ಕರ್ನಾಟಕ ಅನೇಕ ಭಾಷೆಗಳ ತವರೂರು: ಪ್ರೊ. ಆರ್.ಕೆ. ಹುಡಗಿ
ಭಾಷೆಗೆ ಗಡಿಗಳಿಲ್ಲ, ಸಮುದಾಯ ಮತ್ತು ಧರ್ಮಗಳ ಸಂಕೋಲೆಗಳೂ ಇಲ್ಲ; ಕನ್ನಡ ಬೆಳೆಸುವುದು ಎಲ್ಲರ ಕರ್ತವ್ಯ: ಉಪನ್ಯಾಸದಲ್ಲಿ ಅಭಿಮತ

ಕಲಬುರಗಿ, ನ. 2: ಕರ್ನಾಟಕವು ಅನೇಕ ಭಾಷೆಗಳ ತವರೂರಾಗಿದ್ದು, ಭಾಷೆಗೆ ಯಾವುದೇ ಗಡಿಗಳಿಲ್ಲ. ಸಮುದಾಯ ಹಾಗೂ ಧರ್ಮಗಳ ಸಂಕೋಲೆಗಳೂ ಇಲ್ಲ ಎಂದು ಖ್ಯಾತ ಕನ್ನಡ ಲೇಖಕ ಮತ್ತು ಅನುವಾದಕ ಪ್ರೊ. ಆರ್.ಕೆ. ಹುಡಗಿ ಹೇಳಿದರು.
ನಗರದ ಖ್ವಾಜಾ ಬಂದೇನವಾಜ್ ವಿಶ್ವವಿದ್ಯಾಲಯದ ಆವರಣದಲ್ಲಿರುವ ಫೋರೆನ್ಸಿಕ್ ಕಟ್ಟಡದ ಸಭಾಂಗಣದಲ್ಲಿ ಕನ್ನಡ ಮತ್ತು ಇತಿಹಾಸ ವಿಭಾಗಗಳ ವತಿಯಿಂದ ಆಯೋಜಿಸಿದ್ದ 71ನೇ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಭಾಷೆಯ ಮಹತ್ವ ಹಾಗೂ ಭಾಷೆಗಳ ನಡುವಿನ ಸೌಹಾರ್ದದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಸಯ್ಯದ್ ಅಶ್ಫಾಕ್ ಅಹ್ಮದ್ ಅವರು, ಕನ್ನಡ ಭಾಷೆಯ ಮಹತ್ವವನ್ನು ವಿವರಿಸಿದರು. ಕನ್ನಡ ಭಾಷೆಯನ್ನು ಬೆಳೆಸಿ, ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಮತ್ತೊಬ್ಬ ಅತಿಥಿ, ಎಂಜಿನಿಯರಿಂಗ್ ವಿಭಾಗದ ಡೀನ್ ಪ್ರೊ. ಸುಭಾಷ್ ಕಮಲ್ ಅವರು ಮಾತನಾಡಿ, ಪ್ರಾಮಾಣಿಕ ಪ್ರಯತ್ನ ಮತ್ತು ಕಠಿಣ ಪರಿಶ್ರಮವು ಸೋಲನ್ನೂ ಯಶಸ್ಸಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿವೆ ಎಂದು ಅಭಿಪ್ರಾಯಪಟ್ಟರು.
ಕಲೆ, ಮಾನವಿಕ, ಸಮಾಜ ವಿಜ್ಞಾನ, ಭಾಷೆ ಮತ್ತು ಕಾನೂನು ನಿಕಾಯದ ಡೀನ್ ಪ್ರೊ. ನಿಶಾತ್ ಆರಿಫ್ ಹುಸೇನಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾನವನ ಜೀವನದಲ್ಲಿ ಭಾಷೆಯ ಮಹತ್ವವನ್ನು ವಿವರಿಸಿದ ಅವರು, ಭಾಷೆಯು ವ್ಯಕ್ತಿಯ ಅಭಿವ್ಯಕ್ತಿ ಹಾಗೂ ಸಾಮಾಜಿಕ ಸಂಬಂಧಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಪ್ರಬಂಧ, ರಸಪ್ರಶ್ನೆ ಹಾಗೂ ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಹುಮೇರಾ ಫಾತಿಮಾ ಕಿರಾತ್ ಪಠಿಸಿದರು. ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಸಂಗನಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಇತಿಹಾಸ ವಿಭಾಗದ ಪ್ರಾಧ್ಯಾಪಕ ಯೋಗೇಶ್ ಸ್ವಾಗತಿಸಿದರು. ಡಾ. ಅಸ್ಲಂ ವಾಲಿಕಾರ್ ಪರಿಚಯಿಸಿದರು. ಮಾಧ್ಯಮ ಸಂಯೋಜಕಿ ಡಾ. ನಮ್ರತಾ ರಾವ್ ನಿರೂಪಿಸಿದರು. ಕನ್ನಡ ವಿಭಾಗದ ಪ್ರೊ. ರಾಜಸಾಹೇಬ ವಂದಿಸಿದರು.
