ಕಮಲಾಪುರ ರೈತರಿಗೆ ಬೆಳೆ ವಿಮೆ ಪರಿಹಾರದಲ್ಲಿ ತಾರತಮ್ಯ: ಜಿಲ್ಲಾಧಿಕಾರಿಗೆ ಶಾಸಕ ಬಸವರಾಜ ಮತ್ತಿಮೂಡ ಮನವಿ
ಬೆಳೆ ಹಾನಿಯಾಗಿದ್ದರೂ ಶೂನ್ಯ ನಷ್ಟ ಎಂದು ವರದಿ; ರೈತರಿಗೆ ನ್ಯಾಯ ಒದಗಿಸುವಂತೆ ಆಗ್ರಹ

ಕಲಬುರಗಿ, ಆ.5: ಜಿಲ್ಲೆಯ ಕಮಲಾಪುರ ತಾಲ್ಲೂಕಿನ ರೈತರಿಗೆ ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ತಾರತಮ್ಯವಾಗಿದ್ದು, ಅನ್ಯಾಯವನ್ನು ಸರಿಪಡಿಸಿ ಅರ್ಹ ರೈತರಿಗೆ ಸಮರ್ಪಕ ಪರಿಹಾರ ನೀಡುವಂತೆ ಆಗ್ರಹಿಸಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಅವರು ಜಿಲ್ಲಾಧಿಕಾರಿ ಇಕ್ರಂ ಶರೀಫ್ ಅವರಿಗೆ ಮನವಿ ಸಲ್ಲಿಸಿದರು.
ಕಮಲಾಪುರ ತಾಲ್ಲೂಕಿನ ಡೊಂಗರಗಾಂವ್, ವಿ.ಕೆ. ಸಲಗರ, ಲಾಡಮುಗುಳಿ, ಸೋಂತ, ಓಕಳಿ, ಜೀವನಗಿ ಹಾಗೂ ಕುರಿಕೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಬೆಳೆ ವಿಮೆ ಪರಿಹಾರ ಸಮರ್ಪಕವಾಗಿ ದೊರೆತಿಲ್ಲ ಎಂದು ಅವರು ದೂರಿದರು.
2025–26ನೇ ಸಾಲಿನ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ನಡೆದ ಬೆಳೆ ಕಟಾವು ಸಮೀಕ್ಷೆಯಲ್ಲಿ ಹಲವು ಗ್ರಾಮಗಳಲ್ಲಿ ತಾರತಮ್ಯ ನಡೆದಿದೆ. ಅತಿವೃಷ್ಟಿ ಹಾಗೂ ಪ್ರವಾಹದಿಂದ ರೈತರ ಬೆಳೆಗಳಿಗೆ ಭಾರೀ ಹಾನಿಯಾಗಿದ್ದರೂ, ಬೆಳೆ ಹಾನಿಯನ್ನೇ ಆಗಿಲ್ಲ ಅಥವಾ ಶೂನ್ಯ ಹಾನಿಯಾಗಿದೆ ಎಂದು ದಾಖಲಿಸಿರುವ ಪರಿಣಾಮ ರೈತರಿಗೆ ವಿಮೆ ಪರಿಹಾರ ದೊರೆತಿಲ್ಲ ಎಂದು ಅವರು ಆರೋಪಿಸಿದರು.
ಕೇಂದ್ರ ಹಾಗೂ ರಾಜ್ಯದ ಅಧ್ಯಯನ ತಂಡಗಳು, ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ತಹಶೀಲ್ದಾರ್ ಸೇರಿದಂತೆ ವಿವಿಧ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲನೆ ನಡೆಸಿದ್ದರೂ, ವಿಮಾ ಕಂಪನಿ ಹಾಗೂ ಕೃಷಿ ಇಲಾಖೆ ನಡೆಸಿದ ಬೆಳೆ ಕಟಾವು ಪ್ರಕ್ರಿಯೆಯಲ್ಲಿ ವಾಸ್ತವ ಸ್ಥಿತಿ ಪ್ರತಿಬಿಂಬಿಸಿಲ್ಲ ಎಂದು ಶಾಸಕರು ತಿಳಿಸಿದ್ದಾರೆ.
ಆದ್ದರಿಂದ ಬೆಳೆ ಕಟಾವು ಸಮೀಕ್ಷೆಯನ್ನು ಮರುಪರಿಶೀಲಿಸಿ, ನಿಜವಾದ ಬೆಳೆ ಹಾನಿಯ ಆಧಾರದ ಮೇಲೆ ರೈತರಿಗೆ ನ್ಯಾಯಸಮ್ಮತ ವಿಮೆ ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶರಣಗೌಡ ಪಾಟೀಲ್, ಸತೀಶ್ ಪಾಟೀಲ್, ಅನೂಪ್ ಸಲಗರ, ನಾಗರಾಜ್ ಮೂಲಗೆ, ಗಜಾನನ ಅಕ್ಕಲಕೋಟ, ಸತೀಶ್ ಸಾಹುಕಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



