ಪತ್ರಕರ್ತರ ಕಲ್ಯಾಣ ಸೌಲಭ್ಯ ವಿಸ್ತರಣೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಗುರುರಾಜ್ ಕುಲಕರ್ಣಿ ಮನವಿ
ಆರೋಗ್ಯ, ಪಿಂಚಣಿ, ವಿಮೆ, ಗೃಹ ನಿರ್ಮಾಣ ಹಾಗೂ ಪತ್ರಕರ್ತರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹ

ಕಲಬುರಗಿ, ಜು. 6: ಕರ್ನಾಟಕ ರಾಜ್ಯ ಮಾಧ್ಯಮ ಮಾನ್ಯತಾ ಸಮಿತಿ ಸದಸ್ಯ ಹಾಗೂ ಕನ್ನಡ ಬಂಧು ಕನ್ನಡ ದಿನಪತ್ರಿಕೆಯ ಸಂಪಾದಕರಾದ ಗುರುರಾಜ್ ಕುಲಕರ್ಣಿ ಅವರು ರಾಜ್ಯದ ಮಾನ್ಯತೆ ಪಡೆದ ಪತ್ರಕರ್ತರ ಕಲ್ಯಾಣ ಸೌಲಭ್ಯಗಳನ್ನು ವಿಸ್ತರಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಕರ್ತರು ಸರ್ಕಾರದ ಯೋಜನೆಗಳು, ಜನರ ಸಮಸ್ಯೆಗಳು ಹಾಗೂ ಸಾಮಾಜಿಕ ವಿಚಾರಗಳನ್ನು ನಿಷ್ಪಕ್ಷಪಾತವಾಗಿ ಸಮಾಜದ ಮುಂದೆ ತರುವ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಆದರೆ ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ಪತ್ರಕರ್ತರು ಆರೋಗ್ಯ, ಆರ್ಥಿಕ ಹಾಗೂ ಸಾಮಾಜಿಕ ಭದ್ರತೆಯ ವಿಷಯದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇತರೆ ರಾಜ್ಯಗಳಲ್ಲಿ ಪತ್ರಕರ್ತರಿಗೆ ಕಲ್ಪಿಸಲಾಗುತ್ತಿರುವ ಸೌಲಭ್ಯಗಳನ್ನು ಪರಿಗಣಿಸಿ, ಕರ್ನಾಟಕ ಸರ್ಕಾರವೂ ಪತ್ರಕರ್ತರ ಕಲ್ಯಾಣಕ್ಕಾಗಿ ವಿಶೇಷ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮನವಿಯಲ್ಲಿ ಪತ್ರಕರ್ತರು ಮತ್ತು ಅವರ ಕುಟುಂಬದವರಿಗೆ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಆರೋಗ್ಯ ಸೇವೆ ಜಾರಿಗೊಳಿಸುವುದು, ಹಿರಿಯ ಹಾಗೂ ನಿವೃತ್ತ ಪತ್ರಕರ್ತರ ಪಿಂಚಣಿ ಯೋಜನೆಯನ್ನು ಸರಳೀಕರಿಸಿ ಪಿಂಚಣಿ ಮೊತ್ತ ಹೆಚ್ಚಿಸುವುದು, ವಿಶೇಷ ಆರೋಗ್ಯ, ಜೀವ ಹಾಗೂ ಅಪಘಾತ ವಿಮೆ ಯೋಜನೆಗಳನ್ನು ಜಾರಿಗೆ ತರುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿರಿಸಲಾಗಿದೆ.
ಕರ್ತವ್ಯ ನಿರ್ವಹಣೆಯ ವೇಳೆ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ವಿಶೇಷ ಪರಿಹಾರ ಧನ ಹಾಗೂ ಮಕ್ಕಳಿಗೆ ಶಿಕ್ಷಣ ನೆರವು ನೀಡುವುದು, ಪತ್ರಕರ್ತರಿಗಾಗಿ ಗೃಹ ನಿರ್ಮಾಣ ಯೋಜನೆ, ನಿವೇಶನ ಹಂಚಿಕೆ ಮತ್ತು ಪತ್ರಕರ್ತರ ಕಾಲೋನಿಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದು, ಜಿಲ್ಲಾ ಮಟ್ಟದ ಪತ್ರಕರ್ತರಿಗೂ ಸಮಾನ ಆರೋಗ್ಯ, ಪಿಂಚಣಿ ಹಾಗೂ ಕಲ್ಯಾಣ ಸೌಲಭ್ಯಗಳನ್ನು ವಿಸ್ತರಿಸುವಂತೆ ಮನವಿ ಮಾಡಲಾಗಿದೆ.
ಇದರ ಜೊತೆಗೆ ಪತ್ರಕರ್ತರ ಕಲ್ಯಾಣ ನಿಧಿಯನ್ನು ಹೆಚ್ಚಿಸಿ ತುರ್ತು ವೈದ್ಯಕೀಯ ಹಾಗೂ ಆರ್ಥಿಕ ನೆರವು ವ್ಯವಸ್ಥೆಯನ್ನು ಬಲಪಡಿಸುವುದು, ಪತ್ರಕರ್ತರ ಮೇಲೆ ನಡೆಯುವ ಹಲ್ಲೆ ಮತ್ತು ಬೆದರಿಕೆ ತಡೆಯಲು ಪತ್ರಕರ್ತರ ರಕ್ಷಣಾ ಕಾಯ್ದೆ ಜಾರಿಗೆ ತರುವುದು ಹಾಗೂ ಪತ್ರಕರ್ತರ ಮಕ್ಕಳಿಗೆ ವಿದ್ಯಾರ್ಥಿವೇತನ ಮತ್ತು ಶಿಕ್ಷಣ ನೆರವು ಯೋಜನೆ ಆರಂಭಿಸುವಂತೆ ಸರ್ಕಾರವನ್ನು ಆಗ್ರಹಿಸಲಾಗಿದೆ.
ಸಾಮಾಜಿಕ, ಆರ್ಥಿಕ ಹಾಗೂ ವೃತ್ತಿಪರ ಭದ್ರತೆಯ ದೃಷ್ಟಿಯಿಂದ ಮೇಲ್ಕಂಡ ಬೇಡಿಕೆಗಳನ್ನು ಮಾನವೀಯ ಹಾಗೂ ಪ್ರಜಾಪ್ರಭುತ್ವದ ನೆಲೆಯಲ್ಲಿ ಪರಿಗಣಿಸಿ ಶೀಘ್ರ ಕ್ರಮ ಕೈಗೊಳ್ಳುವಂತೆ ಗುರುರಾಜ್ ಕುಲಕರ್ಣಿ ಅವರು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ವಿನಂತಿಸಿದ್ದಾರೆ.



