ದೀಪಾವಳಿ ಸಂಭ್ರಮಕ್ಕೆ ಮೆರುಗು ನೀಡಿದ ಸಿಂಗಾರಗೊಂಡ ಎಮ್ಮೆ–ಕೋಣಗಳ ಓಟ

ಬೀದರ್, ನ.11: ದೀಪಾವಳಿ ಹಬ್ಬದ ಬಲಿಪಾಡ್ಯಮಿ ಅಂಗವಾಗಿ ನಗರದ ಐತಿಹಾಸಿಕ ಚೌಬಾರಾ ಬಳಿ ಗೌಳಿ ಸಮುದಾಯದ ವತಿಯಿಂದ ಸಾಂಪ್ರದಾಯಿಕ ಎಮ್ಮೆ–ಕೋಣಗಳ ಓಟ ಹಾಗೂ ಮೆರವಣಿಗೆ ಮಂಗಳವಾರ ಸಂಭ್ರಮದಿಂದ ನಡೆಯಿತು.
ಗೌಳಿ ಸಮುದಾಯದ ಬಂಧುಗಳು ತಮ್ಮ ಜೀವನಾಧಾರವಾಗಿರುವ ಎಮ್ಮೆ ಮತ್ತು ಕೋಣಗಳನ್ನು ಬಣ್ಣ, ಹೂಮಾಲೆ, ರಿಬ್ಬನ್, ಗೆಜ್ಜೆ ಹಾಗೂ ನವಿಲುಗರಿಗಳಿಂದ ಆಕರ್ಷಕವಾಗಿ ಸಿಂಗರಿಸಿ ಪೂಜೆ ಸಲ್ಲಿಸಿದರು. ಸಂಜೆ ಐದು ಗಂಟೆಯ ಸುಮಾರಿಗೆ ಅಲಂಕೃತ ಕೋಣಗಳನ್ನು ಚೌಬಾರಾ ಬಳಿಗೆ ಕರೆತಂದು ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಬ್ಯಾಂಡ್, ವಾದ್ಯ ಹಾಗೂ ಪಟಾಕಿಗಳ ಸದ್ದಿನ ನಡುವೆ ಎಮ್ಮೆ–ಕೋಣಗಳನ್ನು ಚೌಬಾರಾ ಸುತ್ತಲೂ ಓಡಿಸಲಾಯಿತು. ಜಾನುವಾರುಗಳ ಶಕ್ತಿ, ಚುರುಕುತನ ಹಾಗೂ ಆರೋಗ್ಯದ ಪ್ರದರ್ಶನ ನೆರೆದಿದ್ದವರ ಗಮನ ಸೆಳೆಯಿತು.
ನಂತರ ಜಾನುವಾರುಗಳ ಮೆರವಣಿಗೆ ನಗರದ ಜನವಾಡಾ ರಸ್ತೆಯ ರೋಕಡೆ ಹನುಮಾನ ಮಂದಿರದವರೆಗೆ ಸಾಗಿತು. ಅಲ್ಲಿ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಯನ್ನು ಪೂರ್ಣಗೊಳಿಸಲಾಯಿತು.
ಗೌಳಿ ಸಮುದಾಯದ ಯುವಕರು ಸಾಂಪ್ರದಾಯಿಕ ಉಡುಗೆ ಧರಿಸಿ ಜಾನುವಾರುಗಳೊಂದಿಗೆ ಕುಣಿದು ಕುಪ್ಪಳಿಸುತ್ತ ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಗೌಳಿ ಸಮುದಾಯದ ಪಾಲಿಗೆ ಎಮ್ಮೆ–ಕೋಣಗಳು ಕೇವಲ ಜಾನುವಾರುಗಳಲ್ಲ; ಅವು ಜೀವನೋಪಾಯದ ಪ್ರಮುಖ ಆಧಾರ ಹಾಗೂ ಅಮೂಲ್ಯ ಸಂಪತ್ತು. ಹೈನುಗಾರಿಕೆಯನ್ನೇ ಪ್ರಮುಖ ಕಸುಬಾಗಿಸಿಕೊಂಡಿರುವ ಸಮುದಾಯದ ಅನೇಕ ಕುಟುಂಬಗಳು ವರ್ಷವಿಡೀ ಹಾಲಿನ ವ್ಯಾಪಾರದ ಮೂಲಕ ಜೀವನ ಸಾಗಿಸುತ್ತಿವೆ.
