ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಇಂಜಿನಿಯರ್ಗಳ ಪಾತ್ರ ನಿರ್ಣಾಯಕ: ನಲಿನ್ ಅತುಲ್

ಕಲಬುರಗಿ, ಜು. 3: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿಶೇಷ ಆದ್ಯತೆ ನೀಡಿದ್ದು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿ) ಮೂಲಕ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ಇಂಜಿನಿಯರ್ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಮಂಡಳಿಯ ಕಾರ್ಯದರ್ಶಿ ನಲಿನ್ ಅತುಲ್ ಹೇಳಿದರು.
ನಗರದ ನಾಗನಹಳ್ಳಿ ಕ್ರಾಸ್ ಸಮೀಪದ ಜೆಸ್ಟ್ ಹೋಟೆಲ್ನಲ್ಲಿ ಶುಕ್ರವಾರ ಕೆಕೆಆರ್ಡಿಬಿ ಹಾಗೂ ಲೋಕೋಪಯೋಗಿ ಇಲಾಖೆ ಈಶಾನ್ಯ ವಲಯದ ಸಂಯುಕ್ತ ಆಶ್ರಯದಲ್ಲಿ ಬೀದರ, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ವಿವಿಧ ಇಲಾಖೆಗಳ ಅಭಿಯಂತರರಿಗಾಗಿ ಆಯೋಜಿಸಿದ್ದ ಎರಡು ದಿನಗಳ ಸಮಗ್ರ ತಾಂತ್ರಿಕ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗವು ಅಭಿವೃದ್ಧಿಯಲ್ಲಿ ರಾಜ್ಯದ ಇತರ ಪ್ರದೇಶಗಳಿಗಿಂತ ಹಿಂದುಳಿದಿರುವ ಕಾರಣ ಸರ್ಕಾರ ವಿಶೇಷ ಅನುದಾನ ಹಾಗೂ ನೀತಿಗಳ ಮೂಲಕ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಈ ನಿಟ್ಟಿನಲ್ಲಿ ಇಂಜಿನಿಯರ್ಗಳು ಬದ್ಧತೆಯಿಂದ ಹಾಗೂ ಗುಣಮಟ್ಟದ ಕಾಮಗಾರಿಗಳ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಇಂಜಿನಿಯರ್ಗಳು ಎದುರಿಸುತ್ತಿರುವ ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದಲೇ ಈ ಕಾರ್ಯಾಗಾರ ಆಯೋಜಿಸಲಾಗಿದೆ. ಅವರ ಅಭಿಪ್ರಾಯಗಳನ್ನು ಆಲಿಸಿ, ಯೋಜನೆಗಳ ಅನುಷ್ಠಾನ ಸುಗಮಗೊಳಿಸಲು ಮಂಡಳಿ ಬದ್ಧವಾಗಿದೆ ಎಂದು ತಿಳಿಸಿದರು.
2013–14ರ ಬಳಿಕ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಅನುದಾನದಲ್ಲಿ ಗಣನೀಯ ಏರಿಕೆಯಾಗಿದ್ದು, ಕಳೆದ ಮೂರು ವರ್ಷಗಳಲ್ಲಿ ಸುಮಾರು ₹5,000 ಕೋಟಿ ಬಿಡುಗಡೆ ಮಾಡಲಾಗಿದೆ. ಕಳೆದ ಐದು–ಆರು ವರ್ಷಗಳಲ್ಲಿ ₹24,000 ಕೋಟಿಗೂ ಅಧಿಕ ಮೊತ್ತವನ್ನು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಲಾಗಿದೆ ಎಂದು ಹೇಳಿದರು.
ಯೋಜನೆಗಳ ಅನುಮೋದನೆ, ಟೆಂಡರ್ ಹಾಗೂ ಪಾವತಿ ಪ್ರಕ್ರಿಯೆಯನ್ನು ಇ-ಪ್ರೊಕ್ಯೂರ್ಮೆಂಟ್ ಮೂಲಕ ಸಂಪೂರ್ಣ ಡಿಜಿಟಲೀಕರಣಗೊಳಿಸಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ಕಾಮಗಾರಿಗಳ ಗುಣಮಟ್ಟ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಹೊಣೆಗಾರಿಕೆ ಇಂಜಿನಿಯರ್ಗಳ ಮೇಲಿದೆ ಎಂದರು.
