ಸಮಾಜ

ಛಾಯಾಗ್ರಾಹಕರ ಕುಟುಂಬಗಳಿಗೆ ಆರ್ಥಿಕ ನೆರವು: ಕೆಪಿಎ ‘ಆಸರೆ’ ಯೋಜನೆ ಜಾರಿ

ಸದಸ್ಯರ ನಿಧನದ ವೇಳೆ ಕುಟುಂಬಕ್ಕೆ ₹1 ಲಕ್ಷ ನೆರವು; ಜೂನ್‌ 1ರಿಂದ ಆಗಸ್ಟ್‌ 19ರವರೆಗೆ ಸದಸ್ಯತ್ವ ಅಭಿಯಾನ

ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಛಾಯಾಗ್ರಾಹಕರ ಸಂಘಗಳ ಸಹಯೋಗದಲ್ಲಿ ಛಾಯಾಗ್ರಾಹಕರ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ಕೆಪಿಎ) ವತಿಯಿಂದ ‘ಕೆಪಿಎ ಆಸರೆ’ ಯೋಜನೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಅಧ್ಯಕ್ಷ ಬಸವರಾಜ ಸಿ. ತೋಟದ ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಯಲ್ಲಿ ಸದಸ್ಯರಾಗಿರುವ ಛಾಯಾಗ್ರಾಹಕರು ನಿಧನರಾದಲ್ಲಿ ಅವರ ಕುಟುಂಬದ ನಾಮಿನಿಗೆ ₹1 ಲಕ್ಷ ಆರ್ಥಿಕ ನೆರವು ನೀಡಲಾಗುವುದು ಎಂದು ಹೇಳಿದರು.

ಯೋಜನೆಯ ಸದಸ್ಯತ್ವ ಪಡೆಯಲು ಅರ್ಜಿದಾರರು ಕರ್ನಾಟಕದ ಛಾಯಾಗ್ರಾಹಕರಾಗಿದ್ದು, ತಮ್ಮ ಸ್ಥಳೀಯ ಛಾಯಾಗ್ರಾಹಕರ ಸಂಘದ ಸದಸ್ಯರಾಗಿರಬೇಕು. ಸದಸ್ಯತ್ವಕ್ಕಾಗಿ ₹110 ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.

ಜೂನ್‌ 1ರಿಂದ ಆಗಸ್ಟ್‌ 19ರವರೆಗೆ ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ ನಡೆಯಲಿದ್ದು, ಕನಿಷ್ಠ 10 ಸಾವಿರ ಛಾಯಾಗ್ರಾಹಕರನ್ನು ಯೋಜನೆಗೆ ಸೇರ್ಪಡೆಗೊಳಿಸುವ ಗುರಿ ಹೊಂದಲಾಗಿದೆ. ಆಗಸ್ಟ್‌ 19ರ ನಂತರ ಯೋಜನೆ ಅಧಿಕೃತವಾಗಿ ಜಾರಿಯಾಗಲಿದ್ದು, ಅಲ್ಲಿಯವರೆಗೆ ಸದಸ್ಯತ್ವ ನೋಂದಣಿ ಮಾತ್ರ ನಡೆಯಲಿದೆ ಎಂದು ಹೇಳಿದರು.

ಯೋಜನೆಯಡಿ ಸದಸ್ಯರೊಬ್ಬರು ನಿಧನರಾದರೆ, ಉಳಿದ ಪ್ರತಿಯೊಬ್ಬ ಸದಸ್ಯರಿಂದ ₹10 ದೇಣಿಗೆ ಸಂಗ್ರಹಿಸಿ, ಆ ಮೊತ್ತವನ್ನು ಕೆಪಿಎ ಆಸರೆ ಯೋಜನೆಯ ಬ್ಯಾಂಕ್ ಖಾತೆಯಲ್ಲಿ ಕ್ರೋಢೀಕರಿಸಿ, ಮೃತ ಸದಸ್ಯರ ಕುಟುಂಬದ ನಾಮಿನಿಗೆ 12 ದಿನಗಳೊಳಗೆ ಚೆಕ್ ಮೂಲಕ ನೆರವು ನೀಡಲಾಗುವುದು ಎಂದು ವಿವರಿಸಿದರು.

ಈ ಯೋಜನೆ ಛಾಯಾಗ್ರಾಹಕರ ಕುಟುಂಬಗಳಿಗೆ ಸಂಕಷ್ಟದ ಸಂದರ್ಭದಲ್ಲಿ ಆರ್ಥಿಕ ಬೆಂಬಲ ನೀಡುವ ಮಾನವೀಯ ಕಾರ್ಯಕ್ರಮವಾಗಿದ್ದು, ರಾಜ್ಯದ ಎಲ್ಲ ಛಾಯಾಗ್ರಾಹಕರು ಸದಸ್ಯತ್ವ ಪಡೆದು ಯೋಜನೆಯ ಯಶಸ್ಸಿಗೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸೈಯದ್ ನಾಸೀರುದ್ದೀನ್ ಎ. ಪಟೇಲ್, ಅಫ್ಸರ್ ಪಟೇಲ್, ಶ್ರೀನಿವಾಸ್ ಮಡಕಿ, ಫಿರೋಜ್ ಖಾನ್ ಎ. ಹಮೀದ್, ಅಂಬಾದಾಸ್ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button