ಜಿಲ್ಲಾಸುದ್ದಿ

ಕಿರಣಗಿ, ಸೋಮನಾಥಹಳ್ಳಿ, ಫಿರೋಜಾಬಾದ್ ಭೂಸ್ವಾಧೀನ ವಿರೋಧಿಸಿ ಸೆ.7ರಿಂದ ರೈತರ ಅಮರಣ ಉಪವಾಸ

ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಬಾಕಿ ಪರಿಹಾರ ನೀಡುವಂತೆ ಆಗ್ರಹ; ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

ಕಲಬುರಗಿ, ಸೆ.1: ತಾಲೂಕಿನ ಕಿರಣಗಿ, ಸೋಮನಾಥಹಳ್ಳಿ ಹಾಗೂ ಫಿರೋಜಾಬಾದ್ ಗ್ರಾಮಗಳಲ್ಲಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ರೈತರು ಸೆಪ್ಟೆಂಬರ್ 7ರಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಅಮರಣ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ ಎಂದು ರೈತ ಮುಖಂಡ ಶಂಕರ್ ಗೊಬೂರ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ಗ್ರಾಮಗಳ ಭೂಸ್ವಾಧೀನದಿಂದ ಅನೇಕ ರೈತರು ಭೂಮಿ ಕಳೆದುಕೊಂಡು ನಿರಾಶ್ರಿತರಾಗುವ ಪರಿಸ್ಥಿತಿ ಎದುರಾಗಿದೆ. ತಮ್ಮ ಕುಟುಂಬಗಳು ಹಿಂದಿನಿಂದಲೂ ಕೃಷಿಯನ್ನೇ ಅವಲಂಬಿಸಿಕೊಂಡು ಜೀವನ ನಡೆಸುತ್ತಿದ್ದು, ಭೂಮಿ ಕಳೆದುಕೊಂಡರೆ ಜೀವನೋಪಾಯವೇ ಇಲ್ಲದಂತಾಗಲಿದೆ ಎಂದು ಹೇಳಿದರು.

ಭೂಮಿ ಕಳೆದುಕೊಳ್ಳುತ್ತಿರುವ ರೈತರೊಂದಿಗೆ ಭೂ ಕಾರ್ಮಿಕರು ಹಾಗೂ ಗ್ರಾಮಗಳ ಇತರ ಜನರೂ ವಿವಿಧ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಭೂಸ್ವಾಧೀನದಿಂದಾಗಿ ಈ ಎಲ್ಲ ವರ್ಗದ ಜನರ ಬದುಕಿನ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪರಿಹಾರದಲ್ಲಿ ₹4 ಲಕ್ಷ ಬಾಕಿ

ರೈತರ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳುವ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ನಿಗದಿಪಡಿಸಿದ್ದ ಪ್ರತಿ ಎಕರೆಗೆ ₹16 ಲಕ್ಷ ಪರಿಹಾರದ ಬದಲಿಗೆ ₹12 ಲಕ್ಷ ಮಾತ್ರ ನೀಡಲಾಗಿದೆ. ಪ್ರತಿ ಎಕರೆಗೆ ಇನ್ನೂ ₹4 ಲಕ್ಷ ಪರಿಹಾರ ಬಾಕಿ ಉಳಿದಿದೆ ಎಂದು ಶಂಕರ್ ಗೊಬೂರ್ ತಿಳಿಸಿದರು.

ಇದರ ಜೊತೆಗೆ ಸಂಬಂಧಿತ ಕಂಪನಿಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಈವರೆಗೂ ಉದ್ಯೋಗ ನೀಡಿಲ್ಲ. ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮಾತ್ರ ಮುಂದಾಗಿರುವ ಕಂಪನಿ ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

13 ವರ್ಷವಾದರೂ ಕಂಪನಿ ಸ್ಥಾಪನೆಯಾಗಿಲ್ಲ

ಯಾವುದೇ ಕಂಪನಿಗೆ ಅನುಮತಿ ದೊರೆತ ಬಳಿಕ ಐದು ವರ್ಷಗಳೊಳಗೆ ಕಂಪನಿ ಸ್ಥಾಪನೆಯಾಗಬೇಕು. ಆದರೆ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿ ಸುಮಾರು 13 ವರ್ಷಗಳಾಗಿದ್ದರೂ, ಸಂಬಂಧಿತ ಕಂಪನಿ ಇನ್ನೂ ಸ್ಥಾಪನೆಯಾಗಿಲ್ಲ ಎಂದು ರೈತ ಮುಖಂಡರು ಪ್ರಶ್ನಿಸಿದರು.

ಇದೀಗ ಮತ್ತೆ ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾಗಿರುವುದು ಹಾಗೂ ರೈತರಿಗೆ ಬಾಕಿ ಇರುವ ಪರಿಹಾರವನ್ನು ನೀಡದೆ ಕ್ರಮ ಕೈಗೊಳ್ಳುತ್ತಿರುವುದು ರೈತರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಮೂಲಕ ರೈತರು ವಂಚನೆಗೆ ಒಳಗಾಗುವಂತಾಗಿದೆ ಎಂದು ಅವರು ದೂರಿದರು.

ಬಾಕಿ ಪರಿಹಾರ ತಕ್ಷಣ ಪಾವತಿಸಲು ಒತ್ತಾಯ

ಕಂಪನಿ ಅಧಿಕಾರಿಗಳು, ಜಿಲ್ಲಾಡಳಿತ ಹಾಗೂ ಸರ್ಕಾರದ ಪ್ರತಿನಿಧಿಗಳು ಕೂಡಲೇ ಮಧ್ಯಪ್ರವೇಶಿಸಿ ಪ್ರತಿ ಎಕರೆಗೆ ಬಾಕಿ ಇರುವ ₹4 ಲಕ್ಷ ಪರಿಹಾರವನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.

ಬೇಡಿಕೆ ಈಡೇರದಿದ್ದರೆ ‘ನಮ್ಮ ಭೂಮಿ ನಮಗೆ ಬಿಡಿ’ ಎಂಬ ಘೋಷಣೆಯೊಂದಿಗೆ ಸೆಪ್ಟೆಂಬರ್ 7ರಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಅಮರಣ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.

ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿದರೆ ಕಂಪನಿ ಅಧಿಕಾರಿಗಳು, ಜಿಲ್ಲಾಡಳಿತ ಹಾಗೂ ಸರ್ಕಾರದ ಪ್ರತಿನಿಧಿಗಳೇ ನೇರ ಹೊಣೆಗಾರರಾಗುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಈರಣಣ್ಣ ಉಳ್ಳಾಗಡ್ಡಿ, ಶರಣಪ್ಪ ಬೂಸಾ, ಭೀಮಾಶಂಕರ್ ಸರಡಗಿ, ಮಲ್ಲಿನಾಥ ಭೂಸಾ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button