ಸಮುದಾಯ ಆರೋಗ್ಯ ಅಧಿಕಾರಿಗಳ ಗುತ್ತಿಗೆ ನೌಕರರ ಸೇವೆ ಕಾಯಂಗೊಳಿಸಲು ಆಗ್ರಹ

ಕಲಬುರಗಿ, ಸೆ.24: ಸಮುದಾಯ ಆರೋಗ್ಯ ಅಧಿಕಾರಿ ಗುತ್ತಿಗೆ ನೌಕರರನ್ನು ಸೇವೆಯಲ್ಲಿ ಕಾಯಂಗೊಳಿಸಬೇಕು, ಪಿಎಚ್ಸಿಒ (ಎಎನ್ಎಂ), ಹೆಚ್ ಐ ಒ ಹಾಗೂ ಬಿಎಸ್ಸಿ ನರ್ಸಿಂಗ್ ಹುದ್ದೆಗಳಿಗೆ ನೀಡಲಾಗುತ್ತಿರುವ ಅರ್ಹತೆಯನ್ನು ಹಿಂಪಡೆಯಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.28ರಂದು ತುಮಕೂರಿನ ಸಿದ್ಧಗಂಗಾ ಮಠದಿಂದ ನೆಲಮಂಗಲದವರೆಗೆ ಬೃಹತ್ ಕಾಲ್ನಡಿಗೆ ಜಾಥಾ ಹಾಗೂ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ಸಂಯೋಜಿತ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಎನ್ಎಚ್ಎಂ ಗುತ್ತಿಗೆ ನೌಕರರ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಾನಸಯ್ಯ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರಿನಿಂದ ನೆಲಮಂಗಲದವರೆಗೆ ನಡೆಯಲಿರುವ ಕಾಲ್ನಡಿಗೆ ಜಾಥಾದ ಬಳಿಕ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನಾ ಧರಣಿ ನಡೆಸಲಾಗುವುದು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 5000ಕ್ಕೂ ಹೆಚ್ಚು ಸಿಎಚ್ಒಗಳು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಪಿಎಚ್ಸಿಒ (ಎಎನ್ಎಂ) ಹಾಗೂ ಹೆಚ್ ಐ ಒ ಹುದ್ದೆಗಳಿಗೆ ಬಿಎಸ್ಸಿ ನರ್ಸಿಂಗ್ ಅಭ್ಯರ್ಥಿಗಳಿಗೆ ನೀಡಲಾಗುತ್ತಿರುವ ಅರ್ಹತೆಯನ್ನು ಹಿಂಪಡೆಯಬೇಕು ಎಂಬುದು ಸಂಘದ ಪ್ರಮುಖ ಬೇಡಿಕೆಯಾಗಿದೆ. ಈಗಾಗಲೇ ಸೇವೆ ಸಲ್ಲಿಸುತ್ತಿರುವ ಸಿಎಚ್ಒಗಳ ಹುದ್ದೆಗಳಿಗೆ ಧಕ್ಕೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸರ್ಕಾರದ ಗಮನಕ್ಕೆ ಹಲವು ಬಾರಿ ಮನವಿ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.
ಈ ಕುರಿತು ಸೆ.9ರಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆದಿದ್ದು, ಬಿಎಸ್ಸಿ ನರ್ಸಿಂಗ್ ಅರ್ಹತೆ ಹಿಂಪಡೆಯುವಂತೆ ಪ್ರಮುಖವಾಗಿ ಮನವಿ ಮಾಡಲಾಗಿತ್ತು. ಈ ವಿಷಯ ಸರ್ಕಾರದ ಮಟ್ಟದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ಸೆ.15ರಂದು ಅಂತಿಮ ಗೆಜೆಟ್ ನೋಟಿಫಿಕೇಶನ್ ಪ್ರಕಟವಾದರೂ, ಸಂಘ ಸಲ್ಲಿಸಿದ್ದ ಆಕ್ಷೇಪಣೆಗಳನ್ನು ಹೇಗೆ ಪರಿಗಣಿಸಲಾಗಿದೆ ಎಂಬ ಬಗ್ಗೆ ಸ್ಪಷ್ಟವಾದ ಅಧಿಕೃತ ಮಾಹಿತಿ ನೀಡಿಲ್ಲ ಎಂದು ಮಾನಸಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಸ್ತುತ ಸಿಎಚ್ಒಗಳ ರಿಲೊಕೇಶನ್ ಹಾಗೂ ಸ್ಥಳಾಂತರ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಪ್ರತಿಭಟನಾ ಕಾರ್ಯಕ್ರಮ ಪೂರ್ಣಗೊಳ್ಳುವವರೆಗೆ ಯಾವುದೇ ಸಿಎಚ್ಒ ರಿಲೊಕೇಶನ್ ಅಥವಾ ಸ್ಥಳಾಂತರ ಪ್ರಕ್ರಿಯೆ ಹಾಗೂ ಆದೇಶ ಕೈಗೊಳ್ಳಬಾರದು ಎಂದು ಸಂಘ ಆಗ್ರಹಿಸಿದೆ.