ಕೃಷಿ, ಕೈಗಾರಿಕೆ, ಜವಳಿ, ಪ್ರವಾಸೋದ್ಯಮ ಹಾಗೂ ಶಿಕ್ಷಣ ಕ್ಷೇತ್ರಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಈ ವರ್ಷ ಕೃಷಿ ಹಾಗೂ ಸಂಬಂಧಿತ ಕ್ಷೇತ್ರ, ಕೈಗಾರಿಕಾ ನೀತಿ ಸೇರಿದಂತೆ ಐದು ಹೊಸ ನೀತಿಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಕೈಗಾರಿಕಾ ನೀತಿಗೆ ಅನುಮೋದನೆ ದೊರೆತಿದೆ ಎಂದು ಮಾಹಿತಿ ನೀಡಿದರು.
ಲೋಕೋಪಯೋಗಿ ಇಲಾಖೆ ಈಶಾನ್ಯ ವಲಯದ ಮುಖ್ಯ ಅಭಿಯಂತರ ಸುಭಾಷ್ ಶಿವಶಂಕರ ಮಾತನಾಡಿ, ಕೃಷಿ, ಕೈಗಾರಿಕೆ, ಶಿಕ್ಷಣ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ ರೂಪಿಸಿರುವ ಹೊಸ ನೀತಿಗಳ ಯಶಸ್ವಿ ಅನುಷ್ಠಾನಕ್ಕೆ ಇಂಜಿನಿಯರ್ಗಳ ತಾಂತ್ರಿಕ ಪರಿಣತಿ ಅಗತ್ಯವಾಗಿದೆ. ಸರ್ಕಾರದ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಕಲ್ಯಾಣ ಕರ್ನಾಟಕ ರಾಜ್ಯದ ಅಭಿವೃದ್ಧಿಶೀಲ ಪ್ರದೇಶವಾಗಿ ರೂಪುಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಂಜಿನಿಯರ್ಗಳ ಕಲ್ಯಾಣ ಹಾಗೂ ಯೋಜನೆಗಳ ಸುಗಮ ಅನುಷ್ಠಾನಕ್ಕೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಅವರು ಹೇಳಿದರು.
ಕೆಕೆಆರ್ಡಿಬಿ ಹಣಕಾಸು ಸಹಾಯಕ ನಿಯಂತ್ರಕಿ ಇಂದುಶ್ರೀ ಆರ್. ಸ್ವಾಗತಿಸಿದರು. ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅನ್ವರ್ ಕಾರ್ಯಾಗಾರದ ಉದ್ದೇಶ ಹಾಗೂ ತಾಂತ್ರಿಕ ವಿಷಯಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.
ಕಾರ್ಯಕ್ರಮದಲ್ಲಿ ಕೆಕೆಆರ್ಡಿಬಿ ಉಪಕಾರ್ಯದರ್ಶಿ ಸುರೇಖಾ, ಹೆಚ್ಚುವರಿ ನಿರ್ದೇಶಕಿ ಪ್ರವೀಣಾ ಪ್ರಿಯ ಡೇವಿಡ್, ಹಣಕಾಸು ನಿಯಂತ್ರಕ ಪವನಕುಮಾರ, ಅಧೀಕ್ಷಕ ಅಭಿಯಂತರ ಆನಂದ ಕಮಲಾಪೂರಕರ್, ತಾಂತ್ರಿಕ ತಜ್ಞ ಯಳಸಂಗಿ ಮಠ, ನಿವೃತ್ತ ಮುಖ್ಯ ಇಂಜಿನಿಯರ್ ಎಂ. ನಾರಾಯಣ್, ಅಪ್ಪ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಸಿದ್ರಾಮಪ್ಪ ಅವಂತಿ ಸೇರಿದಂತೆ ಬೀದರ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಅಭಿಯಂತರರು ಉಪಸ್ಥಿತರಿದ್ದರು.



