ಜೋಡೆತ್ತಿನ ಕೃಷಿಕರಿಗೆ ಮಾಸಿಕ ₹11 ಸಾವಿರ ಪ್ರೋತ್ಸಾಹಧನಕ್ಕೆ ಆಗ್ರಹ
ಜೋಡೆತ್ತಿನ ಕೃಷಿ ಪದ್ಧತಿ ಉಳಿಸಲು ರಾಜ್ಯ ಬಜೆಟ್ನಲ್ಲಿ ಶೇ. 10ರಷ್ಟು ಅನುದಾನ ಮೀಸಲಿಡಲು ಒತ್ತಾಯ; ಚಿಂಚೋಳಿಯಲ್ಲಿ ರೈತರ ಪ್ರತಿಭಟನೆ

ಚಿಂಚೋಳಿ, ಅ. 29: ಸಾಂಪ್ರದಾಯಿಕ ಜೋಡೆತ್ತಿನ ಕೃಷಿ ಪದ್ಧತಿಯನ್ನು ಉಳಿಸಿ ಬೆಳೆಸಲು ರಾಜ್ಯ ಬಜೆಟ್ನಲ್ಲಿ ಶೇ. 10ರಷ್ಟು ಅನುದಾನ ಮೀಸಲಿಡುವ ವಿಶೇಷ ಕಾನೂನು ಜಾರಿಗೆ ತರಬೇಕು ಹಾಗೂ ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ₹11 ಸಾವಿರ ಪ್ರೋತ್ಸಾಹಧನ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ರೈತ ಸೇನೆಯ ಚಿಂಚೋಳಿ ಹಾಗೂ ಕಾಳಗಿ ತಾಲ್ಲೂಕು ಘಟಕಗಳ ನೇತೃತ್ವದಲ್ಲಿ ರೈತರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಚಿಮ್ಮಾಇದಲಾಯಿ ಮಠದ ಮಹಾಂತೇಶ್ವರ ಶಿವಾಚಾರ್ಯರು, ನೀಡಗುಂದಾದ ಕರುಣೇಶ್ವರ ಶಿವಾಚಾರ್ಯರು, ನರನಾಳದ ಶಿವಕುಮಾರ ಶಿವಾಚಾರ್ಯರು, ಚಂದನಕೇರಾದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಹಾಗೂ ಸುಲೇಪೇಟದ ಪ್ರಭುದೇವರು ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ರೈತ ಮುಖಂಡರಾದ ಗೌತಮ್ ಪಾಟೀಲ, ಗೋಪಾಲರಾವ್ ಕಟೀಮನಿ, ಸಂತೋಷ ಗಂಡಗತಿ, ರೇವಣಸಿದ್ಧಪ್ಪ ಅರಣಕಲ್, ಹನುಮಂತ ಪೂಜಾರಿ, ಕೆ.ಎಂ. ಬಾರೀ, ಅಮರ ಲೋಡನೂರ, ಶಂಕರ ಅಲಾಪುರ, ಎಂ.ಪಿ. ಗೋಪಾಲ, ರಾಮರೆಡ್ಡಿ ಪಾಟೀಲ, ಶರಣಪ್ಪ ಹಲಚೇರಿ, ವೀರೇಶ ಎಂಪಳ್ಳಿ ಹಾಗೂ ಲೋಕೇಶ ಶೇಳಗಿ ಸೇರಿದಂತೆ ಚಿಂಚೋಳಿ ಮತ್ತು ಕಾಳಗಿ ತಾಲ್ಲೂಕುಗಳ ರೈತರು, ವಿವಿಧ ಪಕ್ಷಗಳ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಸಾಂಪ್ರದಾಯಿಕ ಕೃಷಿ ಪದ್ಧತಿ ಉಳಿಸಲು ಆಗ್ರಹ
ಸುಮಾರು 150ಕ್ಕೂ ಹೆಚ್ಚು ಎತ್ತಿನ ಬಂಡಿಗಳಲ್ಲಿ ಆಗಮಿಸಿದ ರೈತರು, ನಂದಿ ಕೃಷಿ ಸಂಸ್ಕೃತಿಯ ಪುನಶ್ಚೇತನಕ್ಕಾಗಿ ವಿಶೇಷ ಕಾನೂನು ಜಾರಿಗೆ ತರಬೇಕು ಎಂಬ ಆಗ್ರಹದೊಂದಿಗೆ ಸರ್ಕಾರದ ಗಮನ ಸೆಳೆದರು.