ರಾಜ್ಯ

ಯುವಕರ ಭವಿಷ್ಯ ರೂಪಿಸಲು ನೀಲಿನಕ್ಷೆ ಸಿದ್ಧಪಡಿಸಿ: ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ

ಕಲ್ಯಾಣ ಕರ್ನಾಟಕ ಅಭಿವೃದ್ಧಿ, ಬರ ಪರಿಸ್ಥಿತಿ, ಕುಡಿಯುವ ನೀರು ಹಾಗೂ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

ಯುವಕರ ಭವಿಷ್ಯ ರೂಪಿಸುವುದರೊಂದಿಗೆ ಅವರ ಆರ್ಥಿಕ ಪ್ರಗತಿಗೆ ಪೂರಕವಾಗುವ ಯೋಜನೆಗಳ ನೀಲಿನಕ್ಷೆ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಕಲಬುರಗಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವ ಕರ್ನಾಟಕ ನಿರ್ಮಾಣವು ರಾಜ್ಯ ಸರ್ಕಾರದ ಪ್ರಮುಖ ಸಂಕಲ್ಪವಾಗಿದ್ದು, ಮುಂದಿನ ಭವಿಷ್ಯ ಯುವಕರ ಕೈಯಲ್ಲಿರುವುದರಿಂದ ಅವರಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಲು ಮುಖ್ಯಮಂತ್ರಿ ಮುಂದಾಗಿದ್ದಾರೆ ಎಂದರು. ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಗಳ ಸಮಗ್ರ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿಗೆ ಅಗತ್ಯವಾದ ಯೋಜನೆಗಳ ರೂಪುರೇಷೆ ಸಿದ್ಧಪಡಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಈ ವರ್ಷ ಸೂಪರ್ ಎಲ್‌ನೀನೋ ಪರಿಣಾಮದಿಂದ ಮಳೆಯ ಕೊರತೆ ಉಂಟಾಗುವ ಸಾಧ್ಯತೆ ಇರುವುದರಿಂದ ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀಳುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಈಗಾಗಲೇ ಎರಡು ಸಭೆಗಳನ್ನು ನಡೆಸಿದ್ದು, ಕುಡಿಯುವ ನೀರು, ಮೇವು ಹಾಗೂ ಬರ ಪರಿಸ್ಥಿತಿಯ ಕುರಿತು ಚರ್ಚಿಸಿದ್ದಾರೆ. ಇದೇ ವಿಷಯವಾಗಿ ಮಂಗಳವಾರ ಕಲಬುರಗಿಯಲ್ಲಿ ಕಂದಾಯ ವಿಭಾಗದ ಅಧಿಕಾರಿಗಳೊಂದಿಗೆ ಪ್ರಾದೇಶಿಕ ಮಟ್ಟದ ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸೋಮವಾರ ಬೀದರ್‌ಗೆ ಆಗಮಿಸಿ ಬಸವಕಲ್ಯಾಣಕ್ಕೆ ಭೇಟಿ ನೀಡಲಿದ್ದು, ಬಳಿಕ ಸಂಜೆ ಕಲಬುರಗಿಗೆ ಆಗಮಿಸಲಿದ್ದಾರೆ. ಸಮಯದ ಅನುಕೂಲತೆ ನೋಡಿಕೊಂಡು ಶರಣಬಸವೇಶ್ವರ ದೇವಸ್ಥಾನ ಹಾಗೂ ದರ್ಗಾಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದರು.

ಮಂಗಳವಾರ ನಡೆಯಲಿರುವ ವಿಭಾಗೀಯ ಮಟ್ಟದ ಸಭೆಯಲ್ಲಿ ಬರ ಪರಿಸ್ಥಿತಿ, ಅದರ ನಿರ್ವಹಣೆಗೆ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತು ಸುದೀರ್ಘ ಚರ್ಚೆ ನಡೆಯಲಿದೆ. ಸಭೆಯ ಬಳಿಕ ಮುಖ್ಯಮಂತ್ರಿ ಮಾಧ್ಯಮಗಳಿಗೆ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.

ಈ ಭಾಗದ ಆಣೆಕಟ್ಟುಗಳಿಗೆ ಮುಖ್ಯಮಂತ್ರಿ ಭೇಟಿ ನಿಗದಿಯಾಗಿಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ಮಾನದಂಡಗಳ ಪ್ರಕಾರ ರಾಜ್ಯದಲ್ಲಿ ಶೇ. 35ರಷ್ಟು ಮಳೆ ಕೊರತೆ ದಾಖಲಾಗಿದ್ದರೂ ಮುಂಗಾರು ಸಂಪೂರ್ಣ ಕೈಕೊಟ್ಟಿಲ್ಲ. ತೊಗರಿ ಹಾಗೂ ಸೂರ್ಯಕಾಂತಿ ಬೆಳೆಗಳನ್ನು ಜುಲೈ ಕೊನೆಯ ವಾರದವರೆಗೆ ಬಿತ್ತನೆ ಮಾಡಬಹುದಾಗಿದೆ. ಮೋಡ ಬಿತ್ತನೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಇಂತಹ ಕ್ರಮಗಳನ್ನು ಕೈಗೊಂಡರೂ ಅವು ವೈಜ್ಞಾನಿಕ ಆಧಾರದ ಮೇಲೆ ಇರಬೇಕು ಎಂದು ಅವರು ಹೇಳಿದರು.

