ಜಿಲ್ಲಾಸುದ್ದಿ

ಸದೃಢ ಆರೋಗ್ಯದಿಂದ ಸಮೃದ್ಧ ಜೀವನ ಸಾಧ್ಯ: ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ, ಸೆ.18: ಒತ್ತಡದ ಜೀವನಶೈಲಿಯಿಂದಾಗಿ ಇಂದು ಜನರು ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡುತ್ತಿಲ್ಲ. ಇದರ ಪರಿಣಾಮವಾಗಿ ದೇಶದಲ್ಲಿ ಅನೇಕರು ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಸದೃಢ ಆರೋಗ್ಯವನ್ನು ಕಾಪಾಡಿಕೊಂಡರೆ ಮಾತ್ರ ಸಮೃದ್ಧ ಜೀವನ ನಡೆಸಲು ಸಾಧ್ಯ ಎಂದು ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.

ನಗರದ ಹೊರವಲಯದಲ್ಲಿರುವ ಕೋಟನೂರ ಮಠದ ಸಿದ್ಧಶ್ರೀ ದಿವೈನ್ ಪ್ಯಾಲೇಸ್‌ನಲ್ಲಿ ಷಡಕ್ಷರಿ ಶಿವಯೋಗಿ ಸಿದ್ಧರಾಮೇಶ್ವರ ಅವರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯದ ಕುರಿತು ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ನಿಯಮಿತ ಆರೋಗ್ಯ ತಪಾಸಣೆ, ಉತ್ತಮ ಆಹಾರ ಪದ್ಧತಿ ಹಾಗೂ ವ್ಯಾಯಾಮದ ಮೂಲಕ ಹಲವು ಕಾಯಿಲೆಗಳನ್ನು ನಿಯಂತ್ರಿಸಬಹುದು ಎಂದು ಹೇಳಿದರು.

ವಿಶೇಷ ಆಹ್ವಾನಿತರಾಗಿ ಜಿಲ್ಲಾ ಅಂಧತ್ವ ನಿವಾರಣಾ ಕೇಂದ್ರದ ಅಧಿಕಾರಿ ಡಾ. ರವಿಕಾಂತ ಕ್ಯಾತನಾಳ ಮಾತನಾಡಿ, ತಮ್ಮ ಇಲಾಖೆಯಿಂದ ಉಚಿತ ಆರೋಗ್ಯ ಶಿಬಿರಗಳಿಗೆ ಹೆಚ್ಚಿನ ಆರೋಗ್ಯ ಸೇವೆ ಮತ್ತು ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಕಾಂಗ್ರೆಸ್ ಮುಖಂಡ ರವಿ ವಿಭೂತಿಯವರು ಮಾತನಾಡಿ, ಬಡವರಿಗೆ ಉಚಿತ ಆರೋಗ್ಯ ಶಿಬಿರಗಳು ಹೆಚ್ಚಿನ ಪ್ರಯೋಜನ ನೀಡುತ್ತವೆ. ಇಂತಹ ಶಿಬಿರಗಳ ಸದುಪಯೋಗವನ್ನು ಗ್ರಾಮೀಣ ಜನತೆ ಪಡೆದುಕೊಳ್ಳಬೇಕು ಎಂದು ಹೇಳಿದರು.

ಉಚಿತ ಆರೋಗ್ಯ ಶಿಬಿರ ಆಯೋಜಿಸಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಪವನಕುಮಾರ ಬಿ. ವಳಕೇರಿ ಮಾತನಾಡಿ, ಬಡವರ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಯುವಕರು ಗ್ರಾಮೀಣ ಪ್ರದೇಶಗಳ ಜನರ ಆರೋಗ್ಯವನ್ನು ನಿಯಮಿತವಾಗಿ ಪರಿಶೀಲಿಸಲು ನೆರವಾಗಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಮಾತನಾಡಿ, ಮನೆಗಳ ಆವರಣದಲ್ಲಿ ಹೆಚ್ಚಿನ ಔಷಧೀಯ ಸಸ್ಯಗಳನ್ನು ಬೆಳೆಸಬೇಕು. ಭಾರತೀಯರಾದ ನಾವು ಆಯುರ್ವೇದ ಪದ್ಧತಿಯತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್‌ನ ಮುಖ್ಯಸ್ಥೆ ಮಾಲಾ ಕಣ್ಣಿ, ಮಲ್ಲಣ್ಣಗೌಡ ನಂದಿಕೂರ, ಶಿವರಾಜ ದಿಗ್ಗಾವಿ, ರವಿಕಿರಣ ವಳಕೇರಿ, ಸುಶೀಲಕುಮಾರ ಬಿ. ವಳಕೇರಿ, ವೈಭವ ಬಬಲಾದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಯುನೈಟೆಡ್ ಆಸ್ಪತ್ರೆ, ಅಲ್ ಬದರ್ ಡೆಂಟಲ್ ಕಾಲೇಜು ಸೇರಿದಂತೆ ವಿವಿಧ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಶಿಬಿರದಲ್ಲಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button