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ವೀರಣ್ಣ ಗಂಗಾಣಿ ಮಾತನಾಡಿ, ಎತ್ತುಗಳ ಸಹಾಯದಿಂದ ಉಳುಮೆ ಮಾಡುವ ರೈತರು ಮಣ್ಣಿನ ಮತ್ತು ಪ್ರಕೃತಿಯ ಸಂರಕ್ಷಣೆಯೊಂದಿಗೆ ನಾಗರಿಕತೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಇಂತಹ ಕೃಷಿಕರನ್ನು ಗೌರವದಿಂದ ಕಾಣಬೇಕು. ಆದರೆ ಜೋಡೆತ್ತಿನ ಕೃಷಿಯ ಮಹತ್ವವನ್ನು ನಿರ್ಲಕ್ಷಿಸುತ್ತಿರುವುದರಿಂದ ಸಾಂಪ್ರದಾಯಿಕ ಕೃಷಿ ಪದ್ಧತಿ ಅವನತಿಯತ್ತ ಸಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸ್ವಾತಂತ್ರ್ಯಪೂರ್ವದಲ್ಲಿ ಮಣ್ಣಿನ ಸರಾಸರಿ ಸಾವಯವ ಇಂಗಾಲದ ಪ್ರಮಾಣ ಶೇ. 1ರಷ್ಟಿತ್ತು. ಈಗ ಅದು ಶೇ. 0.33ಕ್ಕೆ ಕುಸಿದಿದೆ ಎಂದು ಉಲ್ಲೇಖಿಸಿದ ರೈತ ಮುಖಂಡರು, ಮಣ್ಣಿನ ಫಲವತ್ತತೆ ಹೆಚ್ಚಿಸುವ ಹಾಗೂ ಪರಿಸರ ಸಂರಕ್ಷಿಸುವ ನೈಸರ್ಗಿಕ ಕೃಷಿ ಪದ್ಧತಿಗಳಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ನಂದಿ ಕೃಷಿ ಸಂಸ್ಕೃತಿಯ ಪುನಶ್ಚೇತನಕ್ಕೆ ಕರೆ
ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಕರ್ನಾಟಕ ರಾಜ್ಯ ರೈತ ಸಂಘ, ರೈತ ಸೇನೆ ಹಾಗೂ ಕೃಷಿ ಪದವೀಧರರು ಆರಂಭಿಸಿರುವ ‘ನಂದಿ ಕೂಗು’ ಅಭಿಯಾನದ ಮೂಲಕ ಕಳೆದ ಮೂರು ವರ್ಷಗಳಿಂದ ಎತ್ತಿನ ಕೃಷಿ ಸಂಸ್ಕೃತಿಯ ಉಳಿವಿಗಾಗಿ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಬಯಲುಸೀಮೆಯ ಗ್ರಾಮಗಳನ್ನು ಸ್ವಾವಲಂಬಿಗಳನ್ನಾಗಿಸಲು ಸಮಾಜದ ಎಲ್ಲ ವರ್ಗದ ಜನರು ಒಗ್ಗೂಡಿ ಈ ಕೃಷಿ ಸಂಸ್ಕೃತಿಯ ಪುನಶ್ಚೇತನಕ್ಕೆ ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ರೈತರ ಪ್ರಮುಖ ಬೇಡಿಕೆಗಳು
ನಂದಿ ಕೃಷಿ ಸಂಸ್ಕೃತಿಯ ಪುನಶ್ಚೇತನಕ್ಕಾಗಿ ರಾಜ್ಯ ಬಜೆಟ್ನಲ್ಲಿ ಶೇ. 10ರಷ್ಟು ಅನುದಾನ ಮೀಸಲಿಡಬೇಕು. ಜೋಡೆತ್ತಿನ ಕೃಷಿಕರಿಗೆ ಮಾಸಿಕ ₹11 ಸಾವಿರ ಪ್ರೋತ್ಸಾಹಧನ ನೀಡಬೇಕು. ನಂದಿ ವಿದ್ಯುತ್, ಅನಿಲ, ಅಡುಗೆ ಎಣ್ಣೆ, ಔಷಧ, ಗೊಬ್ಬರ ಹಾಗೂ ಗುಣಮಟ್ಟದ ಆಹಾರ ಉತ್ಪಾದನೆಗೆ ಉತ್ತೇಜನ ನೀಡುವ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ರೈತರು ಆಗ್ರಹಿಸಿದರು.
ಜೋಡೆತ್ತಿನ ಕೃಷಿಕರ ಬದುಕು ಹಾಗೂ ಗ್ರಾಮೀಣ ಕೃಷಿ ಸಂಸ್ಕೃತಿಯನ್ನು ಉಳಿಸುವ ಉದ್ದೇಶದಿಂದ ಸರ್ಕಾರಕ್ಕೆ ಹಕ್ಕೊತ್ತಾಯದ ಪತ್ರ ಸಲ್ಲಿಸಲಾಯಿತು. ರೈತರ ಬೇಡಿಕೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.



