ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆ ವಿಐಪಿ ಪಕ್ಷ ಸಂಘಟನೆಗೆ ಒತ್ತು
ಮುಂಬರುವ ಚುನಾವಣೆಗಳಿಗೆ ಪಕ್ಷ ಬಲವರ್ಧನೆ, ಸದಸ್ಯತ್ವ ವಿಸ್ತರಣೆಗೆ ಕಾರ್ಯತಂತ್ರ ರೂಪಣೆ

ಬೀದರ್, ಜು.20: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ವಿಕಾಸಶೀಲ ಇನ್ಸಾನ್ ಪಕ್ಷ (ವಿಐಪಿ) ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಸಂಘಟನಾ ಸಭೆ ನಡೆಯಿತು.
ವಿಐಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮುಖೇಶ್ ಸಹಾನಿ ಅವರ ಮಾರ್ಗದರ್ಶನದಲ್ಲಿ ಹಾಗೂ ಕರ್ನಾಟಕ ರಾಜ್ಯಾಧ್ಯಕ್ಷ ಬಿ.ಕೆ. ಮೋಹನ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ವಿಸ್ತರಣೆ, ಹೊಸ ಸದಸ್ಯರ ಸೇರ್ಪಡೆ, ಕಾರ್ಯಕರ್ತರನ್ನು ಸಂಘಟಿಸುವುದು ಹಾಗೂ ಜನಪರ ಹೋರಾಟಗಳನ್ನು ಬಲಪಡಿಸುವ ಕುರಿತು ಚರ್ಚಿಸಲಾಯಿತು.
ಮುಂಬರುವ ಸ್ಥಳೀಯ ಸಂಸ್ಥೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷವನ್ನು ಪರಿಣಾಮಕಾರಿಯಾಗಿ ಸಜ್ಜುಗೊಳಿಸಲು ಅಗತ್ಯ ಕಾರ್ಯತಂತ್ರಗಳನ್ನು ರೂಪಿಸುವ ಬಗ್ಗೆ ನಾಯಕರು ಅಭಿಪ್ರಾಯ ಹಂಚಿಕೊಂಡರು. ರಾಜ್ಯದ ವಿವಿಧ ಭಾಗಗಳಲ್ಲಿ ಪಕ್ಷದ ನೆಲೆಯನ್ನು ವಿಸ್ತರಿಸಿ, ಜನರ ಸಮಸ್ಯೆಗಳ ಆಧಾರದ ಮೇಲೆ ಹೋರಾಟಗಳನ್ನು ಸಂಘಟಿಸುವ ಅಗತ್ಯವಿದೆ ಎಂದು ಸಭೆಯಲ್ಲಿ ಒತ್ತಿ ಹೇಳಲಾಯಿತು.
ರಾಜ್ಯಾಧ್ಯಕ್ಷ ಬಿ.ಕೆ. ಮೋಹನ್ ಕುಮಾರ್ ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಜೊತೆಗೆ ಕಾರ್ಯಕರ್ತರ ಜಾಲವನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮುಂಬರುವ ಚುನಾವಣೆಗಳಲ್ಲಿ ವಿಐಪಿ ಪಕ್ಷವನ್ನು ಪ್ರಬಲ ರಾಜಕೀಯ ಶಕ್ತಿಯನ್ನಾಗಿ ರೂಪಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯ ಸಂಚಾಲಕ ಶಾಂತಪ್ಪ ಕೂಡಿ ಮಾತನಾಡಿ, ಪಕ್ಷದ ತತ್ವ ಮತ್ತು ಸಿದ್ಧಾಂತಗಳನ್ನು ಗ್ರಾಮೀಣ ಮಟ್ಟದವರೆಗೂ ತಲುಪಿಸುವ ಮೂಲಕ ಹೊಸ ನಾಯಕತ್ವವನ್ನು ಬೆಳೆಸಲು ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಘಟಕದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿ, ಪಕ್ಷದ ಮುಂದಿನ ರಾಜಕೀಯ ಕಾರ್ಯತಂತ್ರ, ಸಂಘಟನೆ ಬಲವರ್ಧನೆ ಹಾಗೂ ಸದಸ್ಯತ್ವ ಅಭಿಯಾನದ ಕುರಿತು ಚರ್ಚಿಸಿದರು.



