ಕಲಬುರಗಿಯಲ್ಲಿ ಗುಡುಗು–ಸಿಡಿಲಿನ ಮಳೆ: ಸಿಡಿಲು ಬಡಿದು ಇಬ್ಬರು ಮಹಿಳೆಯರ ಸಾವು

ಕಲಬುರಗಿ, ಸೆ.22: ಜಿಲ್ಲೆಯಲ್ಲಿ ಸೋಮವಾರ ಹಾಗೂ ಮಂಗಳವಾರ ಮಧ್ಯಾಹ್ನ ಗುಡುಗು–ಸಿಡಿಲಿನ ಸಹಿತ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕಮಲಾಪುರ ತಾಲ್ಲೂಕಿನ ನಾಗೂರ ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ.
ಮೃತರನ್ನು ನಾಗೂರ ಗ್ರಾಮದ ಜಮೀನು ಮಾಲೀಕರಾದ ಲಕ್ಷ್ಮೀ ಗುತ್ತೇದಾರ್ (45) ಹಾಗೂ ಕೂಲಿ ಕಾರ್ಮಿಕ ಮಹಿಳೆ ಸೈಜಾದ್ ಬಿ. ಎಂದು ಗುರುತಿಸಲಾಗಿದೆ.
ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಳೆ ಜೋರಾದ ಹಿನ್ನೆಲೆಯಲ್ಲಿ ರಕ್ಷಣೆಗಾಗಿ ಇಬ್ಬರೂ ಮರದಡಿ ಕುಳಿತು ಊಟ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಹಲವು ಕಡೆ ಜಲಾವೃತ
ಮಂಗಳವಾರ ಮಧ್ಯಾಹ್ನ ಗುಡುಗು–ಸಿಡಿಲಿನ ಸಹಿತ ಸುರಿದ ಮಳೆಯಿಂದ ಕಲಬುರಗಿ ನಗರದ ಹಲವು ರಸ್ತೆಗಳು ಜಲಾವೃತಗೊಂಡವು. ರಸ್ತೆಗಳ ಮೇಲೆ ನೀರು ಹರಿದ ಪರಿಣಾಮ ವಾಹನ ಸವಾರರು ಪರದಾಡಿದರು.
ಸಿಟಿ ಬಸ್ ನಿಲ್ದಾಣದ ರಸ್ತೆ ಮಾರ್ಗದಲ್ಲಿ ಮಳೆ ನೀರು ಪ್ರವಾಹದಂತೆ ಹರಿದ ಪರಿಣಾಮ ದ್ವಿಚಕ್ರ ವಾಹನ ಸವಾರರು ಸಂಚಾರಕ್ಕೆ ತೊಂದರೆ ಅನುಭವಿಸಿದರು. ಲಾಲ್‌ಗೇರಿ ಕ್ರಾಸ್‌ನಲ್ಲಿಯೂ ಮಳೆ ನೀರು ರಸ್ತೆಯಲ್ಲಿ ಹರಿದು ಸಂಚಾರ ಅಸ್ತವ್ಯಸ್ತಗೊಂಡಿತು.
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ನೀರು ನಿಂತ ಪರಿಣಾಮ ನ್ಯಾಯವಾದಿಗಳು ಹಾಗೂ ಕಕ್ಷಿದಾರರು ತೊಂದರೆ ಅನುಭವಿಸಿದರು.



