ಬಸವಣ್ಣನವರ ಜೀವನಾಧಾರಿತ ಚಿತ್ರಗಳ ರಚನೆಯ ಮೂಲಕ ಜಿಲ್ಲೆಗೆ ಕೀರ್ತಿ ತಂದ ಸೋಮಶೇಖರ್: ಠಾಕೂರ್

ಬೀದರ್, ನ.11: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ನಿವೃತ್ತ ಚಿತ್ರಕಲಾ ಶಿಕ್ಷಕ ಸಿ.ಬಿ. ಸೋಮಶೇಖರ್ ಅವರನ್ನು ಬೀದರ್ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ವತಿಯಿಂದ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವಿಷ್ಣುಕಾಂತ ಠಾಕೂರ್ ಮಾತನಾಡಿ, ಸೋಮಶೇಖರ್ ಅವರು ಆದರ್ಶ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರವೂ ಚಿತ್ರಕಲೆಯ ಮೇಲಿನ ಆಸಕ್ತಿಯನ್ನು ಮುಂದುವರಿಸಿದ್ದಾರೆ. ಬಸವಣ್ಣನವರ ಜೀವನಾಧಾರಿತ ಸುಂದರ ಚಿತ್ರಗಳನ್ನು ರಚಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಮ್ಮ ಸ್ವಂತ ಖರ್ಚಿನಲ್ಲಿ ಮನೆಯಲ್ಲಿ ಕಲಾ ಗ್ಯಾಲರಿಯನ್ನು ನಿರ್ಮಿಸಿರುವುದು ವಿಶೇಷವಾಗಿದೆ. ಇದು ಜಿಲ್ಲೆಯಲ್ಲಿಯೇ ಮೊದಲ ಪ್ರಯತ್ನವಾಗಿದೆ. ಅವರು ರಚಿಸಿರುವ ಚಿತ್ರಗಳು ಅತ್ಯಂತ ಸುಂದರವಾಗಿದ್ದು, ಕಲಾಸಕ್ತರ ಗಮನ ಸೆಳೆಯುತ್ತಿವೆ. ಈ ಸಾಧನೆಗೆ ಅವರ ಪತ್ನಿ ಹಾಗೂ ಮಕ್ಕಳು ಉತ್ತಮ ಸಹಕಾರ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಸೋಮಶೇಖರ್ ಅವರ ಕಲಾಸೇವೆಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಅವರ ಗಣನೀಯ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ಅವರಿಗೆ ಮಾತ್ರವಲ್ಲದೆ ಇಡೀ ಬೀದರ್ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ವಿಷ್ಣುಕಾಂತ ಠಾಕೂರ್ ಹೇಳಿದರು.
ಕಾರ್ಯಕ್ರಮದಲ್ಲಿ ಸುದರ್ಶನ್ ಬಿ., ಚಂದ್ರಶೇಖರ ತೂಗಾ, ಪ್ರಕಾಶ್ ತಾಂದಳೆ, ಸಂತೋಷ್ ವನಿಕೇರಿ, ಆನಂದ ಜಾಧವ್, ಉಮರ್ ಅಲಿ, ಖುರಂ, ಸತ್ಯವತಿ ಪಾಟೀಲ್, ಜ್ಯೋತಿ ಭಂಡೆ, ಸುನೈನಾ, ವೈಶಾಲಿ ಪಾಠಕ್ ಹಾಗೂ ಶಿವಾನಂದ ಮಣಗೆ ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕರಾದ ಶ್ರೀಕಾಂತ್ ಬಿರಾದಾರ್, ಕಾಶಿನಾಥ ಬಾಳೂರಕರ್, ಆನಂದ ದೀನೆ ಹಾಗೂ ಪ್ರಭಾಕರ್ ಜೆ. ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ಚಿತ್ರಕಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


