ರಾಜಗೀರ ಕ್ರಾಸ್–ತಡಪಳ್ಳಿ ರಸ್ತೆ ಕಾಮಗಾರಿ ಕಳಪೆ: ತನಿಖೆಗೆ ಡಿಎಸ್ಎಸ್ ಆಗ್ರಹ
₹1.50 ಕೋಟಿ ವೆಚ್ಚದ ಕಾಮಗಾರಿ ಗುಣಮಟ್ಟ ಪರಿಶೀಲಿಸಿ ಕ್ರಮಕ್ಕೆ ಒತ್ತಾಯ

ಬೀದರ್, ಜು.20: ತಾಲೂಕಿನ ರಾಜಗೀರ ಕ್ರಾಸ್ನಿಂದ ತಡಪಳ್ಳಿ ಗ್ರಾಮಕ್ಕೆ ಸಂಪರ್ಕಿಸುವ 2 ಕಿಲೋಮೀಟರ್ ಉದ್ದದ ರಸ್ತೆ ಡಾಂಬರೀಕರಣ ಕಾಮಗಾರಿ ಕಳಪೆ ಗುಣಮಟ್ಟದಿಂದ ನಡೆಯುತ್ತಿದ್ದು, ತಕ್ಷಣ ತಾಂತ್ರಿಕ ತನಿಖೆ ನಡೆಸಿ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹಾಗೂ ದಲಿತ ಕಲಾ ಮಂಡಳಿಯ ಶಿವರಾಜ ತಡಪಳ್ಳಿ ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ರಾಜಗೀರ ಕ್ರಾಸ್–ತಡಪಳ್ಳಿ ರಸ್ತೆಯನ್ನು ಈ ಹಿಂದೆ ವಿವಿಧ ಅವಧಿಗಳಲ್ಲಿ ಹಲವು ಬಾರಿ ನಿರ್ಮಾಣ ಹಾಗೂ ದುರಸ್ತಿ ಮಾಡಲಾಗಿದ್ದರೂ, ಪ್ರತಿ ಬಾರಿಯೂ ಕಳಪೆ ಕಾಮಗಾರಿ ನಡೆಸಿ ಸಾರ್ವಜನಿಕ ಹಣ ದುರುಪಯೋಗ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ಮಾಜಿ ಶಾಸಕ ಅಶೋಕ್ ಖೇಣಿ, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಅಪ್ರೋಜ್ ಖಾನ್ ಅವರ ಅವಧಿಯಲ್ಲಿಯೂ ಇದೇ ರಸ್ತೆಯ ಕಾಮಗಾರಿ ಕೈಗೊಳ್ಳಲಾಗಿತ್ತು. ಪ್ರಸ್ತುತ ದಕ್ಷಿಣ ಕ್ಷೇತ್ರದ ಶಾಸಕ ಶೈಲೇಂದ್ರ ಬೆಳ್ಳಾಳೆ ಅವರ ಅವಧಿಯಲ್ಲಿ 2025–26ನೇ ಸಾಲಿನಲ್ಲಿ 5 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದ್ದು, ಇದೀಗ ಮತ್ತೊಮ್ಮೆ ₹1.50 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಆದರೆ, ಕಾಮಗಾರಿಯ ಗುಣಮಟ್ಟ ತೀರಾ ಕಳಪೆಯಾಗಿದ್ದು, ಈ ರಸ್ತೆಗೆ ಇದುವರೆಗೆ ಸುಮಾರು 3 ರಿಂದ 4 ಕೋಟಿ ರೂಪಾಯಿ ವೆಚ್ಚವಾಗಿರಬಹುದು ಎಂದು ಅವರು ಆರೋಪಿಸಿದರು.
ಹೀಗಾಗಿ ₹1.50 ಕೋಟಿ ವೆಚ್ಚದ ರಸ್ತೆ ಕಾಮಗಾರಿಯನ್ನು ತಾಂತ್ರಿಕವಾಗಿ ಪರಿಶೀಲಿಸಿ ಗುಣಮಟ್ಟದ ಕಾಮಗಾರಿ ಖಚಿತಪಡಿಸಬೇಕು. ಅಲ್ಲದೆ, ಒಂದೇ ರಸ್ತೆಗೆ ಪದೇ ಪದೇ ಅನುದಾನ ಮಂಜೂರು ಮಾಡಿ ಕಳಪೆ ಕಾಮಗಾರಿ ನಡೆಸುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು ಎಂದು ಅವರು ಆಗ್ರಹಿಸಿದರು.



