ಜೆಸ್ಕಾ ಎಇಇ ಯಲಾಲ್ ಮನೆ, ಕಚೇರಿ ಮೇಲೆ ಲೋಕಾಯುಕ್ತರ ದಾಳಿ

ಕಲಬುರ್ಗಿ, ಜು.೮- ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪೆನಿ ಲಿಮಿಟೆಡ್ (ಜೆಸ್ಕಾಂ)ನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಅಮೃತ್‌ರಾವ್ ಯಲಾಲ್ ಅವರಿಗೆ ಸಂಬoಧಿಸಿದ ಆರು ಸ್ಥಳಗಳ ಮೇಲೆ ಕರ್ನಾಟಕ ಲೋಕಾಯುಕ್ತ ಪೊಲೀಸರು ಬುಧವಾರ ಏಕಕಾಲದಲ್ಲಿ ದಾಳಿ ನಡೆಸಿದರು.
ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿದ್ಧರಾಜು ಸಿ. ಅವರ ಮಾರ್ಗದರ್ಶನದಲ್ಲಿ ಆರು ತಂಡಗಳು ಕಾರ್ಯಾಚರಣೆ ನಡೆಸಿದ್ದು, ನಗರದ ಜಾಗೃತಿ ಕಾಲೋನಿಯಲ್ಲಿರುವ ನಿವಾಸ, ಮೂಲ ಊರಾದ ಚಿಂಚೋಳಿ ತಾಲ್ಲೂಕಿನ ಸುಲೇಪೇಟೆಯ ಮನೆ, ಬಸವ ಅಪಾರ್ಟ್ಮೆಂಟ್‌ನಲ್ಲಿರುವ ಸುಮಾರು ೪೦ ಫ್ಲ್ಯಾಟ್‌ಗಳು, ಕೊತ್ತಂಬರಿ ಲೇಔಟ್‌ನ ಜೆಸ್ಕಾಂ ಕಚೇರಿ, ಮಾವನ ಮನೆ ಹಾಗೂ ಸೇಡಂ ರಸ್ತೆಯ ಜಾಗೃತಿ ಕಾಲೋನಿಯಲ್ಲಿರುವ ಫೇಬರ್ ಪ್ಲಾಟಿನಂ ಸ್ಟುಡಿಯೋ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯ ಮುಂದುವರಿದಿದೆ.
ಎಲ್ಲ ಸ್ಥಳಗಳಲ್ಲಿ ದಾಖಲೆಗಳು, ೨೦ ಎಕರೆಗಿಂತಲೂ ಹೆಚ್ಚು ಜಮೀನು, ಆಸ್ತಿ ವಿವರಗಳು ಮತ್ತು ಹಣಕಾಸು ವ್ಯವಹಾರಗಳ ಕುರಿತು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ. ಪ್ರಕರಣಕ್ಕೆ ಸಂಬoಧಿಸಿದoತೆ ಹೆಚ್ಚಿನ ಮಾಹಿತಿ ತನಿಖೆ ಪೂರ್ಣಗೊಂಡ ಬಳಿಕ ಲಭ್ಯವಾಗಲಿದೆ.



