ಅಪಘಾತಜಿಲ್ಲಾಸುದ್ದಿ

ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಭಾರಿ ಅಗ್ನಿ ಅವಘಡ

ಕಬ್ಬಿನ ಸಿಪ್ಪೆಗೆ ಬೆಂಕಿ; ಆರು ಗಂಟೆಗಳ ಕಾರ್ಯಾಚರಣೆಯಲ್ಲಿ ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ

ಆಳಂದ, ಅ. 29: ತಾಲ್ಲೂಕಿನ ಭೂಸನೂರ ಗ್ರಾಮದ ಸಮೀಪದಲ್ಲಿರುವ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಮಂಗಳವಾರ ರಾತ್ರಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಸಿದ್ಧತೆ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಕಾರ್ಖಾನೆಯ ಆವರಣದಲ್ಲಿ ಹೊರಭಾಗದಲ್ಲಿ ಸಂಗ್ರಹಿಸಿಡಲಾಗಿದ್ದ ಕಬ್ಬಿನ ಸಿಪ್ಪೆಗೆ ಮೊದಲು ಬೆಂಕಿ ತಗುಲಿದೆ. ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿ ಕ್ಷಿಪ್ರವಾಗಿ ವ್ಯಾಪಿಸಿದ್ದರಿಂದ ಅಪಾರ ಪ್ರಮಾಣದ ಕಬ್ಬಿನ ಸಿಪ್ಪೆ, ಕಾರ್ಖಾನೆಯ ಕನ್ವೇಯರ್ ಬೆಲ್ಟ್ ಹಾಗೂ ಇತರ ಉಪಕರಣಗಳು ಸುಟ್ಟು ಕರಕಲಾಗಿವೆ.

ಬೆಂಕಿಯಿಂದಾಗಿ ಕಾರ್ಖಾನೆಯ ಸುತ್ತಮುತ್ತ ದಟ್ಟ ಹೊಗೆ ಆವರಿಸಿತ್ತು. ಘಟನೆಯ ಮಾಹಿತಿ ತಿಳಿದ ತಕ್ಷಣ ಆಳಂದ ಹಾಗೂ ಕಲಬುರಗಿಯಿಂದ ಧಾವಿಸಿದ ಸುಮಾರು 24 ಅಗ್ನಿಶಾಮಕ ಸಿಬ್ಬಂದಿ ಸತತ ಆರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾದರು.

ಪ್ರಾಣಾಪಾಯ ಸಂಭವಿಸಿಲ್ಲ

ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಹಾಗೂ ಯಾರಿಗೂ ಗಾಯಗಳಾದ ವರದಿಯಾಗಿಲ್ಲ ಎಂದು ತಿಳಿದುಬಂದಿದೆ. ಕಾರ್ಖಾನೆಯ ಆವರಣದಲ್ಲಿದ್ದ ಕಬ್ಬಿನ ಸಿಪ್ಪೆಗೆ ಮಾತ್ರ ಬೆಂಕಿ ತಗುಲಿರುವುದರಿಂದ ಮುಂಬರುವ ಕಬ್ಬು ನುರಿಸುವ ಪ್ರಕ್ರಿಯೆಯ ಸಿದ್ಧತೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕಾರ್ಖಾನೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಸಂಭವಿಸಿರುವ ನಷ್ಟದ ಅಂದಾಜನ್ನೂ ಅಧಿಕಾರಿಗಳು ಮಾಡುತ್ತಿದ್ದಾರೆ.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button