ವೃತ್ತಿ, ವ್ಯಕ್ತಿತ್ವ ಬೆಳೆಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಕರೆ

ಕಲಬುರಗಿ, ಸೆ.21: ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯೊಂದಿಗೆ ತಮ್ಮ ವೃತ್ತಿ ಕೌಶಲ್ಯ ಹಾಗೂ ವ್ಯಕ್ತಿತ್ವವನ್ನೂ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಕರೆ ನೀಡಿದರು.
ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ವಿಭಾಗದ ವತಿಯಿಂದ 2026-27ನೇ ಶೈಕ್ಷಣಿಕ ಸಾಲಿನಲ್ಲಿ ವಿವಿಧ ಸ್ನಾತಕ ಪದವಿ ಕಾರ್ಯಕ್ರಮಗಳಿಗೆ ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸ್ವಾಗತ ಹಾಗೂ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಶೈಕ್ಷಣಿಕ, ಸಂಶೋಧನಾ ಹಾಗೂ ಇತರ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ತಮ್ಮ ವೃತ್ತಿ ಹಾಗೂ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ವಿಶ್ವವಿದ್ಯಾಲಯದ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿ ಕಲ್ಯಾಣ ಮತ್ತು ಕಾನೂನು ವಿಭಾಗದ ಡೀನ್ ಪ್ರೊ. ಬಸವರಾಜ ಎಂ. ಕುಬಕಡ್ಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವವಿದ್ಯಾಲಯದ ನೀತಿ ಸಂಹಿತೆ, ಕಾಯಿದೆ ಹಾಗೂ ಸುಗ್ರೀವಾಜ್ಞೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿಶ್ವವಿದ್ಯಾಲಯದ ನಿಯಮಗಳು ಹಾಗೂ ಶಿಸ್ತನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದರು.
ಸಮಾರೋಪ ಸಮಾರಂಭದಲ್ಲಿ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಮಾತನಾಡಿ, ವಿಶ್ವವಿದ್ಯಾಲಯದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಶೈಕ್ಷಣಿಕ ಹಾಗೂ ವೃತ್ತಿಪರ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಅಭಿವೃದ್ಧಿ ಹೊಂದಿದ ಭಾರತ-2047 ನಿರ್ಮಾಣಕ್ಕೆ ವಿದ್ಯಾರ್ಥಿಗಳು ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ವಿವಿಧ ನಿಕಾಯಗಳ ಡೀನ್‌ಗಳಾದ ಪ್ರೊ. ಪಾಂಡುರಂಗ ವಿ., ಪ್ರೊ. ಆರ್.ಎಸ್. ಹೆಗಡಿ, ಪ್ರೊ. ಗಣೇಶ ಪವಾರ್, ಪ್ರೊ. ಅಮರೇಂದ್ರ ಮಸ್ತಾ, ಪ್ರೊ. ಪ್ರಶಾಂತ್, ಪ್ರೊ. ಪವಿತ್ರಾ ಆಲೂರು, ಪ್ರೊ. ಪಲ್ಲೇಪೋಘು ರಾಘವಯ್ಯ, ಪ್ರೊ. ರಾಜೀವ್ ಶೇಷ ಜೋಶಿ ಹಾಗೂ ಮುಖ್ಯ ಹಾಸ್ಟೆಲ್ ವಾರ್ಡನ್ ಡಾ. ಬಸವರಾಜ ಎಂ. ಸೇರಿದಂತೆ ಪ್ರಾಧ್ಯಾಪಕರು ತಮ್ಮ ವಿಭಾಗಗಳು ಹಾಗೂ ಶೈಕ್ಷಣಿಕ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಪರೀಕ್ಷಾ ವ್ಯವಸ್ಥೆ, ವಿದ್ಯಾರ್ಥಿಗಳ ಶಿಸ್ತು ಮತ್ತು ಮೇಲ್ವಿಚಾರಣೆ, ಭಾಷಾ ಪ್ರಯೋಗಾಲಯ, ವಿದ್ಯಾರ್ಥಿವೇತನ, ಕ್ರೀಡಾ ವಿಭಾಗ, ಸ್ವಯಂ ಪೋರ್ಟಲ್, ಎನ್‌ಇಪಿ, ಶೈಕ್ಷಣಿಕ ವಿಭಾಗ, ಗ್ರಂಥಾಲಯ, ಎನ್‌ಎಸ್‌ಎಸ್, ಉದ್ಯಮಶೀಲತೆ ಮತ್ತು ಇನ್‌ಕ್ಯುಬೇಶನ್, ಉದ್ಯೋಗ ನಿಯೋಜನಾ ಘಟಕ, ವಸತಿ ನಿಲಯ ಹಾಗೂ ಕೌನ್ಸೆಲಿಂಗ್ ಸೇರಿದಂತೆ ವಿವಿಧ ವಿದ್ಯಾರ್ಥಿ ಸೇವೆಗಳು ಮತ್ತು ಸೌಲಭ್ಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.
ಡಾ. ಬಸವರಾಜ ಎಂ. ಅವರು ಸ್ವಾಗತಿಸಿದರು. ಡಾ. ವೈಷ್ಣವಿ ನಾರಾಯಣಿ ಕಾರ್ಯಕ್ರಮ ನಿರೂಪಿಸಿದರು. ಡಿಎಸ್‌ಡಬ್ಲ್ಯು ಅಧಿಕಾರಿ ಡಾ. ಚರಣ್ ಕುಮಾರ್ ಕೆ. ಹಾಗೂ ಶ್ರೀ ಅರುಣ್ ಉಪಸ್ಥಿತರಿದ್ದರು.
ಬಿಬಿಎ, ಬಿಟೆಕ್ (ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್-ಎಐ ಹಾಗೂ ಎಂಎಲ್, ಗಣಿತ ಮತ್ತು ಕಂಪ್ಯೂಟಿಂಗ್) ಹಾಗೂ ಬಿಎ, ಬಿಎಲ್‌ಎಲ್‌ಬಿ, ಬಿಎಸ್ಸಿ ಮತ್ತು ಬಿಎಸ್ಡಬ್ಲ್ಯು ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.



