
ಜೇವರ್ಗಿ, ಜು.30: ರಾಜ್ಯದಲ್ಲಿ ನಡೆಯುತ್ತಿರುವ ಸರ್ಕಾರಿ ನೇಮಕಾತಿ ಪ್ರಕ್ರಿಯೆ ಹಾಗೂ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನೇಮಕಾತಿಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಲು ಪ್ರಕರಣವನ್ನು ಕೇಂದ್ರ ತನಿಖಾ ದಳ (ಸಿಬಿಐ)ಗೆ ವಹಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ವಾದ) ತಾಲೂಕು ಸಂಚಾಲಕ ಸಿದ್ದು ಕೇರೂರು ಆಗ್ರಹಿಸಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕೆಪಿಎಸ್ಸಿ ಸೇರಿದಂತೆ ವಿವಿಧ ಉದ್ಯೋಗಾಕಾಂಕ್ಷಿಗಳು ನಡೆಸಿದ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ ಅವರು, ರಾಜ್ಯದಲ್ಲಿ ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು. ಇದರಿಂದ ಯುವಕರ ಭವಿಷ್ಯ ಸಂಕಷ್ಟಕ್ಕೆ ಸಿಲುಕಿದ್ದು, ಉದ್ಯೋಗಾಕಾಂಕ್ಷಿಗಳಲ್ಲಿ ತೀವ್ರ ನಿರಾಸೆ ಮೂಡಿದೆ ಎಂದು ಹೇಳಿದರು.
ಶಿಕ್ಷಕರ ನೇಮಕಾತಿಯೂ ಹಲವು ವರ್ಷಗಳಿಂದ ವಿಳಂಬವಾಗಿದ್ದು, ದೈಹಿಕ ಶಿಕ್ಷಣ, ಸಂಗೀತ, ಕನ್ನಡ, ವಿಜ್ಞಾನ, ಹಿಂದಿ ಸೇರಿದಂತೆ ವಿವಿಧ ವಿಷಯಗಳ ಶಿಕ್ಷಕರ ಹುದ್ದೆಗಳು ಹಾಗೂ ಪದವೀಧರ ಶಿಕ್ಷಕರ ನೇಮಕಾತಿ ದೀರ್ಘಕಾಲದಿಂದ ನಡೆಯದಿರುವುದು ಶಿಕ್ಷಣ ವ್ಯವಸ್ಥೆಯ ಮೇಲಿನ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಅವರು ಟೀಕಿಸಿದರು.
ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಸಾವಿರಾರು ಶಿಕ್ಷಕರ ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡುವಲ್ಲಿ ಸರ್ಕಾರ ವಿಳಂಬ ಮಾಡುತ್ತಿದೆ. ಇದರಿಂದ ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟಕ್ಕೂ ಧಕ್ಕೆಯಾಗುತ್ತಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಯುಪಿಎಸ್ಸಿ ಮಾದರಿಯ ಪಾರದರ್ಶಕ, ತಂತ್ರಜ್ಞಾನ ಆಧಾರಿತ ಹಾಗೂ ಭ್ರಷ್ಟಾಚಾರ ಮುಕ್ತ ನೇಮಕಾತಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಪರೀಕ್ಷಾ ಪ್ರಕ್ರಿಯೆಯಿಂದ ಫಲಿತಾಂಶ ಪ್ರಕಟಿಸುವವರೆಗೂ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳುವ ಸುಧಾರಣಾ ಕ್ರಮಗಳನ್ನು ಸರ್ಕಾರ ತಕ್ಷಣ ಕೈಗೊಳ್ಳಬೇಕು ಎಂದು ಸಿದ್ದು ಕೇರೂರು ಒತ್ತಾಯಿಸಿದರು.



