ಸಾಂಸ್ಕೃತಿಕ

ಕಲೆ-ಸಂಸ್ಕೃತಿಯನ್ನು ಬೆಳೆಸುವುದಕ್ಕಿಂತ ಉಳಿಸಿಕೊಳ್ಳುವುದೇ ಇಂದಿನ ಅಗತ್ಯ: ಜಡಿಯಪ್ಪ ಗೆದ್ಲಗಟ್ಟಿ

ಡಿಜಿಟಲ್ ಯುಗದಲ್ಲೂ ಜಾನಪದ ಕಲೆಯ ಮೂಲ ಸತ್ವ ಕಾಪಾಡುವಂತೆ ಕರೆ; ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

ಕಲಬುರಗಿ, ಜು.30: ಇಂದಿನ ಕಾಲಘಟ್ಟದಲ್ಲಿ ನಮ್ಮ ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಕೇವಲ ಬೆಳೆಸುವುದಷ್ಟೇ ಅಲ್ಲ, ಅದನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವುದು ಪ್ರತಿಯೊಬ್ಬ ಕಲಾವಿದ ಹಾಗೂ ಸಾರ್ವಜನಿಕರ ಜವಾಬ್ದಾರಿಯಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ಹೇಳಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ ಸುವರ್ಣ ಸಭಾಭವನದಲ್ಲಿ ಶ್ರೀ ಸಾಯಿ ಜನಜಾಗೃತಿ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಕಲೆ ಮತ್ತು ಸಂಸ್ಕೃತಿಯ ಸಂರಕ್ಷಣೆಗೆ ನಿರಂತರವಾಗಿ ಶ್ರಮಿಸುತ್ತಿದ್ದು, ಬೀದಿ ನಾಟಕಗಳು, ಸಂಗೀತ ಕಾರ್ಯಕ್ರಮಗಳು, ರಂಗಾಯಣದ ಚಟುವಟಿಕೆಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜಾನಪದ ಕಲೆಯನ್ನು ಪೋಷಿಸುವ ವಿವಿಧ ಕಾರ್ಯಕ್ರಮಗಳ ಮೂಲಕ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ ಎಂದು ಹೇಳಿದರು.

ಹಿಂದಿನ ದಿನಗಳಲ್ಲಿ ಪ್ರತಿಯೊಂದು ಊರಿನಲ್ಲೂ ಭಜನೆ ಮತ್ತು ಶೋಭಾನೆ ಪದಗಳನ್ನು ಹಾಡುವ ಕಲಾವಿದರು ಜನಮಾನಸದಲ್ಲಿ ವಿಶೇಷ ಸ್ಥಾನ ಪಡೆದಿದ್ದರು. ಯಾವುದೇ ಶುಭ ಸಮಾರಂಭಗಳಲ್ಲಿ ರಾತ್ರಿಯಿಡೀ ಭಜನೆ, ಶೋಭಾನೆ ಪದಗಳ ಗಾಯನದ ಮೂಲಕ ಸಂಭ್ರಮ ಆಚರಿಸಲಾಗುತ್ತಿತ್ತು. ಆದರೆ, ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಕಾಲ ಬದಲಾಗಿದ್ದು, ಇಂದು ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಫೋನ್ ಇರುವುದರಿಂದ ಮನೆಗೊಬ್ಬ ಕಲಾವಿದರು ಬೆಳೆಯುವಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.

ಮೊಬೈಲ್, ರೇಡಿಯೋ, ದೂರದರ್ಶನ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮ ಕಲೆಯನ್ನು ಕೆಲವೇ ಕ್ಷಣಗಳಲ್ಲಿ ವಿಶ್ವದಾದ್ಯಂತ ತಲುಪಿಸುವ ಅವಕಾಶ ಸಿಕ್ಕಿದೆ. ಅಭಿವ್ಯಕ್ತಿಯ ಮಾಧ್ಯಮಗಳು ಬದಲಾಗಿದ್ದರೂ ಹಾಡು, ನೃತ್ಯ, ನಾಟಕ ಹಾಗೂ ಬೀದಿ ನಾಟಕಗಳಂತಹ ಕಲಾ ಪ್ರಕಾರಗಳ ಮೂಲ ಸತ್ವ ಇಂದಿಗೂ ಅಚಲವಾಗಿದೆ ಎಂದು ತಿಳಿಸಿದರು.

ಡಿಜಿಟಲ್ ಮಾಧ್ಯಮಗಳ ಪರಿಣಾಮದಿಂದ ಹಳ್ಳಿಯ ಮೂಲೆಯಲ್ಲಿರುವ ಪ್ರತಿಭಾವಂತ ಕಲಾವಿದನೂ ಕ್ಷಣಮಾತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ಅವಕಾಶ ಪಡೆಯುತ್ತಿದ್ದಾನೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ವಿಶ್ವದ ಮುಂದೆ ಪರಿಚಯಿಸಬೇಕು ಎಂದು ಕರೆ ನೀಡಿದರು.

ಸರ್ಕಾರ ಆಯೋಜಿಸುವ ಕಲಾ ಕಾರ್ಯಕ್ರಮಗಳು ಇನ್ನಷ್ಟು ಜನರನ್ನು ತಲುಪುವಂತಾಗಬೇಕು. ಕಾರ್ಯಕ್ರಮಗಳಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಜಾನಪದ, ಡೊಳ್ಳು, ಕಂಸಾಳೆ ಸೇರಿದಂತೆ ಎಲ್ಲ ಸಾಂಪ್ರದಾಯಿಕ ಕಲಾ ಪ್ರಕಾರಗಳ ಮೂಲ ಸ್ವರೂಪ ಮತ್ತು ಮೌಲ್ಯಗಳನ್ನು ಕಾಪಾಡಿ ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಜಡಿಯಪ್ಪ ಗೆದ್ಲಗಟ್ಟಿ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಸುಭಾಷ್ ಬನ್ನಪಟ್ಟಿ, ಮಣ್ಣೂರ ಗಂಗಾ ಮಾತೋಶ್ರೀ ಅಂಗವಿಕಲರ ಸಂಘದ ಕಾರ್ಯದರ್ಶಿ ವೆಂಕಟೇಶ ಮಾಲಿಪಾಟೀಲ, ಮನೀಷ್ ಕನ್ನಡ ದಿನಪತ್ರಿಕೆಯ ಸಂಪಾದಕ ರಾಜು ದೇಶಮುಖ, ಮಿನುಗುತಾರೆ ಮಹಿಳಾ ಕಲಾವಿದರ ಸಂಘದ ಅಧ್ಯಕ್ಷೆ ಕಲ್ಪನಾ ಗೋಲ್ಡ್ ಸ್ಮಿತ್, ಆಕಾಶವಾಣಿ ಕಲಾವಿದ ಬಸಯ್ಯ ಗುತ್ತೇದಾರ, ಜಯಶ್ರೀ ವಿ. ಗುತ್ತೇದಾರ, ನಿವೃತ್ತ ಶಿಕ್ಷಕಿ ಸುಗಂಧಾಬಾಯಿ ವೀರಭದ್ರಪ್ಪ ಪಸಾರ, ಪಿ.ಆರ್. ಪಾಂಡು ಹಾಗೂ ಮಲ್ಲಿಕಾರ್ಜುನ ಆರ್. ಜಾನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button