ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿಗೆ ಕಲ್ಯಾಣ ಸಾಯಿಬಣ್ಣ ಕಂಬಾರ ಭಾಜನ

ಕಲಬುರಗಿ, ನ. 9: ಉಳಿಯು, ಸುತಿ ಹಿಡಿದು ಮರಕ್ಕೆ ಜೀವ ತುಂಬುವ ಮರದ ಕೆತ್ತನೆ ಕಲೆ ಇಂದು ಅಳಿವಿನ ಅಂಚಿನಲ್ಲಿದೆ. ಇಂತಹ ಸಂದರ್ಭದಲ್ಲಿ ಕಳೆದ ಐದು ದಶಕಗಳಿಂದ ಈ ಕಲೆಯನ್ನು ಉಳಿಸಿ, ಬೆಳೆಸಿಕೊಂಡು ಬಂದಿರುವ ಜಿಲ್ಲೆಯ ಹಿರಿಯ ಮರದ ಶಿಲ್ಪಿ ಕಲ್ಯಾಣ ಸಾಯಿಬಣ್ಣ ಕಂಬಾರ ಅವರಿಗೆ 2025ನೇ ಸಾಲಿನ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಗೌರವ ಪ್ರಶಸ್ತಿ ಲಭಿಸಿದೆ.
ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಯಡ್ರಾಮಿ ಹೋಬಳಿಯ ಸಾತಬೇಡ ಗ್ರಾಮದವರಾದ ಕಲ್ಯಾಣ ಕಂಬಾರ ಅವರು 1950ರಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ತಂದೆ ಸಾಯಿಬಣ್ಣ ಕಂಬಾರ ಅವರಿಂದ ಮರಗೆತ್ತನೆಯ ವಿದ್ಯೆಯನ್ನು ಕಲಿತ ಅವರು, ಅದನ್ನೇ ತಮ್ಮ ಬದುಕಿನ ವೃತ್ತಿಯನ್ನಾಗಿ ಮಾಡಿಕೊಂಡರು. ಸುಮಾರು ಹತ್ತನೇ ವಯಸ್ಸಿನಲ್ಲಿಯೇ ಮರದ ಶಿಲ್ಪಕಲೆಯನ್ನು ಆರಂಭಿಸಿದ ಅವರು, ಇಲ್ಲಿಯವರೆಗೆ ನೂರಾರು ಮನೆಗಳು ಹಾಗೂ ದೇವಸ್ಥಾನಗಳಿಗೆ ತಮ್ಮ ಕಲಾತ್ಮಕ ಕೆತ್ತನೆಯ ಸ್ಪರ್ಶ ನೀಡಿದ್ದಾರೆ.
ಪುರಾತನ ಶೈಲಿಯ ಎಂಟು ಅಂಕಣಗಳ ಪಡಸಾಲೆ, ತಲೆಬಾಗಿಲು, ತೊಲೆ, ತೋರಣ, ಕಮಾನು, ನಾಗಬಂಧ, ಮೋರಾಬಂಧ, ಭಿತ್ತಿ ಚೌಕಿ, ಗೋಪುರ, ಉಗ್ರಾಣ ಸೇರಿದಂತೆ ಹಲವು ವಿನ್ಯಾಸಗಳನ್ನು ಮರದಲ್ಲಿ ಅತ್ಯಂತ ಸೂಕ್ಷ್ಮವಾಗಿ ಕೆತ್ತುವ ಕೌಶಲ ಹೊಂದಿದ್ದಾರೆ. ಗ್ರಾಮ ದೇವತೆಗಳಾದ ದ್ಯಾಮವ್ವ, ಮಾರಮ್ಮ, ಕೆಂಪಮ್ಮ, ದುರ್ಗಮ್ಮ ಮೊದಲಾದ ದೇವತೆಗಳ ಜನಪದ ಶೈಲಿಯ ಮೂರ್ತಿಗಳನ್ನು ಸಹ ಮರದಲ್ಲಿ ಸುಂದರವಾಗಿ ರೂಪಿಸುತ್ತಾರೆ.
ಅವರ ಕೆತ್ತನೆಗಳಲ್ಲಿ ಪಕ್ಷಿಗಳು, ಪ್ರಾಣಿಗಳು ಹಾಗೂ ಬಳ್ಳಿಗಳು ಮತ್ತು ಎಲೆಗಳ ಸೂಕ್ಷ್ಮ ವಿನ್ಯಾಸಗಳು ಜೀವಂತಿಕೆಯಿಂದ ಮೂಡಿಬರುತ್ತವೆ. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಅನೇಕ ದೇವಸ್ಥಾನಗಳು, ಮಠಗಳು ಹಾಗೂ ಶ್ರೀಮಂತರ ಮನೆಗಳಲ್ಲಿ ಅವರ ಕಲಾಕೃತಿಗಳು ಇಂದಿಗೂ ತಮ್ಮ ಸೌಂದರ್ಯವನ್ನು ಉಳಿಸಿಕೊಂಡಿವೆ.
ಶಿವದಾರರ ಎಂಟು ಅಂಕಣಗಳ ಪಡಸಾಲೆ, ಸಾಹುಕಾರ ಯಳವಾರ ಅವರ ಜೋಡಿ ಕುದುರೆಗಳ ಬಾಗಿಲು, ಗುತ್ತೇದಾರ ಈಜೇರಿ ಅವರ ತೇರಿನ ಕೆಲಸ ಸೇರಿದಂತೆ ನೂರಾರು ಕಡೆಗಳಲ್ಲಿ ಅವರು ರೂಪಿಸಿರುವ ಕಲಾಕೃತಿಗಳು ಇಂದಿಗೂ ಗಮನ ಸೆಳೆಯುತ್ತಿವೆ.
ಕೇವಲ ಕಲಾ ಕ್ಷೇತ್ರಕ್ಕೆ ಮಾತ್ರವಲ್ಲದೆ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿರುವ ಕಲ್ಯಾಣ ಕಂಬಾರ ಅವರ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರದ ಶಿಲ್ಪಕಲಾ ಅಕಾಡೆಮಿ ಈ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಈ ಪ್ರಶಸ್ತಿ ಕಲ್ಯಾಣ ಕರ್ನಾಟಕದ ಮರದ ಕೆತ್ತನೆ ಕಲೆಗೆ ಸಂದ ಗೌರವವಾಗಿದೆ.
