ಜಿಲ್ಲಾಸುದ್ದಿ

ಜಿಲ್ಲಾ‌ ಪ್ರಗತಿ ಪರಿಶೀಲನಾ ಸಭೆ:ಬಿತ್ತನೆಗೆ ಕ್ರಿಯಾ ಯೋಜನೆ ರೂಪಿಸಿಕೊಳ್ಳಿ-ಪಂಕಜ ಕುಮಾರ ಪಾಂಡೆ

ಕಲಬುರಗಿ,ಜು,4-ಪ್ರಸ್ತುತ ಮುಂಗಾರು ಋತುವಿನಲ್ಲಿ ಇದೂವರೆಗೆ ಬಿತ್ತನೆಗೆ ಪೂರಕವಾಗಿ ಮಳೆ ಬಾರದ ಕಾರಣ‌ ಬರದ ಛಾಯೆ ಆವರಿಸಿದ್ದು, ಮುಂದಿನ ದಿನದಲ್ಲಿ ಮಳೆಯ ಆಶಾಭಾವನೆ ಹೊಂದಿ ಬಿತ್ತನೆಗೆ ಪೂರಕವಾಗಿ ಕ್ರಿಯಾ ಯೋಜನೆ ರೂಪಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸಿಬ್ಬಂದಿ‌ ಮತ್ತು ಅಡಳಿತ ಸುಧಾರಣಾ ಇಲಾಖೆ (ಆಡಳಿತ) ಸರ್ಕಾರದ ಕಾರ್ಯದರ್ಶಿ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯದರ್ಶಿ ಪಂಕಜ ಕುಮಾರ ಪಾಂಡೆ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ‌ ಸಭೆ ನಡೆಸಿದ ಅವರು, ಬಿತ್ತನೆಗೆ ಪೂರಕವಾಗಿ ಬೀಜ ಮತ್ತು ರಸಗೊಬ್ಬರ ಕೊರತೆಯಾಗದಂತೆ ಅಧಿಕಾರಿಗಳು ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳುವಂತೆಯೂ ಸೂಚಿಸಿದರು.

ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ಹಳ್ಳಿಗೆ ಭೇಟಿ ನೀಡಿ ರೈತರ ಅಹವಾಲು ಆಲಿಸಬೇಕು. ಮಳೆ ಇಲ್ಲದ ಕಾರಣ ಕಂಗಾಲಿಗಿರುವ ರೈತರಿಗೆ ಧೈರ್ಯ ತುಂಬುವಂತಹ ಕೆಲಸವಾಗಬೇಕು. ಮಾರುಕಟ್ಟೆಯಲ್ಲಿ ಬೀಜ, ರಸಗೊಬ್ಬರ ಕೃತಕ ಅಭಾವ ಸೃಷ್ಠಿಯಾಗದಂತೆ ನೋಡಿಕೊಳ್ಳಬೇಕು ಎಂದು ಪಂಕಜ್ ಕುಮಾರ ಪಾಂಡೆ ನಿರ್ದೇಶನ ನೀಡಿದರು.

ಜಿಲ್ಲೆಯ ವಿವಿಧ ಜಲಾಶಯಗಳ ಸ್ಥಿತಿಗತಿ ಅವಲೋಕಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಮುಂದಿನ ದಿನದಲ್ಲಿ ಮಳೆ ಬಾರದೆ‌ ಹೋದಲ್ಲಿ ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಸಹ ಮಾಡಿಟ್ಟುಕೊಳ್ಳಬೇಕು. ಬಾವಿ, ಕೊಳವೆ ಬಾವಿ ಜಲಮೂಲಗಳ ನೆರವಿನಿಂದ ನೀರು ಪೂರೈಕೆ ಮಾಡಬೇಕು. ಕಲಬುರಗಿ ನಗರಕ್ಕೆ ನೀರು ಪೂರೈಕೆಗೆ ನಾರಾಯಣಪುರ ಜಲಾಶಯದಿಂದ ನೀರು ಹರಿಸಬೇಕು. ಜನ ಮತ್ತು ಜಾನುವಾರುಗಳಿಗೆ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಜಾನುವಾರುಗಳಿಗೆ ಬೇಕಾದ ಮೇವು ಸಹ ದಾಸ್ತಾನು ಮಾಡಬೇಕು. ಕಲಬುರಗಿ ನಗರದ ಕುಡಿಯುವ ನೀರಿನ ಸಮಸ್ಯೆ ಇದ್ದ ಕಡೆ ಟ್ಯಾಂಕರ್ ಮೂಲಕ ಪೂರೈಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸೂಚನೆ ಕೊಟ್ಟರು.

ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಮಾತನಾಡಿ ನಗರದ ಜನತೆಗೆ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕೆ ನಾರಾಯಣಪುರ ಜಲಾಶಯದಿಂದ ನೀರು ತರುವ ಪೈಪ್ ಲೈನ್ ಕಾಮಗಾರಿಯ 1,850 ಕೋಟಿ ರೂ. ಮೊತ್ತದ ಯೋಜನೆ ಡಿ.ಪಿ.ಆರ್ ಸಿದ್ಧವಾಗಿದೆ. ಪ್ರಸಕ್ತ ನಗರದಲ್ಲಿ ನೀರಿನ ಸಮಸ್ಯೆ ಇದ್ದ ವಾರ್ಡ್ ನಲ್ಲಿ ಪ್ರತಿ ದಿನ 160 ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.

ಜಂಟಿ ಕೃಷಿ ನಿರ್ದೇಶಕ‌ ಸಮದ್ ಪಟೇಲ್ ಮಾತನಾಡಿ ಜಿಲ್ಲೆಯಾದ್ಯಂತ 80,840 ಹೆಕ್ಟೇರ್ ನೀರಾವರಿ ಮತ್ತು 8,09,793 ಹೆಕ್ಟೇರ್ ಮಖೆಯಾಶ್ರಿತ ಪ್ರದೇಶದಲ್ಲಿ ಪ್ರಸಕ್ತ ಖಾರೀಫ್ ನಲ್ಲಿ ಬಿತ್ತನೆ ಗುರಿ ಹೊmದಲಾಗಿದ್ದರು, ಮಳೆ ಕೊರತೆಯಿಂದ ಕೇವಲ ಶೇ.30ರಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ಜಿಲ್ಲೆಯ ಹಲವು ತಾಲೂಕಿನಲ್ಲಿ ಬಿತ್ತನೆಗೆ ಬೇಕಾದ ಮಳೆ ಇನ್ನು ಬಂದಿಲ್ಲ. ಭತ್ತ, ಉದ್ದು, ತೊಗರಿ, ಹೆಸರು, ಸೋಯಾ ಅವರೆ, ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ ಬೆಳೆಗಳ ಬಿತ್ತನೆಗೆ ಈಗಾಗಲೆ 20,301 ಕ್ವಿಂಟಾಲ್ ವಿತರಿಸಿದ್ದು, ಇನ್ನು 6,395 ಕ್ವಿಂಟಾಲ್ ದಾಸ್ತಾನಿದೆ. ಅದೇ‌ ರೀತಿ 45,935 ಮೆಟ್ರಿಕ್ ಟನ್ ರಸಗೊಬ್ಬರ ವಿತರಿಸಿದ್ದು, 33,725 ಮೆ.ಟನ್ ಇನ್ನು ಸ್ಟಾಕ್ ಇದೆ ಎಂದರು.

ಇನ್ನು ಡಿ.ಎ.ಪಿ ಸೇರಿದಂತೆ ಎಲ್ಲಾ ರೀತಿಯ ರಸಗೊಬ್ಬರ ಅನ್ಯ ರಾಜ್ಯಕ್ಕೆ ಮಾರಾಟವಾಗದಂತೆ ಜಿಲ್ಲೆಯ ಗಡಿ ಚೆಕ್‌ ಪೋಸ್ಟ್ ನಲ್ಲಿಯೂ ನಿಗಾ ವಹಿಸಿದೆ. ಮಾರುಕಟ್ಟೆಯಲ್ಲಿ ರೈತರಿಗೆ‌ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟವಾಗದಂತೆ ಅಧಿಕಾರಿಗಳ ತಂಡ ಸತತವಾಗಿ ಕೃಷಿ ಪರಿಕರ ಅಂಗಡಿಗಳ ಮೇಲೆ ದಾಳೆ ಮಾಡಿ ಪರಿಶೀಲಿಸಲಾಗುತ್ತಿದೆ. ಇದೂವರೆಗೆ 168 ಅಂಗಡಿಗಳ ಮೇಲೆ‌ ದಾಳಿ ಮಾಡಿ 51 ಅಂಗಡಿಗೆ ನೋಟಿಸ್ ನೀಡಿದಲ್ಲದೆ ನಿಯಮ ಉಲ್ಲಂಘಿಸಿದ 4 ಅಂಗಡಿಗಳ ಪರವಾನಿಗೆ ರದ್ದುಪಡಿಸಿದೆ ಎಂದರು.