ಕುಡಿಯುವ ನೀರಿನ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಪ್ರಸ್ತುತ ಲಭ್ಯವಿರುವ ನೀರು ಸುಮಾರು 45 ದಿನಗಳವರೆಗೆ ಸಾಕಾಗುವ ಸಾಧ್ಯತೆ ಇದೆ. ಅಗತ್ಯವಿದ್ದರೆ ನೆರೆ ರಾಜ್ಯಗಳಿಂದ ಕುಡಿಯುವ ನೀರು ಪಡೆಯುವ ಕುರಿತು ರಾಜ್ಯ ಸರ್ಕಾರ ಈಗಾಗಲೇ ಪತ್ರ ಬರೆದಿದ್ದು, ಈ ವಿಷಯವೂ ಮುಖ್ಯಮಂತ್ರಿ ನೇತೃತ್ವದ ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ತಿಳಿಸಿದರು.

ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ, ಈ ಪ್ರಕ್ರಿಯೆಯ ಸಂಪೂರ್ಣ ಜವಾಬ್ದಾರಿ ಚುನಾವಣಾ ಆಯೋಗದ್ದೇ ಹೊರತು ಸರ್ಕಾರದ್ದಲ್ಲ ಎಂದು ಸ್ಪಷ್ಟಪಡಿಸಿದರು. ಸರ್ಕಾರ ತನ್ನ ಅಧಿಕಾರಿಗಳನ್ನು ಆಯೋಗಕ್ಕೆ ನಿಯೋಜಿಸಿದ್ದು, ಪ್ರಕ್ರಿಯೆಯಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪ ಇಲ್ಲ ಎಂದರು. ಪಾರದರ್ಶಕತೆ ಕುರಿತು ಚುನಾವಣಾ ಆಯೋಗಕ್ಕೆ ತಾವು 12 ಪ್ರಶ್ನೆಗಳನ್ನು ಕೇಳಿದ್ದರೂ ಉತ್ತರ ನೀಡಿಲ್ಲ ಎಂದು ಆರೋಪಿಸಿದ ಅವರು, ಕೆಲವರಿಗೆ ಮಾತ್ರ ಸಮಯ ನೀಡಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಹೇಳಿದರು.

ಈ ವೇಳೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವ್ಯಕ್ತಪಡಿಸಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಅಭಿಪ್ರಾಯವನ್ನು ಉಲ್ಲೇಖಿಸಿದ ಅವರು, ಈ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಬೇಕು ಎಂಬುದು ತಮ್ಮ ಪಕ್ಷದ ಆಗ್ರಹವೂ ಆಗಿದೆ ಎಂದರು.

ಗೃಹ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಗತ್ಯವಿರುವ ಪ್ರದೇಶಗಳಲ್ಲಿ ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ ಸೇರಿದಂತೆ ಇಲಾಖೆಯಲ್ಲಿ ಕೈಗೊಳ್ಳಲಿರುವ ಸುಧಾರಣೆಗಳ ಕುರಿತು ಒಂದು ವಾರದ ಬಳಿಕ ಸವಿಸ್ತಾರ ಮಾಹಿತಿ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವ ಶರಣಪ್ರಕಾಶ ಪಾಟೀಲ್ ಮಾತನಾಡಿ, ಹೊರರಾಜ್ಯದ ಅಧಿಕಾರಿಗಳನ್ನು ಬಳಸುವಂತೆ ಬಿಜೆಪಿ ಮಾಡುತ್ತಿರುವ ಆಗ್ರಹದ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ಆರೋಪಿಸಿದರು. ತನಿಖಾ ಸಂಸ್ಥೆಗಳ ದಾಳಿಗೆ ಒಳಗಾದವರಿಂದಲೇ ಬಿಜೆಪಿ ದೇಣಿಗೆ ಪಡೆದಿದೆ ಎಂದು ಟೀಕಿಸಿದ ಅವರು, ಕೇಂದ್ರ ಚುನಾವಣಾ ಆಯೋಗದ ಆಯುಕ್ತರ ನೇಮಕಾತಿ ಪ್ರಕ್ರಿಯೆಯಲ್ಲೂ ಕೇಂದ್ರ ಸರ್ಕಾರ ಬದಲಾವಣೆ ತಂದಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಚಿವರಾದ ಶರಣಪ್ರಕಾಶ ಪಾಟೀಲ್, ಎಂ.ವೈ. ಪಾಟೀಲ್, ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button