ಕಲಬುರಗಿಗೆ 24×7 ನೀರು ಯೋಜನೆ: ಜೂನ್ 2027ರೊಳಗೆ ಕಾಮಗಾರಿ ಪೂರ್ಣಗೊಳಿಸಲು ಎಲ್ & ಟಿಗೆ ಸಚಿವರ ಗಡುವು
ನಿರಂತರ ಕುಡಿಯುವ ನೀರು ಯೋಜನೆ ವಿಳಂಬಕ್ಕೆ ಸಚಿವ ಯತೀಂದ್ರ ಸಿದ್ದರಾಮಯ್ಯ ಅಸಮಾಧಾನ; ಗುಣಮಟ್ಟ, ವೇಗ ಹಾಗೂ ಜನಸೇವೆಗೆ ಆದ್ಯತೆ ನೀಡುವಂತೆ ಸೂಚನೆ

ಕಲಬುರಗಿ: ಮಹಾನಗರಕ್ಕೆ 24×7 ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆಯ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಮತ್ತಷ್ಟು ವಿಳಂಬ ಮಾಡದೆ 2027ರ ಜೂನ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಎಲ್ & ಟಿ ಕಂಪನಿಗೆ ಕಟ್ಟುನಿಟ್ಟಿನ ಗಡುವು ನೀಡಿದರು.
ನಗರದ ಜಲಭವನದಲ್ಲಿ ಸೋಮವಾರ ನಡೆದ ಮಹಾನಗರ ಪಾಲಿಕೆ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಕೆ.ಯು.ಐ.ಡಿ.ಎಫ್.ಸಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ನಾಲ್ಕು ಬಾರಿ ಕಾಲಾವಕಾಶ ವಿಸ್ತರಣೆ ನೀಡಿದರೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಬಾರಿ ಯಾವುದೇ ಕಾರಣಕ್ಕೂ ಗಡುವು ವಿಸ್ತರಿಸುವುದಿಲ್ಲ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಕಂಪನಿ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರಸ್ತುತ 55 ವಾರ್ಡ್ಗಳ ಪೈಕಿ 62,767 ಮನೆಗಳಲ್ಲಿ ಕೇವಲ 30,907 ಮನೆಗಳಿಗೆ ಮಾತ್ರ ಹೊಸ ನೀರಿನ ಸಂಪರ್ಕ ಕಲ್ಪಿಸಲಾಗಿದ್ದು, ಉಳಿದ 31,860 ಮನೆಗಳಿಗೆ ಶೀಘ್ರವೇ ಸಂಪರ್ಕ ನೀಡಬೇಕು ಎಂದು ಸೂಚಿಸಿದರು. ಕಾಮಗಾರಿಯಲ್ಲಿ ಯಾವುದೇ ರೀತಿಯ ಕಳಪೆ ಗುಣಮಟ್ಟಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಮೇಯರ್ ವರ್ಷಾ ರಾಜೀವ ಜಾನೆ ಮಾತನಾಡಿ, ಕಾಮಗಾರಿಗೆ ವೇಗ ನೀಡುವ ಬದಲು ಎಲ್ & ಟಿ ಕಂಪನಿ ಇತ್ತೀಚೆಗೆ ಸುಮಾರು 50 ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿರುವುದರಿಂದ ಕಾಮಗಾರಿ ಇನ್ನಷ್ಟು ವಿಳಂಬವಾಗಿದೆ ಎಂದು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೂಡಲೇ ಆ ಸಿಬ್ಬಂದಿಯನ್ನು ಮರುನೇಮಕ ಮಾಡಿ ಕಾಮಗಾರಿ ವೇಗಗೊಳಿಸುವಂತೆ ಕಂಪನಿ ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಪ್ರಸ್ತುತ ಯೋಜನೆ ನಗರದ ‘ಎ’ ಸ್ಕೀಮ್ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದು, ‘ಬಿ’ ಸ್ಕೀಮ್ ವ್ಯಾಪ್ತಿಯ ಸುಮಾರು 35 ಸಾವಿರ ಮನೆಗಳಿಗೆ ನಿರಂತರ ನೀರು ಪೂರೈಸಲು ಭೀಮಾ-ಬೆಣ್ಣೆತೋರಾ ಜಲಮೂಲ ಸಾಕಾಗುವುದಿಲ್ಲ ಎಂದರು. ನಗರಕ್ಕೆ ಪೂರೈಸುತ್ತಿರುವ ಭೀಮಾ ನದಿಯ ನೀರು ಕಲುಷಿತವಾಗಿರುವುದರಿಂದ ನಾರಾಯಣಪುರ ಜಲಾಶಯದಿಂದ ₹1,850 ಕೋಟಿ ವೆಚ್ಚದ ಹೊಸ ಯೋಜನೆ ಅನುಮೋದಿಸಿದರೆ ಶುದ್ಧ ಕುಡಿಯುವ ನೀರನ್ನು ಎಲ್ಲಾ ವಾರ್ಡ್ಗಳಿಗೆ ಪೂರೈಸಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ನಗರದಲ್ಲಿ 40 ವರ್ಷ ಹಳೆಯ ಒಳಚರಂಡಿ ವ್ಯವಸ್ಥೆಯಿಂದ ಎಲ್ಲೆಡೆ ಸೋರಿಕೆ ಉಂಟಾಗುತ್ತಿದ್ದು, ಸುಮಾರು 700 ಕಿಲೋಮೀಟರ್ ಉದ್ದದ ಹೊಸ ಒಳಚರಂಡಿ ಜಾಲ ನಿರ್ಮಾಣ ಅಗತ್ಯವಿದೆ ಎಂದು ಶಾಸಕರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಯೋಜನೆಯ ಸಮಗ್ರ ಪ್ರಸ್ತಾವನೆ ಸಿದ್ಧಪಡಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಮಾತನಾಡಿ, ಕಾಮಗಾರಿ ವಿಳಂಬ ಹಿನ್ನೆಲೆಯಲ್ಲಿ ಎಲ್ & ಟಿ ಕಂಪನಿಗೆ ಇದುವರೆಗೆ ₹54 ಕೋಟಿ ದಂಡ ವಿಧಿಸಲಾಗಿದೆ ಎಂದು ತಿಳಿಸಿದರು. ಪ್ರಸ್ತುತ ಬರ ಪರಿಸ್ಥಿತಿಯಲ್ಲಿ 35 ಟ್ಯಾಂಕರ್ಗಳ ಮೂಲಕ ಪ್ರತಿದಿನ 150 ಟ್ರಿಪ್ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು. ಆದರೆ ಟ್ಯಾಂಕರ್ಗಳ ಸಂಖ್ಯೆ ಸಾಲುತ್ತಿಲ್ಲ ಎಂಬ ಶಾಸಕರು ಹಾಗೂ ಮೇಯರ್ ಅವರ ಮನವಿಗೆ ಸ್ಪಂದಿಸಿದ ಸಚಿವರು, ಹೆಚ್ಚುವರಿ ಟ್ಯಾಂಕರ್ಗಳನ್ನು ನಿಯೋಜಿಸಿ ನೀರು ಪೂರೈಕೆಯನ್ನು ವಿಸ್ತರಿಸುವಂತೆ ಸೂಚಿಸಿದರು.
ಸಭೆಯಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ, ಅಮೃತ್ 2.0 ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ನಗರಕ್ಕೆ ಪೂರೈಕೆ ಆಗುವ 102 ಎಂಎಲ್ಡಿ ನೀರನ್ನು ಸಂಪೂರ್ಣ ಶುದ್ಧೀಕರಿಸಿ ಮಾತ್ರ ವಿತರಿಸಬೇಕು, ಭೀಮಾ ನದಿಗೆ ಚರಂಡಿ ನೀರು ಸೇರುವುದನ್ನು ತಡೆಯಬೇಕು ಹಾಗೂ ಬರ ಪರಿಸ್ಥಿತಿಯಲ್ಲಿ ಯಾವುದೇ ಪ್ರದೇಶಕ್ಕೆ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಅಗತ್ಯವಿದ್ದಲ್ಲಿ ಟ್ಯಾಂಕರ್ ಮತ್ತು ಕೊಳವೆಬಾವಿಗಳ ಮೂಲಕ ನೀರು ಪೂರೈಸಬೇಕು ಎಂದು ಸಚಿವರು ಸೂಚಿಸಿದರು.
ಇದೇ ವೇಳೆ ಮನೆಮನೆಗೆ ಕಸ ಸಂಗ್ರಹಣೆ ವೇಳೆ ಶೇ.100ರಷ್ಟು ಕಸ ವಿಂಗಡಣೆ ಕಡ್ಡಾಯಗೊಳಿಸಿ, ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವಂತೆ ಸೂಚಿಸಿದ ಅವರು, ಬೀದಿ ನಾಯಿಗಳಿಗಾಗಿ ಆಶ್ರಯ ಕೇಂದ್ರ ಸ್ಥಾಪಿಸುವಂತೆ ಪಾಲಿಕೆಗೆ ನಿರ್ದೇಶನ ನೀಡಿದರು.
ಸಾರ್ವಜನಿಕರಿಗೆ ಇ-ಖಾತೆ ಸೇರಿದಂತೆ ವಿವಿಧ ನಾಗರಿಕ ಸೇವೆಗಳು ಸುಲಭವಾಗಿ ದೊರೆಯಬೇಕು, ದೂರುಗಳ ಪರಿಹಾರಕ್ಕಾಗಿ ಸಮರ್ಪಕ ವ್ಯವಸ್ಥೆ ರೂಪಿಸಬೇಕು ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಗಳನ್ನು ಮಾಸಿಕವಾಗಿ ನಡೆಸಿ ಬಾಕಿ ಯೋಜನೆಗಳಿಗೆ ವೇಗ ನೀಡಬೇಕು ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.



