ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಕಾಂಗ್ರೆಸ್ ಮುಖಂಡರ ಚರ್ಚೆ
ಅರ್ಹ ಮತದಾರರ ನೋಂದಣಿ, ಮೃತ ಹಾಗೂ ಸ್ಥಳಾಂತರಗೊಂಡವರ ಹೆಸರುಗಳ ಪರಿಷ್ಕರಣೆ ಕುರಿತು ಸಮಾಲೋಚನೆ

ಜಿಲ್ಲೆಯ ವಿಶೇಷ ಮತದಾರರ ಪಟ್ಟಿ (ಎಸ್‌ಐಆರ್) ಪರಿಷ್ಕರಣೆ ಪ್ರಕ್ರಿಯೆ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮೊಹಮ್ಮದ್ ಇಕ್ರಮುಲ್ಲಾ ಅವರೊಂದಿಗೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಸೋಮವಾರ ಸಮಾಲೋಚನೆ ನಡೆಸಿದರು.
ಸಭೆಯಲ್ಲಿ ಮಾಜಿ ಸಚಿವೆ ಉಮಾಶ್ರೀ, ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೇವ ಗುಟ್ಟೇದಾರ್, ಕೆಪಿಸಿಸಿ ಉಪಾಧ್ಯಕ್ಷ ಸುಭಾಷ್ ರಾಠೋಡ್, ಗ್ಯಾರಂಟಿ ಯೋಜನೆ ಸಮಿತಿ ಉಪಾಧ್ಯಕ್ಷ ಸೋಮಶೇಖರ ರಾಠೋಡ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಇನ್ನಷ್ಟು ಪಾರದರ್ಶಕ, ನಿಖರ ಹಾಗೂ ದೋಷರಹಿತವಾಗಿ ನಡೆಸುವ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಅರ್ಹ ಮತದಾರರ ಹೆಸರು ನೋಂದಣಿ, ಮೃತರಾದ ಹಾಗೂ ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಪರಿಷ್ಕರಿಸುವ ಪ್ರಕ್ರಿಯೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮುಖಂಡರು ಸಮಾಲೋಚನೆ ನಡೆಸಿದರು.
ಮತದಾರರ ಪಟ್ಟಿಯಲ್ಲಿನ ನಿಖರತೆ ಕಾಪಾಡುವುದು ಹಾಗೂ ಯಾವುದೇ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಭೆಯಲ್ಲಿ ಸಲಹೆ-ಸೂಚನೆಗಳನ್ನು ನೀಡಲಾಯಿತು. ಸಭೆಯಲ್ಲಿ ಚುನಾವಣಾ ಪರಿಷ್ಕರಣೆ ಕಾರ್ಯದ ಪ್ರಗತಿ ಹಾಗೂ ಮುಂದಿನ ಕ್ರಮಗಳ ಬಗ್ಗೆಯೂ ಚರ್ಚಿಸಲಾಯಿತು.



