ರಾಜಕೀಯ

ಹೊನ್ನಳ್ಳಿ–ಶುಕ್ರವಾಡಿ ಅನಧಿಕೃತ ರಸ್ತೆ ಕಾಮಗಾರಿ ಆರೋಪ; ಶಾಸಕ ಬಿ.ಆರ್. ಪಾಟೀಲ ವಿರುದ್ಧ ಮಹೇಶ್ವರಿ ವಾಲಿ ವಾಗ್ದಾಳಿ

ರೈತರ ಜಮೀನಿನಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘಿಸಿ ರಸ್ತೆ ನಿರ್ಮಾಣ ಆರೋಪ; ಸಮಗ್ರ ತನಿಖೆಗೆ ಆಗ್ರಹ

ಕಲಬುರಗಿ, ಜುಲೈ ೧೩: ಹೊನ್ನಳ್ಳಿ ಗ್ರಾಮದ ಸರ್ವೆ ಸಂಖ್ಯೆ ೧೪/೩, ೧೭ ಹಾಗೂ ೨೯ರಲ್ಲಿ ಅನಧಿಕೃತವಾಗಿ ರಸ್ತೆ ಕಾಮಗಾರಿ ನಡೆಸಲಾಗುತ್ತಿದ್ದು, ಇದರ ಹಿಂದೆ ಶಾಸಕ ಬಿ.ಆರ್. ಪಾಟೀಲ ಅವರ ಕೈವಾಡವಿದೆ ಎಂದು ಜನತಾ ದಳ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಮಹೇಶ್ವರಿ ವಾಲಿ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊನ್ನಳ್ಳಿ ಗ್ರಾಮದ ರೈತರ ಜಮೀನಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ರೈತರ ತೀವ್ರ ವಿರೋಧದ ನಡುವೆಯೂ ರಸ್ತೆ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದಾರೆ. ಸ್ಥಳಕ್ಕೆ ಪೊಲೀಸ್ ಸಿಬ್ಬಂದಿಯನ್ನು ಕರೆಸಿ ಒತ್ತಡ ಹೇರುವ ಮೂಲಕ ಕಾಮಗಾರಿ ಮುಂದುವರಿಸಲಾಗುತ್ತಿದೆ ಎಂದು ದೂರಿದರು.

ಈ ಕಾಮಗಾರಿ ವಿರುದ್ಧ ರೈತರು ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯವು ರೈತರ ಪರವಾಗಿ ತಡೆಯಾಜ್ಞೆ ನೀಡಿದೆ. ಇದಕ್ಕೂ ಮೊದಲು ಸಹ ರೈತರ ಜಮೀನಿನಲ್ಲಿ ರಸ್ತೆ ನಿರ್ಮಿಸದಂತೆ ನ್ಯಾಯಾಲಯ ಆದೇಶ ನೀಡಿದ್ದರೂ, ಅದನ್ನು ಉಲ್ಲಂಘಿಸಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಕೆಲವರು ನ್ಯಾಯಾಲಯಕ್ಕೆ ಅಪೂರ್ಣ ಮಾಹಿತಿ ನೀಡಿ ಅನುಕೂಲಕರ ಆದೇಶ ಪಡೆದಿರುವುದಾಗಿ ಆರೋಪಿಸಿದ ಅವರು, ಗ್ರಾಮದ ನಕ್ಷೆಯಲ್ಲಿ ರಸ್ತೆ ಇಲ್ಲದಿದ್ದರೂ ಅಧಿಕಾರಿಗಳ ಸಹಕಾರದಿಂದ ರೈತರ ಭೂಮಿಯಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ಹೊನ್ನಳ್ಳಿಯಿಂದ ಶುಕ್ರವಾಡಿಗೆ ತೆರಳಲು ಈಗಾಗಲೇ ಪರ್ಯಾಯ ಮಾರ್ಗ ಲಭ್ಯವಿದ್ದು, ಹೊಸ ರಸ್ತೆ ನಿರ್ಮಾಣದ ಅವಶ್ಯಕತೆ ಇಲ್ಲ. ಆದರೂ ಕೆಲವು ಪ್ರಭಾವಿ ವ್ಯಕ್ತಿಗಳ ಅನುಕೂಲಕ್ಕಾಗಿ ರೈತರ ಜಮೀನನ್ನು ಬಳಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ದೂರಿದರು.

ಈ ಭಾಗದಲ್ಲಿ ಗಾಳಿ ವಿದ್ಯುತ್ ಯೋಜನೆಗೆ ಸಂಬಂಧಿಸಿದ ಕಾರ್ಯಗಳಿಗಾಗಿ ರಸ್ತೆ ನಿರ್ಮಿಸಲಾಗುತ್ತಿದೆ. ಇದರಿಂದ ಕೆಲವರಿಗೆ ವೈಯಕ್ತಿಕ ಲಾಭವಾಗಲಿದ್ದು, ಅದರ ಉದ್ದೇಶದಿಂದಲೇ ಬಡ ರೈತರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದರು.

ರಸ್ತೆಗೆ ಭೂಮಿ ನೀಡದಿದ್ದರೆ ಸಾಮಾಜಿಕ ಬಹಿಷ್ಕಾರ ಹಾಕುವುದಾಗಿ ಹಾಗೂ ಜಮೀನಿನ ಬಳಕೆಗೆ ಅಡ್ಡಿಪಡಿಸುವುದಾಗಿ ಕೆಲವರು ಬೆದರಿಕೆ ಹಾಕುತ್ತಿದ್ದಾರೆ ಎಂದು ಮಹೇಶ್ವರಿ ವಾಲಿ ಆರೋಪಿಸಿದರು. ಪ್ರಕರಣದ ಕುರಿತು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ರೈತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button