ರಾಜ್ಯಸಭಾ ಸದಸ್ಯರಾಗಿ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ್ ಖರ್ಗೆ ಪ್ರಮಾಣವಚನ ಸ್ವೀಕಾರ..!

ಕಲಬುರ್ಗಿ, ಜೂ.೨೯- ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹಾಗೂ ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರು ಇತ್ತೀಚೆಗೆ ಕರ್ನಾಟಕದಿಂದ ರಾಜ್ಯಸಭೆಗೆ ಮರು ಆಯ್ಕೆಯಾದ ಹಿನ್ನೆಲೆಯಲ್ಲಿ ಸೋಮವಾರ ನವದೆಹಲಿಯಲ್ಲಿ ಸಂಸತ್ ಸದಸ್ಯರಾಗಿ ಭರ್ಜರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸಂಸತ್ ಭವನದಲ್ಲಿರುವ ತಮ್ಮ ಅಧಿಕೃತ ಕೊಠಡಿಯಲ್ಲಿ ನಡೆದ ಸರಳ ಹಾಗೂ ಗಂಭೀರ ಕಾರ್ಯಕ್ರಮದಲ್ಲಿ ರಾಜ್ಯಸಭೆಯ ಸಭಾಪತಿಯೂ ಆಗಿರುವ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಖರ್ಗೆ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಕರ್ನಾಟಕ ರಾಜ್ಯವನ್ನು ಮೇಲ್ಮನೆಯಲ್ಲಿ ಪ್ರತಿನಿಧಿಸುವ ಮಲ್ಲಿಕಾರ್ಜುನ ಖರ್ಗೆ ಅವರು, ತಮ್ಮ ಕೈಯಲ್ಲಿ ಭಾರತದ ಸಂವಿಧಾನದ ಪ್ರತಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಹಿಂದಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ಎಲ್ಲರ ಗಮನ ಸೆಳೆಯಿತು.
ಪ್ರಮಾಣ ವಚನ ಸ್ವೀಕಾರದ ಬಳಿಕ ಸಭಾಪತಿ ಸಿ. ಪಿ. ರಾಧಾಕೃಷ್ಣನ್ ಅವರು ಖರ್ಗೆ ಅವರಿಗೆ ಹಸ್ತಲಾಘವ ನೀಡಿ ಶುಭಕೋರಿದರು. ಇದೇ ವೇಳೆ ಖರ್ಗೆ ಅವರ ಸುದೀರ್ಘ ಹಾಗೂ ಅಪಾರ ಸಂಸದೀಯ ಅನುಭವದಿಂದ ಮೇಲ್ಮನೆಗೆ (ರಾಜ್ಯಸಭೆ) ಮುಂಬರುವ ದಿನಗಳಲ್ಲಿ ಹೆಚ್ಚಿನ ಅನುಕೂಲವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು. ಪ್ರಮಾಣ ವಚನ ಸ್ವೀಕರಿಸಿದ ತಕ್ಷಣವೇ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರು ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ನನ್ನ ಸುದೀರ್ಘ ಸಾರ್ವಜನಿಕ ಜೀವನ ಮತ್ತು ಸಂಸದೀಯ ಸೇವೆಯ ಪ್ರಯಾಣದಲ್ಲಿ ನನ್ನ ಮೇಲೆ ನಿರಂತರವಾಗಿ ಅಪಾರ ವಿಶ್ವಾಸವಿಟ್ಟ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪಕ್ಷದ ಕೋಟ್ಯಂತರ ಕಾರ್ಯಕರ್ತರು ಹಾಗೂ ಇಂಡಿಯಾ ಒಕ್ಕೂಟದ ಎಲ್ಲ ಸಹೋದ್ಯೋಗಿ ಮಿತ್ರರಿಗೆ ನಾನು ಮನಃಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಪ್ರಮಾಣ ವಚನ ಸ್ವೀಕಾರದ ನಂತರ ಮಾಧ್ಯಮಗಳೊಂದಿಗೆ ಖರ್ಗೆಯವರು ಮಾತನಾಡಿ, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ ದೇಶದ ಜನರ ಸೇವೆಯನ್ನು ಮುಂದುವರಿಸುತ್ತಿರುವುದು ತಮಗೆ ಹೆಮ್ಮೆಯ ಮತ್ತು ಜವಾಬ್ದಾರಿಯ ವಿಷಯವಾಗಿದೆ ಎಂದರು.
ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ಲೋಪದೋಷಗಳನ್ನು ಮತ್ತು ಜನವಿರೋಧಿ ನೀತಿಗಳನ್ನು ಬಲವಾಗಿ ಪ್ರಶ್ನಿಸುವ ಹಾಗೂ ದೇಶದ ಜನರ ಧ್ವನಿಯನ್ನು ಸದನದಲ್ಲಿ ಪ್ರಾಮಾಣಿಕವಾಗಿ ಎತ್ತಿಹಿಡಿಯುವ ಕೆಲಸವನ್ನು ತಾವು ಎಂದಿನಂತೆ ಮುಂದುವರಿಸುವುದಾಗಿ ಭರವಸೆ ನೀಡಿದರು.
ದೆಹಲಿಯಲ್ಲಿ ಜರುಗಿದ ಮಹತ್ವದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಮತ್ತು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮುಂಚೂಣಿಯಲ್ಲಿ ಉಪಸ್ಥಿತರಿದ್ದು ಖರ್ಗೆ ಅವರಿಗೆ ಬೆಂಬಲ ಸೂಚಿಸಿದರು. ಜೊತೆಗೆ ಕೇಂದ್ರ ಸಚಿವರಾದ ಜೆ. ಪಿ. ನಡ್ಡಾ, ಕಿರಣ್ ರಿಜಿಜು, ಅರ್ಜುನ್ ರಾಮ್ ಮೇಘವಾಲ್ ಮತ್ತು ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ಸೇರಿದಂತೆ ಆಡಳಿತ ಮತ್ತು ವಿರೋಧ ಪಕ್ಷದ ಹಲವು ಪ್ರಮುಖ ನಾಯಕರು ಪಾಲ್ಗೊಂಡಿದ್ದರು.