ಅಪರ ಜಿಲ್ಕಾಧಿಕಾರಿ ರಾಯಪ್ಪ ಹುಣಸಗಿ ಮಾತನಾಡಿ ಕಂದಾಯ ಇಲಾಖೆಯ ಪ್ರಗತಿ ವಿವರಿಸುತ್ತಾ, ಭೂ ಸೂರಕ್ಷಾ ಅಯೋಜನೆಯಡಿ ಎಲ್ಲಾ 11 ತಾಲೂಕಿನ ಕಂದಾಯ ದಾಖಲೆಗಳು ಗಣಕೀಕರಣ ಮಾಡಿದ್ದು, ಸಾರ್ವಜನಿಕರಿಗೆ ಗಣಕೀಕೃತ ದಾಖಲೆ ನೀಡಲಾಗುತ್ತಿದೆ. ಕಂದಾಯ ನ್ಯಾಯಲಯದ ಮೂಲಕ ಪ್ರಕರಣದ‌ ವಿಲೇವಾರಿ ತ್ವರಿತಗೊಳಿಸಿದೆ. ಪಹಣಿಗೆ ಆಧಾರ್ ಸೀಡಿಂಗ್ ಕಾರ್ಯ ಶೇ.84.87 ರಷ್ಟು ಪೂರ್ಣಗೊಳಿಸಿದೆ. ಲ್ಯಾಂಡ್ ಬೀಟ್ ಕಾರ್ಯಕ್ರಮದಡಿ 43,061 ಸರ್ಕಾರಿ ಜಮೀನುಗಳನ್ನು ಗುರುತಿಸಿ ಜಿಯೋ ಫೆನ್ಸಿಂಗ್ ಮಾಡಲಾಗಿದೆ ಎಂದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ್ ಕುಮಾರ ಪಾಂಡೆ ಮಾತನಾಡಿ ಮುಂದಿನ ದಿನದಲ್ಲಿ ಎ.ಐ. ತಂತ್ರಜ್ಞಾನ ಬಳಸಿ ಸ್ಯಾಟಲೈಟ್ ಫೋಟೊ ನೆರವಿನಿಂದ ಸರ್ಕಾರಿ ಜಮೀನು ಒತ್ತುವರಿಯಾದಲ್ಲಿ ಕೂಡಲೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡುವ ಕಾರ್ಯಕ್ರಮ ರಾಜ್ಯ ಸರ್ಕಾರ ಹಮ್ಮಿಕೊಳ್ಳುತ್ತಿದ್ದು, ಅದಕ್ಕೆ ಇದೂ ಪೂರಕವಾಗಲಿದೆ ಶೇ.100ರಷ್ಟು ಇದರಲ್ಲಿ ಪ್ರಗತಿ ಸಾಧಿಸಿ ಎಂದರು.

ಕಲಬುರಗಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಿರುವುದರಿಂದ ಇದರ ಪ್ರಯೋಜನ ಪಡೆದುಕೊಂಡು ಹೆಚ್ಚಿನ ಕೈಗಾರಿಕೆ ಹೂಡಿಕೆಗೆ ಲ್ಯಾಂಡ್ ಬ್ಯಾಂಕ್ ಗುರುತಿಸಿಡಬೇಕು. ಇಲ್ಲಿ ವಿಮಾನ‌ ನಿಲ್ದಾಣ ಇದೆ, ಸೂರತ್-ಚೆನ್ನೈ ಕಾರಿಡಾರ್ ಬರುತ್ತಿದೆ. ಎನ್.ಹೆಚ್ ಗಳಿವೆ. ಇವೆಲ್ಲದರ ಪ್ರಯೋಜನ ಪಡೆಯಬೇಕು. ಇನ್ನು ಕೈಗಾರಿಕೆಗಳಿಗೆ ಸಂಸ್ಕರಣ ನೀರು ಬಳಸಿದಲ್ಲಿ ಕೈಗಾರಿಕೆಗಳಿಗೆ ನೀರಿನ ಮಸ್ಯೆ ಸಹ ತಲೆದೋರದು ಎಂದರು.

ಇದೇ‌ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ್ ಕುಮಾರ ಪಾಂಡೆ ಅವರು ಕೃಷಿ ಇಲಾಖೆಯ ಪ್ರಧಾನಮಂತ್ರಿ ಫಸಲ್‌ಬಿಮಾ ಯೋಜನೆಯ ಪೋಸ್ಟರ್ ಬಿಡುಗಡೆಗೊಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ಜಿಲ್ಲಾ ಪಂಚಾಯತ್ ಸಿ.ಇ.ಓ ರಾಹುಲ್ ಸಂಕನುರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಣ್ಮಣ ಶೃಂಗೇರಿ, ಸಹಾಯಕ ಆಯುಕ್ತರಾದ ಸಾಹಿತ್ಯ ಆಲದಕಟ್ಟಿ, ಪ್ರಭುರೆಡ್ಡಿ, ತೋಟಗಾರಿಕೆ ಜಂಟಿ ನಿರ್ದೇಶಕ ಸಂತೋಷ ಇನಾಂದಾರ, ಡಿ.ಡಿ.ಪಿ.ಐ ಶಂಕ್ರಮ್ಮ ಢವಳಗಿ, ಡಿ.ಎಚ್.ಓ ಡಾ.ಶರಣಬಸಪ್ಪ ಕ್ಯಾತನಾಳ, ಡಿ.ಐ.ಸಿ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸಂಜಯ್ ರೆಡ್ಡಿ, ಸಣ್ಣ ನೀರಾವರಿ, ಕೆ.ಎನ್.ಎನ್.ಎಲ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button