ತಮ್ಮ ಬದುಕಿಗೆ ಆಧಾರವಾಗಿರುವ ಜಾನುವಾರುಗಳಿಗೆ ಕೃತಜ್ಞತೆ ಸಲ್ಲಿಸುವುದರ ಜೊತೆಗೆ ಅವುಗಳ ಆರೋಗ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುವ ಉದ್ದೇಶದಿಂದ ತಲೆತಲಾಂತರಗಳಿಂದ ಈ ಆಚರಣೆಯನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ.
ಧಾರ್ಮಿಕ ನಂಬಿಕೆಯ ಪ್ರಕಾರ ಎಮ್ಮೆ ಅಥವಾ ಕೋಣವನ್ನು ಯಮಧರ್ಮರಾಜನ ವಾಹನವೆಂದು ಪರಿಗಣಿಸಲಾಗುತ್ತದೆ. ದೀಪಾವಳಿಯ ಬಲಿಪಾಡ್ಯಮಿಯಂದು ಅವುಗಳನ್ನು ಪೂಜಿಸುವುದರಿಂದ ದುಷ್ಟಶಕ್ತಿಗಳ ಪ್ರಭಾವ ದೂರವಾಗಿ, ಜಾನುವಾರುಗಳಿಗೆ ರೋಗರುಜಿನಗಳು ಬಾರದಂತೆ ರಕ್ಷಣೆ ದೊರೆಯುತ್ತದೆ ಎಂಬ ನಂಬಿಕೆಯೂ ಈ ಆಚರಣೆಯ ಹಿಂದಿದೆ.
ಆಧುನಿಕ ಜೀವನಶೈಲಿ ಹಾಗೂ ನಗರೀಕರಣದ ಪರಿಣಾಮವಾಗಿ ನಗರ ಪ್ರದೇಶದಲ್ಲಿ ಎಮ್ಮೆ ಸಾಕಾಣಿಕೆಯ ಪ್ರಮಾಣ ಕಡಿಮೆಯಾಗುತ್ತಿದ್ದರೂ, ಪೂರ್ವಜರಿಂದ ಬಂದಿರುವ ಈ ವಿಶಿಷ್ಟ ಸಂಪ್ರದಾಯವನ್ನು ಗೌಳಿ ಸಮುದಾಯ ಇಂದಿಗೂ ಉಳಿಸಿಕೊಂಡು ಬಂದಿದೆ. ಯುವಕರು ಉತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುತ್ತಿರುವುದು ವಿಶೇಷವಾಗಿದೆ. ಈ ಆಚರಣೆ ಸಮುದಾಯದ ಒಗ್ಗಟ್ಟು, ಸಹಬಾಳ್ವೆ ಹಾಗೂ ಸಾಮರಸ್ಯದ ಸಂಕೇತವಾಗಿ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಈಶ್ವರಸಿಂಗ್ ಠಾಕೂರ್, ಮಹಾನಗರ ಪಾಲಿಕೆ ಸದಸ್ಯ ಶಶಿಧರ ಹೊಸಳ್ಳಿ, ಗೌಳಿ ಸಮಾಜದ ಪ್ರಮುಖರಾದ ನರೇಶ ಗೌಳಿ, ಗೋರಖನಾಥ ಗೌಳಿ, ವಿಠಲರಾವ್ ಗೌಳಿ, ರಾಮಚಂದ್ರ ಗೌಳಿ, ಹೇಮಾಜಿ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
