ಅಪರಾಧ

ಸೆಂಟ್ರಿಂಗ್ ಗುತ್ತಿಗೆದಾರ ಆತ್ಮಹತ್ಯೆ: ಕಾಂಗ್ರೆಸ್ ಮುಖಂಡ ಸೇರಿ ಇಬ್ಬರ ವಿರುದ್ಧ ಎಫ್‌ಐಆರ್

ಬಾಕಿ ಹಣ ಕೇಳಿದ್ದಕ್ಕೆ ಬೆದರಿಕೆ ಆರೋಪ; ಕುಟುಂಬದ ದೂರಿನ ಮೇರೆಗೆ ಪ್ರಕರಣ ದಾಖಲು

ಕಲಬುರಗಿ, ಜು.31: ಜಿಲ್ಲೆಯ ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದಲ್ಲಿ ಸೆಂಟ್ರಿಂಗ್ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಅರವಿಂದ್ ಚವ್ಹಾಣ್ ಹಾಗೂ ಅವರ ಅಳಿಯ ಅಮಿತ್ ರಾಠೋಡ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮೃತರನ್ನು ರಟಕಲ್ ಗ್ರಾಮದ ನಿವಾಸಿ ಖಾದಿರ್ ಪಾಷಾ (40) ಎಂದು ಗುರುತಿಸಲಾಗಿದೆ. ಬಾಕಿ ಹಣ ಕೇಳಿದ ಹಿನ್ನೆಲೆಯಲ್ಲಿ ಆರೋಪಿಗಳು ಬೆದರಿಕೆ ಹಾಕಿದ್ದರಿಂದ ಮನನೊಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.

ಕುಟುಂಬದವರ ಮಾಹಿತಿ ಪ್ರಕಾರ, ಸೇಡಂನ ಸಿಮೆಂಟ್ ಕಾರ್ಖಾನೆಯ ಕಾಮಗಾರಿಯನ್ನು ಗುತ್ತಿಗೆ ಪಡೆದಿದ್ದ ಅರವಿಂದ್ ಚವ್ಹಾಣ್ ಅವರು, ಅದರ ಸೆಂಟ್ರಿಂಗ್ ಕೆಲಸವನ್ನು ಖಾದಿರ್ ಪಾಷಾಗೆ ನೀಡಿದ್ದರು. ಕಾಮಗಾರಿ ಪೂರ್ಣಗೊಂಡ ಬಳಿಕ ಬಾಕಿ ಹಣವನ್ನು ಕೇಳಿದಾಗ ಅರವಿಂದ್ ಚವ್ಹಾಣ್ ಹಾಗೂ ಅಮಿತ್ ರಾಠೋಡ್ ಅವರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಯಿಂದ ತೀವ್ರ ಮನನೊಂದ ಖಾದಿರ್ ಪಾಷಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ.

ಈ ಸಂಬಂಧ ಮೃತರ ಪತ್ನಿ ಅನಿಸಾ ಬೇಗಂ ಅವರು ನೀಡಿದ ದೂರಿನ ಆಧಾರದ ಮೇಲೆ ರಟಕಲ್ ಪೊಲೀಸ್ ಠಾಣೆಯಲ್ಲಿ ಅರವಿಂದ್ ಚವ್ಹಾಣ್ ಹಾಗೂ ಅಮಿತ್ ರಾಠೋಡ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಆತ್ಮಹತ್ಯೆಗೆ ಕಾರಣವಾದ ಅಂಶಗಳ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಪ್ರಕರಣದ ತನಿಖೆ ಮುಂದುವರಿದಿದ್ದು, ತನಿಖೆಯ ಬಳಿಕವೇ ಘಟನೆಯ ನಿಖರ ಕಾರಣ ಹಾಗೂ ಆರೋಪಗಳ ಸತ್ಯಾಸತ್ಯತೆ ಹೊರಬೀಳಲಿದೆ.

Related Articles

Leave a Reply

Your email address will not be published. Required fields are marked *

Back to top button