ಕಲೆಸಾಂಸ್ಕೃತಿಕ

ಕಲಬುರಗಿಯಲ್ಲಿ ನ.22ರಂದು ‘ಗುರುವಂದನಾ ಸುಮಧುರ ಸಂಗೀತೋತ್ಸವ’

ಪಂ. ಮುಕೇಶ್ ಜಾಧವ್ ಅವರಿಂದ ತಬಲಾ ಸೋಲೋ; ಖ್ಯಾತ ಕಲಾವಿದರಿಂದ ಗಾಯನ ಹಾಗೂ ವಾದ್ಯ ಸಂಗೀತದ ರಸದೌತಣ

ಕಲಬುರಗಿ: ಭಾರತೀಯ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಉಳಿಸಿ ಬೆಳೆಸುವ ಹಾಗೂ ಸಂಗೀತ ಕ್ಷೇತ್ರದ ಗುರುಗಳನ್ನು ಗೌರವಿಸುವ ಉದ್ದೇಶದಿಂದ ನವೆಂಬರ್ 22ರಂದು ಕಲಬುರಗಿಯಲ್ಲಿ ‘ಗುರುವಂದನಾ ಸುಮಧುರ ಸಂಗೀತೋತ್ಸವ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಗೀತ ಮಹರ್ಷಿ ಪಂಡಿತ್ ಶಾಂತರಾಮ್ ಚಿಗರಿ ಕಲಾ ಸಂಸ್ಥೆಯ ಅಧ್ಯಕ್ಷ ಉದಯಕುಮಾರ ಪುಲಾರಿ ಹಾಗೂ ಕಾರ್ಯದರ್ಶಿ ಸುಹಾಸಿನಿ ಪುಲಾರಿ ತಿಳಿಸಿದ್ದಾರೆ.

ನಗರದ ಜಿಲ್ಲಾ ನ್ಯಾಯಾಲಯದ ಎದುರಿನ ಸರ್ ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಭವನದಲ್ಲಿ ಅಂದು ಬೆಳಿಗ್ಗೆ 10 ಗಂಟೆಗೆ ಸಂಗೀತೋತ್ಸವ ನಡೆಯಲಿದೆ. ಸಂಗೀತ ಮಹರ್ಷಿ ಪಂ. ಶಾಂತರಾಮ್ ಚಿಗರಿ ಕಲಾ ಸಂಸ್ಥೆ ಹಾಗೂ ಸೂರ್ ತಾಲ್ ಸಂಗೀತ ಅಕಾಡೆಮಿ ಕಲಬುರಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಹಿರಿಯ ಕಲಾವಿದ ಪಂ. ಸಿದ್ದಣ್ಣ ದೇಸಾಯಿ ಕಲ್ಲೂರ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಪಂ. ಜಯರಾವ ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದಾರೆ.

ವಿಶೇಷ ಅತಿಥಿಗಳಾಗಿ ವಿಫಾರ್ಮಜ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ನಾಮದೇವ ಪವಾರ್, ಬೆಂಗಳೂರಿನ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಸಂಘದ ರಾಜ್ಯಾಧ್ಯಕ್ಷ ಯಲಗುಂಡ ಹಿರೇಕುರುಬರ್ ಹಾಗೂ ಸುಲೇಪೇಟದ ಉದ್ಯಮಿ ರವಿರಾಜ ರಾಠೋಡ್ ಭಾಗವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ಅ. ನಾಸಿ, ಪ್ರಥಮ ದರ್ಜೆ ಗುತ್ತಿಗೆದಾರ ರಾಜಶೇಖರ ಯಂಕಂಚಿ ಭೂಸನೂರ, ಸ್ವಾಭಿಮಾನ ಸ್ವದೇಶಿ ಕಲಬುರಗಿಯ ಸಂಸ್ಥಾಪಕ ಸದಸ್ಯ ಅನೀಲಕುಮಾರ ತಂಬಾಕೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಬುರಾವ ಕೋಬಾಳ ಉಪಸ್ಥಿತರಿರಲಿದ್ದಾರೆ.

ಖ್ಯಾತ ಕಲಾವಿದರಿಂದ ಸಂಗೀತ ಕಾರ್ಯಕ್ರಮ

ಸಂಗೀತೋತ್ಸವದಲ್ಲಿ ಹಲವು ಹೆಸರಾಂತ ಕಲಾವಿದರು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲಿದ್ದಾರೆ. ಪುಣೆಯ ಅಂತರರಾಷ್ಟ್ರೀಯ ಖ್ಯಾತಿಯ ತಬಲಾ ವಾದಕ ಪಂ. ಮುಕೇಶ್ ಜಾಧವ್ ಅವರಿಂದ ತಬಲಾ ಏಕವ್ಯಕ್ತಿ ವಾದನ ನಡೆಯಲಿದೆ. ಪಂ. ಶಾಂತರಾಮ್ ಚಿಗರಿ ಹಾಗೂ ಆದಿತ್ಯ ಮೋಡಕರ್ ಅವರ ಶಿಷ್ಯೆ ಡಾ. ರಾಧಿಕಾ ಪಾಠಕ್ ಅವರು ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಪ್ರಸ್ತುತಪಡಿಸಲಿದ್ದಾರೆ.

ಪ್ರೊ. ರೇವಯ್ಯ ವಸ್ತ್ರದ ಮಠ ಅವರು ಹಾರ್ಮೋನಿಯಂ ವಾದನ, ಆಕಾಶವಾಣಿಯ ‘ಎ’ ಶ್ರೇಣಿಯ ಕಲಾವಿದ ಉದಯಕುಮಾರ ಪುಲಾರಿ ಅವರು ತಬಲಾ ವಾದನ ನಡೆಸಲಿದ್ದಾರೆ. ಸಂಗೀತ ಶಿಕ್ಷಕ ಶಂಕರ ರುದ್ರವಾಡಿ ಅವರಿಂದ ತಾನಪುರಾ ವಾದನ ಹಾಗೂ ಪ್ರಶಾಂತ್ ಗೋಲ್ಡ್ ಸ್ಮಿತ್ ಅವರಿಂದ ಕೊಳಲುವಾದನ ನಡೆಯಲಿದೆ.

ಇದರೊಂದಿಗೆ ಸೂರ್ ತಾಲ್ ಸಂಗೀತ ಅಕಾಡೆಮಿಯ ವಿದ್ಯಾರ್ಥಿಗಳಿಂದಲೂ ಸಂಗೀತ ಕಾರ್ಯಕ್ರಮಗಳು ಜರುಗಲಿದ್ದು, ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲಾಗುತ್ತಿದೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಗಾಯನ, ತಬಲಾ ಹಾಗೂ ವಿವಿಧ ವಾದ್ಯಗಳ ಸಂಗಮ ಈ ಉತ್ಸವದ ವಿಶೇಷತೆಯಾಗಲಿದೆ.

ಸಂಗೀತಾಸಕ್ತರು, ಕಲಾಭಿಮಾನಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಗೀತೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button