ಆರ್ಟಿಐ ಅರ್ಜಿಗಳನ್ನು ಸಲ್ಲಿಸಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆನ್ನು ದುರುಪಯೋಗಪಡಿಸಿಕೊಂಡು ನೆಮ್ಮದಿ ಹಾಳು ಮಾಡುತ್ತಿದ್ದಾರೆ. ಬ್ಲಾಕ್ ಮೇಲ್ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ರಾಜ್ಯ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ನೌಕರರ ಸಂಘದ ತಾಲ್ಲೂಕು ಶಾಖೆಯ ಪದಾಧಿಕಾರಿಗಳು ಒತ್ತಾಯಿಸಿದರು.ಪರವಾನಗಿ ಭೂಮಾಪಕರಾಗಿ ನಮ್ಮ ಕರ್ತವ್ಯವನ್ನು ಕಾನೂನುಬದ್ದವಾಗಿ ನಿರ್ವಹಿಸುತ್ತಿದ್ದೇವೆ. ಆದರೂ ಕೆಲವು ದಿನಗಳಿಂದ ಕೆಲವು ವ್ಯಕ್ತಿಗಳು ಆಧಾರರಹಿತ ಮತ್ತು ಅನವಶ್ಯಕ ದೂರುಗಳನ್ನು ನೀಡುವುದಲ್ಲದೆ, ಕಚೇರಿಯ ಕೆಲಸದ ವೇಳೆ ಅನಗತ್ಯ ಗಲಾಟೆ ಮಾಡುವುದು, ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ.
ಈ ರೀತಿಯ ಘಟನೆಗಳು ಸರ್ಕಾರಿ ಕಚೇರಿಯಲ್ಲಿ ನಿರಂತರವಾಗಿ ನಡೆಯುತ್ತಿವೆ. ನಮ್ಮ ಎಲ್ಲ ಸಿಬ್ಬಂದಿ ಬೆದರಿಕೆಗೆ ಒಳಗಾಗುತ್ತಿದ್ದಾರೆ. ಇದರಿಂದಾಗಿ ಕಚೇರಿಯ ದೈನಂದಿನ ಸರ್ಕಾರಿ ಕೆಲಸಗಳಿಗೆ ಅಡಚಣೆಯಾಗುತ್ತಿದೆ. ಆದ್ದರಿಂದ ಬ್ಲಾಕ್ ಮೇಲ್ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಚೇರಿಯ ಕೆಲಸಗಳು ಮುಕ್ತವಾಗಿ ಮತ್ತು ಶಾಂತಿಯುತವಾಗಿ ನಿರ್ವಹಿಸಲು ಅನುವು ಮಾಡಿಕೊಡಬೇಕು ಎಂದು ಅವರು ಕೋರಿದರು.
ಈ ಸಂದರ್ಭದಲ್ಲಿ ಸರ್ಕಾರಿ ಭೂ ಮಾಪಕಾರ ಸಂಘದ ತಾಲ್ಲೂಕು ಅಧ್ಯಕ್ಷ ಆಂಜನೇಯ ನಾಯ್ಕೋಡಿ, ಪರವಾನಿಗಿ ಭೂ ಮಾಪಕರ ಸಂಘದ ಅಧ್ಯಕ್ಷ ಅರುಣಕುಮಾರ ಶಂಭವದ, ಸಚಿನ್ ಭೈರಡಗಿ, ಮಲ್ಲಿಕಾರ್ಜುನ, ಜ್ಯೋತಿ, ಮಧುಸೂಧನ್ ರಾಠೋಡ್, ವೆಂಕಟೇಶ್, ಸದಾಶಿವರೆಡ್ಡಿ, ರಮೇಶ್, ಜಗಲಿ, ವಿನೋದ್ ಸಾಹುಕಾರ್ ಮುಂತಾದವರು ಉಪಸ್ಥಿತರಿದ್ದರು.



