ಪಿಎಚ್.ಡಿ. ಪ್ರವೇಶಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನ

ಕಲಬುರಗಿ, ನ. 9: ಜೆಆರ್ಎಫ್, ನೆಟ್, ಗೇಟ್ ಸೇರಿದಂತೆ ಅರ್ಹ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ 2026–27ನೇ ಶೈಕ್ಷಣಿಕ ಸಾಲಿನ ವಿವಿಧ ಪಿಎಚ್.ಡಿ. ಸಂಶೋಧನಾ ಕಾರ್ಯಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಆನ್ಲೈನ್ ಅರ್ಜಿ ಆಹ್ವಾನಿಸಿದೆ. ನವೆಂಬರ್ 6ರಿಂದ 27ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ), ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್ಐಆರ್), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ), ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಥವಾ ಭಾರತೀಯ ಸಾಮಾಜಿಕ ವಿಜ್ಞಾನ ಸಂಶೋಧನಾ ಮಂಡಳಿ (ಐಸಿಎಸ್ಎಸ್ಆರ್) ಸಂಸ್ಥೆಗಳು ನೀಡುವ ಕಿರಿಯ ಸಂಶೋಧನಾ ವೇತನಧನ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ಇದಲ್ಲದೆ, ಯುಜಿಸಿ ಅಥವಾ ಸಿಎಸ್ಐಆರ್ ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ, ರಾಷ್ಟ್ರೀಯ ತಾಂತ್ರಿಕ ಅರ್ಹತಾ ಪರೀಕ್ಷೆ (ಗೇಟ್) ಹಾಗೂ ಇವುಗಳಿಗೆ ಸಮಾನವಾದ ಇತರ ರಾಷ್ಟ್ರೀಯ ಮಟ್ಟದ ಅರ್ಹತಾ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು.
ಪಿಎಚ್.ಡಿ. ಪ್ರವೇಶಾತಿಗೆ ಸಂಬಂಧಿಸಿದಂತೆ, ಪಿಎಚ್.ಡಿ. ವಿಭಾಗದಡಿ (ವರ್ಗ-3) ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು, ಡಿಎಸ್ಟಿ ಇನ್ಸ್ಪೈರ್ ವೇತನಧನ ಹೊಂದಿರುವವರು, ಕೇಂದ್ರ ಅಥವಾ ರಾಜ್ಯ ಸರ್ಕಾರದ ಪ್ರಾಯೋಜಿತ ವೇತನಧನ ಪಡೆಯುತ್ತಿರುವವರು, ಎಎನ್ಆರ್ಎಫ್–ಪೇರ್ ಯೋಜನೆಯಡಿ ಸಂಶೋಧನಾ ಸಹವರ್ತಿಗಳಾಗಿ ಕಾರ್ಯನಿರ್ವಹಿಸುತ್ತಿರುವವರು ಹಾಗೂ ರಾಷ್ಟ್ರೀಯ ಅಥವಾ ರಾಜ್ಯಮಟ್ಟದ ಶಿಕ್ಷಕ ವೇತನಧನ ಹೊಂದಿರುವವರಿಗೂ ವಿಶ್ವವಿದ್ಯಾಲಯದ ನಿಯಮಾನುಸಾರ ಅರ್ಜಿ ಸಲ್ಲಿಸಲು ಅವಕಾಶವಿದೆ.
ಅರ್ಹ ಅಭ್ಯರ್ಥಿಗಳು ಕಡ್ಡಾಯವಾಗಿ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ನವೆಂಬರ್ 6ರಂದು ಆರಂಭವಾಗಿರುವ ನೋಂದಣಿ ಪ್ರಕ್ರಿಯೆ ನವೆಂಬರ್ 27ರಂದು ಮುಕ್ತಾಯಗೊಳ್ಳಲಿದೆ. ಅರ್ಜಿ ಸಲ್ಲಿಸುವ ಮೊದಲು ವಿಶ್ವವಿದ್ಯಾಲಯದ ಅಧಿಕೃತ ಜಾಲತಾಣದಲ್ಲಿರುವ ಬಳಕೆದಾರರ ಕೈಪಿಡಿ ಹಾಗೂ ಪ್ರವೇಶಾತಿಗೆ ಸಂಬಂಧಿಸಿದ ಸಂಪೂರ್ಣ ಮಾರ್ಗಸೂಚಿಗಳನ್ನು ಎಚ್ಚರಿಕೆಯಿಂದ ಓದಿಕೊಳ್ಳುವಂತೆ ಸೂಚಿಸಲಾಗಿದೆ.
ವಿವಿಧ ಪಿಎಚ್.ಡಿ. ಕಾರ್ಯಕ್ರಮಗಳ ವಿವರ, ಅರ್ಹತಾ ಮಾನದಂಡಗಳು, ಕನಿಷ್ಠ ಶೈಕ್ಷಣಿಕ ವಿದ್ಯಾರ್ಹತೆ, ಆಯ್ಕೆ ಪ್ರಕ್ರಿಯೆ, ವಿಭಾಗವಾರು ಸಂಪರ್ಕ ಮಾಹಿತಿ, ಸಂಶೋಧನಾ ಮಾರ್ಗದರ್ಶಕರ ಆದ್ಯತಾ ಪಟ್ಟಿ, ನಿಗದಿತ ಅರ್ಜಿ ನಮೂನೆ, ಆನ್ಲೈನ್ ನೋಂದಣಿ ವಿಧಾನ ಸೇರಿದಂತೆ ಪ್ರವೇಶಾತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ವಿಶ್ವವಿದ್ಯಾಲಯದ ಅಧಿಕೃತ ಜಾಲತಾಣದಲ್ಲಿ ಪಡೆಯಬಹುದು.