ಸಿಎಚ್ಒಗಳ ಸೇವೆ ಕಾಯಂಗೊಳಿಸಿ ಉದ್ಯೋಗ ಭದ್ರತೆ ಕಲ್ಪಿಸಬೇಕು, ಪಿಎಚ್ಸಿಒ (ಎಎನ್ಎಂ) ಹಾಗೂ ಹೆಚ್ ಐ ಒ ಹುದ್ದೆಗಳಿಗೆ ನೀಡಿರುವ ಬಿಎಸ್ಸಿ ನರ್ಸಿಂಗ್ ಅರ್ಹತೆಯನ್ನು ಹಿಂಪಡೆಯಬೇಕು, ಸಂಘ ಸಲ್ಲಿಸಿರುವ ಎಲ್ಲ ಆಕ್ಷೇಪಣೆಗಳನ್ನು ಸಮಗ್ರವಾಗಿ ಪರಿಗಣಿಸಿ ಸ್ಪಷ್ಟವಾದ ಅಧಿಕೃತ ಹೇಳಿಕೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಇದಲ್ಲದೆ, ಈಗಾಗಲೇ ಸೇವೆ ಸಲ್ಲಿಸುತ್ತಿರುವ ಸಿಎಚ್ಒಗಳ ಕ್ಯಾಡರ್ ಪ್ರೊಟೆಕ್ಷನ್ ಖಚಿತಪಡಿಸಬೇಕು, ಸಿಎಚ್ಒಗಳ ವೇತನ ಬಡ್ತಿ ಹಾಗೂ ವೃತ್ತಿ ಪ್ರಗತಿಗೆ ಅವಕಾಶ ಕಲ್ಪಿಸಬೇಕು ಮತ್ತು ಸಿಎಚ್ಒಗಳ ಟಿಎ/ಡಿಎ ಸೇರಿದಂತೆ ಸೇವಾ ನಿಯಮಗಳನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪರಿಷ್ಕರಿಸಬೇಕು ಎಂದು ಆಗ್ರಹಿಸಿದರು.
ಸಿಎಚ್ಒಗಳ ಸೇವೆ, ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಪರಿಗಣಿಸಿ ಸೂಕ್ತ ವೇತನ ಪರಿಷ್ಕರಣೆ ಮಾಡಬೇಕು. ಅವರ ಅನುಭವ ಮತ್ತು ಪರಿಣತಿಯನ್ನು ಬಳಸಿಕೊಂಡು ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಮತ್ತಷ್ಟು ಬಲಪಡಿಸಬೇಕು ಎಂದು ಅವರು ಹೇಳಿದರು.
ಪಾರದರ್ಶಕ ಹಾಗೂ ನ್ಯಾಯಸಮ್ಮತ ಅಂತರ್ಜಿಲ್ಲಾ ವರ್ಗಾವಣೆ ನೀತಿ ಜಾರಿಗೆ ತರಬೇಕು. ಸಿಎಚ್ಒಗಳ ಸೇವಾ ಭದ್ರತೆ, ವೃತ್ತಿ ಪ್ರಗತಿ, ಉದ್ಯೋಗ ಭದ್ರತೆ ಹಾಗೂ ಸ್ಥಳಾಂತರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾನಸಯ್ಯ ಒತ್ತಾಯಿಸಿದರು.
ಸಂಘವು ತನ್ನ ಬೇಡಿಕೆಗಳನ್ನು ಶಾಂತಿಯುತ ಹಾಗೂ ಪ್ರಜಾಸತ್ತಾತ್ಮಕ ರೀತಿಯಲ್ಲಿ ಸರ್ಕಾರದ ಗಮನಕ್ಕೆ ತರುತ್ತಿದ್ದು, ಸಮಸ್ಯೆಗಳಿಗೆ ಪರಿಹಾರ ದೊರೆಯುವವರೆಗೆ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಮಿತ್ ಗಾಯಕ್ವಾಡ್, ಚೆನ್ನಪ್ಪ ಬಿ. ನಾಯಕ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.



