ಸಾಂಸ್ಕೃತಿಕಸಾಹಿತ್ಯ

ಜಿಲ್ಲಾ ಪ್ರಥಮ ದಲಿತ ಬಂಡಾಯ ಸಾಹಿತ್ಯ ಸಮ್ಮೇಳನದ ಭಿತ್ತಿಪತ್ರ ಬಿಡುಗಡೆ

ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಶೋಷಿತ ಸಮುದಾಯಗಳ ಧ್ವನಿಗೆ ವೇದಿಕೆಯಾಗಲಿದೆ ಸಮ್ಮೇಳನ

ಬೀದರ್, ನ. 4: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಲಾಗುತ್ತಿರುವ ಜಿಲ್ಲಾ ಪ್ರಥಮ ದಲಿತ ಬಂಡಾಯ ಸಾಹಿತ್ಯ ಸಮ್ಮೇಳನದ ಭಿತ್ತಿಪತ್ರವನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದಕುಮಾರ ಅಪ್ಪೆ ಅವರು ಜಿಲ್ಲಾ ಕನ್ನಡ ಭವನದಲ್ಲಿ ಬಿಡುಗಡೆಗೊಳಿಸಿದರು.

ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷ ಮಾರುತಿ ಬೌದ್ಧ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚೆನ್ನಶೆಟ್ಟಿ ಅವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮ್ಮೇಳನದ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಮತ್ತು ಸ್ವಯಂಸೇವಕರು ಭಾಗವಹಿಸಿದ್ದರು.

ಭಿತ್ತಿಪತ್ರ ಬಿಡುಗಡೆ ಬಳಿಕ ಮಾತನಾಡಿದ ಸುರೇಶ ಚೆನ್ನಶೆಟ್ಟಿ, ಸಮ್ಮೇಳನದ ಯಶಸ್ಸಿಗಾಗಿ ವಿವಿಧ ಸಮಿತಿಗಳ ಮೂಲಕ ಕೈಗೊಂಡಿರುವ ಸಿದ್ಧತೆಗಳು ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಮಾಹಿತಿ ನೀಡಿದರು. ಎಲ್ಲ ಸಮಿತಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ನಿಯೋಜಿತ ಸರ್ವಾಧ್ಯಕ್ಷ ಮಾರುತಿ ಬೌದ್ಧ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನದ ಆಯೋಜನೆಗಾಗಿ ನಡೆಸುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದರು. ದಲಿತ ಬಂಡಾಯ ಚಳವಳಿಯ ಆಶಯ, ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಶೋಷಿತ ಸಮುದಾಯಗಳ ಧ್ವನಿಯನ್ನು ಸಾಹಿತ್ಯದ ಮೂಲಕ ಬಲಪಡಿಸಲು ಈ ಸಮ್ಮೇಳನ ಮಹತ್ವದ ವೇದಿಕೆಯಾಗಲಿದೆ ಎಂದರು.

ಭಿತ್ತಿಪತ್ರ ಬಿಡುಗಡೆಗೊಳಿಸಿದ ವಿನೋದಕುಮಾರ ಅಪ್ಪೆ ಮಾತನಾಡಿ, ಕನ್ನಡ ಸಾಹಿತ್ಯ ಲೋಕದಲ್ಲಿ ದಲಿತ ಬಂಡಾಯ ಸಾಹಿತ್ಯದ ಸಾಮಾಜಿಕ ಆಶಯಗಳಿಗೆ ಪ್ರತ್ಯೇಕ ವೇದಿಕೆ ಕಲ್ಪಿಸಿರುವುದು ಅಭಿನಂದನೀಯ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಈ ವಿನೂತನ ಪ್ರಯತ್ನ ಮುಂದಿನ ದಿನಗಳಲ್ಲಿ ಇತರ ಜಿಲ್ಲೆಗಳಿಗೂ ಮಾದರಿಯಾಗಲಿ. ಸಮ್ಮೇಳನದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಸಮ್ಮೇಳನವು ಸಮಾನತೆ, ಸ್ವಾಭಿಮಾನ ಹಾಗೂ ಸಾಮಾಜಿಕ ನ್ಯಾಯದ ಕುರಿತು ಚರ್ಚೆ ಮತ್ತು ಸಂವಾದಕ್ಕೆ ಮಹತ್ವದ ವೇದಿಕೆಯಾಗಲಿದೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಆಯೋಜಕರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಿಠಲದಾಸ ಪ್ಯಾಗೆ, ಫನಾರ್ಂಡೀಸ್ ಹಿಪ್ಪಳಗಾಂವ್, ಗಾಲಿಬ್ ಹಾಸ್ಮಿ, ಪ್ರಶಾಂತ ದೊಡ್ಡಿ, ಬಾಬುರಾವ ದಾನಿ, ಶಂಭುಲಿಂಗ ವಾಲ್ದೊಡ್ಡಿ, ಸುಂದರರಾಜ ಮಾಳೆಗಾಂವ್, ವಿಜಯಕುಮಾರ ಸೋನಾರೆ, ವಿನಯಕುಮಾರ ಮಾಳಗೆ, ಶಿವಶಂಕರ ಟೋಕರೆ, ಮಹೇಶ ಗೋರನಾಳಕರ, ಡಾ. ದೇವಿದಾಸ ತುಮಕಂಟೆ, ಸುಬಣ್ಣ ಕರಕನಳ್ಳಿ, ದಾನಿ ಬಾಬುರಾವ್, ಸುಮಂತ್ ಕಟ್ಟಿಮನಿ, ಸಂತೋಷ ಜೋಳದಬಾಕೆ, ವಿಜಯಕುಮಾರ ಗಾಯಕ್ವಾಡ, ಝುರೇಪ್ಪ ಬೆಲ್ದಾರ, ಜಗದೀಶ್ವರ ಬಿರಾದಾರ, ಅರುಣ ಪಟೇಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button