371ನೇ(ಜೆ) ಕಲಂ ಸಾಧನೆ, ಆಶಯ ಕುರಿತು ಸರಣಿ ವಿಚಾರ ಸಂಕಿರಣ

ಕಲಬುರಗಿ, ಸೆ.12: ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಜಾರಿಯಾಗಿರುವ ಸಂವಿಧಾನದ 371ನೇ(ಜೆ) ಕಲಂನ ಸಾಧನೆ, ಆಶಯ ಹಾಗೂ ಇದರಿಂದ ಈ ಭಾಗದ ಜನರಿಗೆ ದೊರೆತಿರುವ ಸೌಲಭ್ಯಗಳ ಕುರಿತು ಸರಣಿ ವಿಚಾರ ಸಂಕಿರಣಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಶರಣಬಸವ ವಿಶ್ವವಿದ್ಯಾಲಯ ಹಾಗೂ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಹಯೋಗದಲ್ಲಿ ನಡೆಯಲಿರುವ ವಿಚಾರ ಸಂಕಿರಣಗಳ ಉದ್ಘಾಟನಾ ಕಾರ್ಯಕ್ರಮ ಸೆ.16ರಂದು ಬುಧವಾರ ನಗರದ ಎಸ್‌ಬಿ ಕಾಲೇಜು ಆವರಣದಲ್ಲಿರುವ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ನಡೆಯಲಿದೆ.
ರಾಜ್ಯದ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮತ್ತು 371ನೇ(ಜೆ) ಕಲಂ ಸಂಪುಟ ಉಪ ಸಮಿತಿ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಸಮಿತಿ ಅಧ್ಯಕ್ಷ ಡಾ. ಲಕ್ಷ್ಮಣ ದಸ್ತಿ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 371ನೇ(ಜೆ) ಕಲಂ ಜಾರಿಯಾಗಿ ಸುಮಾರು 13 ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳು, ನಿರುದ್ಯೋಗಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ದೊರೆತಿರುವ ಪ್ರಯೋಜನಗಳು, ಇನ್ನೂ ಈಡೇರಬೇಕಿರುವ ನಿರೀಕ್ಷೆಗಳು ಹಾಗೂ ಸಮಗ್ರ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿಚಾರ ಸಂಕಿರಣಗಳಲ್ಲಿ ಚರ್ಚೆ ನಡೆಯಲಿದೆ.
ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ವಿಚಾರ ಸಂಕಿರಣಗಳನ್ನು ನಡೆಸುವ ಕುರಿತು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ನಿರ್ಧರಿಸಲಾಗಿದೆ. ಇದರ ಅಂಗವಾಗಿ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಸರಣಿ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಡಾ. ದಸ್ತಿ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಶರಣಬಸವೇಶ್ವರ ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿ ದೊಡ್ಡಪ್ಪ ಎಸ್. ಅಪ್ಪ ಅವರು ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್. ಅಪ್ಪ ಅವರು ಪಾವನ ಸಾನ್ನಿಧ್ಯ ವಹಿಸಲಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಸಣ್ಣ ನೀರಾವರಿ ಸಚಿವ ಡಾ. ಅಜಯಸಿಂಗ್, ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ, ಖ್ವಾಜಾ ಬಂದೇನವಾಜ್ ಸಂಸ್ಥೆ ಹಾಗೂ ಕೆಬಿಎನ್ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ಜಿಲ್ಲೆಯ ಶಾಸಕರು, ಗಣ್ಯರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಲಿದ್ದಾರೆ.
371ನೇ(ಜೆ) ಕಲಂನಡಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ದೊರೆತಿರುವ ವಿಶೇಷ ಸ್ಥಾನಮಾನದಿಂದ ಆಗಿರುವ ಸಾಧನೆಗಳನ್ನು ಅವಲೋಕಿಸುವುದರ ಜೊತೆಗೆ, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ಡಾ. ದಸ್ತಿ ತಿಳಿಸಿದ್ದಾರೆ.
ವಿಶೇಷವಾಗಿ ಶಿಕ್ಷಣ ಕ್ಷೇತ್ರದ ಗಣ್ಯರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿಚಾರ ಸಂಕಿರಣವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.



