ಜಿಲ್ಲಾಸುದ್ದಿ

ಶಹಾಪುರದಲ್ಲಿ ನಾಳೆ ಸಿದ್ದರಾಮ ಶಿವಯೋಗಿಗಳ ಪುಣ್ಯಸ್ಮರಣೋತ್ಸವ; ರೈತರ ರೊಟ್ಟಿ ಜಾತ್ರೆ

ಸಾವಿರಾರು ಭಕ್ತರ ನಿರೀಕ್ಷೆ; ವಿವಿಧ ಬಗೆಯ ರೊಟ್ಟಿ ಮತ್ತು ಪಲ್ಯ ಪ್ರಸಾದ ವಿತರಣೆ

ಜೆವರ್ಗಿ, ಅ. 30: ಶಹಾಪುರದ ವಿಶ್ವಾರಾಧ್ಯ ತಪೋವನ ಮಠದಲ್ಲಿ ಲಿಂಗೈಕ್ಯ ಸಿದ್ದರಾಮ ಶಿವಯೋಗಿಗಳ 76ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಅಕ್ಟೋಬರ್ 31ರಂದು ರೈತರ ರೊಟ್ಟಿ ಜಾತ್ರೆ ನಡೆಯಲಿದೆ. ಮಠದ ಪೀಠಾಧಿಪತಿ ಸಿದ್ದರಾಮ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ರೊಟ್ಟಿ ಜಾತ್ರೆಯ ಅಂಗವಾಗಿ ಮಹಿಳೆಯರು ಕಳೆದ ಹಲವು ದಿನಗಳಿಂದ ಭಕ್ತಿಭಾವದಿಂದ ರೊಟ್ಟಿ ತಯಾರಿಸಿ ಮಠದ ಆವರಣದಲ್ಲಿ ಸಂಗ್ರಹಿಸುತ್ತಿದ್ದಾರೆ. ಜೋಳದ ರೊಟ್ಟಿ, ಸಜ್ಜೆ ರೊಟ್ಟಿ ಸೇರಿದಂತೆ ವಿವಿಧ ಬಗೆಯ ರೊಟ್ಟಿಗಳ ಜೊತೆಗೆ ಕಡಲೆ, ಶೇಂಗಾ, ತೊಗರಿ ಮತ್ತಿತರ ಧಾನ್ಯಗಳಿಂದ ತಯಾರಿಸಿದ ಪಲ್ಯಗಳು ಜಾತ್ರೆಯ ವಿಶೇಷವಾಗಿವೆ. ದಿನವಿಡೀ ನಡೆಯುವ ಜಾತ್ರೆಯಲ್ಲಿ ಸಾವಿರಾರು ಭಕ್ತರು ರೊಟ್ಟಿ ಮತ್ತು ಪಲ್ಯ ಪ್ರಸಾದ ಸ್ವೀಕರಿಸಿ ವಿಶ್ವಾರಾಧ್ಯರ ದರ್ಶನ ಪಡೆಯಲಿದ್ದಾರೆ.

ಗ್ರಾಮದ ಮಹಿಳೆಯರು ಕಳೆದ 15 ದಿನಗಳಿಂದ ನಿರಂತರವಾಗಿ ರೊಟ್ಟಿ ತಯಾರಿಸುತ್ತಿದ್ದಾರೆ. ವಿವಿಧ ಪ್ರದೇಶಗಳ ಭಕ್ತರೂ ಜಾತ್ರೆಗಾಗಿ ರೊಟ್ಟಿ ಸಿದ್ಧಪಡಿಸಿ ವಾಹನಗಳ ಮೂಲಕ ಮಠಕ್ಕೆ ತಂದು ದಾಸೋಹಕ್ಕೆ ಅರ್ಪಿಸುತ್ತಿದ್ದಾರೆ. ಸುಮಾರು 30 ಕ್ವಿಂಟಲ್ ಸಜ್ಜೆ ರೊಟ್ಟಿ ಮತ್ತು 30 ಕ್ವಿಂಟಲ್ ಬಿಳಿ ಜೋಳದ ರೊಟ್ಟಿಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಮಠದ ಮೂಲಗಳು ತಿಳಿಸಿವೆ.

ಧಾರ್ಮಿಕ ಕಾರ್ಯಕ್ರಮಗಳು

ಅಕ್ಟೋಬರ್ 31ರಂದು ಬೆಳಿಗ್ಗೆ 6 ಗಂಟೆಗೆ ಸಿದ್ದರಾಮ ಶಿವಯೋಗಿಗಳ ಗದ್ದುಗೆಗೆ ವಿಶೇಷ ಪೂಜೆ, ರುದ್ರಾಭಿಷೇಕ, ಹೋಮ, ಹವನ, ಅಲಂಕಾರ ಹಾಗೂ ನೈವೇದ್ಯ ನೆರವೇರಲಿದೆ.

ಸಂಜೆ 6 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ರಂಭಾಪುರಿ ವೀರಸೋಮೇಶ್ವರ ರಾಜದೇಶಿಕೇಂದ್ರ ಸ್ವಾಮೀಜಿಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. ಬಳಿಕ ನೂತನವಾಗಿ ನಿರ್ಮಿಸಿರುವ ವಿದ್ಯಾರ್ಥಿನಿಯರ ವಸತಿನಿಲಯವನ್ನು ಉದ್ಘಾಟಿಸಲಾಗುವುದು.

ರಾತ್ರಿ 8 ಗಂಟೆಗೆ ಜನಜಾಗೃತಿ ಧರ್ಮಸಮ್ಮೇಳನ ನಡೆಯಲಿದ್ದು, ಸಣ್ಣ ನೀರಾವರಿ ಸಚಿವ ಡಾ. ಅಜಯ್‌ಸಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಉದ್ಘಾಟಿಸಲಿದ್ದಾರೆ. ವಿವಿಧ ಮಠಗಳ ಪೀಠಾಧಿಪತಿಗಳು, ಸ್ವಾಮೀಜಿಗಳು ಹಾಗೂ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಿದ್ದರಾಮ ಶಿವಾಚಾರ್ಯರು ತಿಳಿಸಿದ್ದಾರೆ.

ಗಣ್ಯರಿಗೆ ಸಿರಿ ಪ್ರಶಸ್ತಿ ಗೌರವ

ಈ ಸಂದರ್ಭದಲ್ಲಿ ದೇವಪ್ಪ ಪೂಜಾರಿ ಹರನೂರು, ಶಾಂತಗೌಡ ಐನಾಪುರ ಹಾಲಗಡದ, ಅಶೋಕ ಸಾಲಿಮಠ, ಯಶವಂತರಾಯಗೌಡ ಬಣವಿಗಿ ಹಾಗೂ ಸುರೇಶ ಮುತ್ತಕೋಡ ಅವರಿಗೆ ತಪೋವನ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಮಠದ ಪೀಠಾಧಿಪತಿಗಳು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button