ಅಪಘಾತಅಪರಾಧ

ಕಲಬುರಗಿ ಬಳಿ ಎರಡು ಬಸ್‌ಗಳ ಭೀಕರ ಡಿಕ್ಕಿ; ಇಬ್ಬರು ಚಾಲಕರ ದುರ್ಮರಣ, ಹಲವರಿಗೆ ಗಾಯ

ಡೊಂಗರಗಾಂವ್ ಕ್ರಾಸ್ ಸಮೀಪ ಅಪಘಾತ; ಗಾಯಾಳುಗಳಿಗೆ ಚಿಕಿತ್ಸೆ, ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ್ ಪಾಟೀಲ ಭೇಟಿ

ಕಮಲಾಪುರ, ಆ.2: ತಾಲೂಕಿನ ಡೊಂಗರಗಾಂವ್ ಕ್ರಾಸ್ ಸಮೀಪ ಮರಗುಟ್ಟಿ ಹತ್ತಿರ ಮುಖಾಮುಖಿ ಡಿಕ್ಕಿಯಾದ ಎರಡು ಬಸ್‌ಗಳ ಭೀಕರ ಅಪಘಾತದಲ್ಲಿ ಇಬ್ಬರು ಚಾಲಕರು ಮೃತಪಟ್ಟಿದ್ದು, ಹಲವಾರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.

ಎದುರಿನಿಂದ ಬರುತ್ತಿದ್ದ ಲಾರಿಯನ್ನು ಓವರ್‌ಟೇಕ್ ಮಾಡಲು ಯತ್ನಿಸಿದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಅಪಘಾತದ ವೇಳೆ ಲಾರಿಯು ರಸ್ತೆ ಬದಿಯ ಕಂದಕಕ್ಕೆ ಉರುಳಿದರೂ, ಅದರಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತದಲ್ಲಿ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಹುಲ್ಯಾಳ ಗ್ರಾಮದ ನಿವಾಸಿ ಹಾಗೂ ಬೀದರ್–ಕಲಬುರಗಿ ಬಸ್ ಚಾಲಕ ತುಕಾರಾಮ ಏಕನಾಥರಾವ್ ಬಿರಾದಾರ್ (46) ಸ್ಥಳದಲ್ಲೇ ಮೃತಪಟ್ಟರು. ಮತ್ತೊಬ್ಬರಾದ ಬೀದರ್–ದಾವಣಗೆರೆ ಸ್ಲೀಪರ್ ಬಸ್ ಚಾಲಕ, ಹುಮನಾಬಾದ್ ತಾಲೂಕಿನ ಸೆಡೋಳ ಗ್ರಾಮದ ನಿವಾಸಿ ಶಿವಾನಂದರೆಡ್ಡಿ ಅವರು ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟರು.

ಅಪಘಾತದಲ್ಲಿ ಹಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗಂಭೀರ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಕಲಬುರಗಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಘಟನಾ ಸ್ಥಳಕ್ಕೆ ಡಿಐಜಿ ಶಾಂತನು ಸಿನ್ಹಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ್ ಮೇಘಣ್ಣವರ, ಡಿವೈಎಸ್‌ಪಿ ಲೋಕೇಶ್ವರ, ಸಿಪಿಐ ಶಿವಶಂಕರ ಸಾಹು ಹಾಗೂ ಪಿಎಸ್‌ಐ ಸುಖಾನಂದ ಸಿಂಗೆ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ರಸ್ತೆ ಸಂಚಾರವನ್ನು ಸುಗಮಗೊಳಿಸಲಾಯಿತು.

ಗಾಯಾಳುಗಳಿಗೆ ಭೇಟಿ ನೀಡಿದ ಅರುಣಕುಮಾರ್ ಪಾಟೀಲ

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ್ ಎಂ.ವೈ. ಪಾಟೀಲ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಸುಶೀಲಾ ಬಿ. ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಈ ವೇಳೆ ಮಾತನಾಡಿದ ಅರುಣಕುಮಾರ್ ಪಾಟೀಲ, ಪ್ರತಿದಿನ ನೂರಾರು ಪ್ರಯಾಣಿಕರನ್ನು ಸುರಕ್ಷಿತವಾಗಿ ಗಮ್ಯಸ್ಥಾನಕ್ಕೆ ತಲುಪಿಸುತ್ತಿದ್ದ ಇಬ್ಬರು ಕರ್ತವ್ಯನಿಷ್ಠ ಚಾಲಕರನ್ನು ಕಳೆದುಕೊಂಡಿರುವುದು ಅತ್ಯಂತ ದುಃಖಕರ ಸಂಗತಿ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬ ಸದಸ್ಯರಿಗೆ ಈ ನೋವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಸಂತಾಪ ವ್ಯಕ್ತಪಡಿಸಿದರು.

ಗಾಯಾಳುಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಅವರಿಗೆ ಅಗತ್ಯವಿರುವ ಎಲ್ಲ ವೈದ್ಯಕೀಯ ಚಿಕಿತ್ಸೆ ಮತ್ತು ಸೌಲಭ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮೃತರ ಕುಟುಂಬಗಳೊಂದಿಗೆ ನಿಗಮ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಅವರು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button