ಮಹಿಳೆಯರಿಗೆ ಚೆನ್ನಮ್ಮನ ಬದುಕೇ ಪ್ರೇರಣಾಶಕ್ತಿ: ಪ್ರಾಧ್ಯಾಪಕಿ ಭಾಗ್ಯವತಿ
ಚೆನ್ನಮ್ಮನ ತ್ಯಾಗ, ಹೋರಾಟ ಮತ್ತು ದೇಶಪ್ರೇಮ ಇಂದಿನ ಯುವಜನತೆಗೆ ಆದರ್ಶ; ಮೂವರಿಗೆ ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ

ಬೀದರ್, ಅ. 27: ಇಂದಿನ ಯುವತಿಯರು ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿದ್ದಾರೆ. ಅವರ ಸಾಧನೆಗೆ ಇನ್ನಷ್ಟು ಬಲ ತುಂಬಲು ಆತ್ಮವಿಶ್ವಾಸ, ಸ್ವಾಭಿಮಾನ, ಸ್ವಾವಲಂಬನೆ, ದೃಢ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹಾಗೂ ಸಾಮಾಜಿಕ ಹೊಣೆಗಾರಿಕೆ ಅಗತ್ಯ. ಈ ಎಲ್ಲ ಗುಣಗಳಿಗೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಜೀವನವೇ ಪ್ರೇರಣಾಶಕ್ತಿಯಾಗಿದೆ ಎಂದು ಘೋಡಂಪಳ್ಳಿ ಸರ್ಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಭಾಗ್ಯವತಿ ಹೇಳಿದರು.
ನಗರದ ಬಿವಿಬಿ ಕಾಲೇಜು ರಸ್ತೆಯ ಚೆನ್ನಮ್ಮ ವೃತ್ತದ ಬಳಿ ಮಂಗಳವಾರ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಮಹಿಳೆಯರಿಗೆ ಚೆನ್ನಮ್ಮನಂತಹ ಆದರ್ಶ ವ್ಯಕ್ತಿತ್ವದ ಪ್ರೇರಣೆ ಅಗತ್ಯ. ಚೆನ್ನಮ್ಮನ ಬದುಕು ಮಹಿಳಾ ಸಬಲೀಕರಣದ ನೈಜ ಪಾಠವಾಗಿದೆ. ಮಹಿಳೆಯರಲ್ಲಿ ಅಪಾರ ಶಕ್ತಿ ಮತ್ತು ಸಾಮರ್ಥ್ಯವಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಸ್ವಾಮಿ ವಿವೇಕಾನಂದರ ಈ ವಿಚಾರ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.
ಸ್ವಾಭಿಮಾನ, ದೇಶಭಕ್ತಿ ಮತ್ತು ಸ್ವಾತಂತ್ರ್ಯಕ್ಕಾಗಿ ಕೆಚ್ಚೆದೆಯಿಂದ ಹೋರಾಡಿದ ಚೆನ್ನಮ್ಮ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಆರಂಭಿಕ ಪ್ರೇರಣೆ ನೀಡಿದ ವೀರ ಮಹಿಳೆಯರಲ್ಲಿ ಅವರು ಪ್ರಮುಖರು. ದೇಶ, ಧರ್ಮ ಮತ್ತು ಸಮಾಜದ ಗೌರವಕ್ಕಾಗಿ ಹೋರಾಡಿದ ಅವರ ಜೀವನ ಇಂದಿನ ಯುವಜನತೆಗೆ ದೊಡ್ಡ ಸ್ಫೂರ್ತಿಯಾಗಿದೆ. ವಿಶೇಷವಾಗಿ ಯುವತಿಯರು ಚೆನ್ನಮ್ಮನ ಇತಿಹಾಸವನ್ನು ಓದಿ, ಅವರ ಧೈರ್ಯ ಮತ್ತು ಹೋರಾಟದ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಬಸವನಗರ ಮಹಿಳಾ ಮಂಡಳಿಯ ಅಧ್ಯಕ್ಷೆ ರತ್ನಾ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಚೆನ್ನಮ್ಮ ವೀರ ಮಹಿಳೆಯಾಗಿ, ತಾಯಿಯಾಗಿ ಹಾಗೂ ರಾಜಮಾತೆಯಾಗಿ ಸಲ್ಲಿಸಿದ ಸೇವೆ ಸ್ಮರಣೀಯವಾಗಿದೆ. ದತ್ತುಪುತ್ರನ ಹಕ್ಕನ್ನು ಪ್ರಶ್ನಿಸಿದ ಬ್ರಿಟಿಷರ ವಿರುದ್ಧ ಜೀವದ ಹಂಗು ತೊರೆದು ಹೋರಾಡಿದ ಅವರ ಹೋರಾಟ ಕೇವಲ ತಾಯಿಯ ಹೋರಾಟವಾಗಿರಲಿಲ್ಲ; ಅದು ದೇಶದ ಅಸ್ಮಿತೆ ಮತ್ತು ಗೌರವವನ್ನು ಉಳಿಸುವ ಹೋರಾಟವಾಗಿತ್ತು. ಭಾರತದ ಇತಿಹಾಸದಲ್ಲಿ ಮಹಿಳಾ ಶಕ್ತಿ ರಾಷ್ಟ್ರಶಕ್ತಿಯಾಗಿ ಹೊರಹೊಮ್ಮಿರುವುದಕ್ಕೆ ಚೆನ್ನಮ್ಮನ ಜೀವನವೇ ಸಾಕ್ಷಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದ ಅಪ್ಪೆ, ಎನ್ಜಿಒ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಬಾಲಾಜಿ ಬಿರಾದಾರ, ಜಯಂತಿ ಸಮಿತಿ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಸೇರಿದಂತೆ ಹಲವರು ಮಾತನಾಡಿದರು.
ಜಯಂತಿ ಸಮಿತಿ ಅಧ್ಯಕ್ಷ ಶರಣಪ್ಪ ಹೊತಪೇಟ, ಮಹಾನಗರ ಪಾಲಿಕೆ ಸದಸ್ಯರಾದ ಸಂತೋಷ ಅರುಣಕುಮಾರ, ಪ್ರೀತಿ ರಾಜೇಶ ಪಪ್ಪು, ರಾಜಶೇಖರ ಪಾಟೀಲ, ಬಲಭೀಮ ಬೆಟ್ಟದ, ಭಾರತಿ ವಸ್ತ್ರದ, ಸುನೀತಾ ಭಾಲ್ಕೆ, ಚಿತ್ರನಟಿ ನೇಹಾ ಬಸವರಾಜ ಮೂಲಗೆ, ಸಂಗಮೇಶ ಮೊರ್ಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶರಣಯ್ಯ ಸ್ವಾಮಿ ಸ್ವಾಗತಿಸಿದರು. ವೀಣಾ ಮಾಶೆಟ್ಟಿ ನಿರೂಪಿಸಿದರು. ಸಂಜನಾ ಪಾಟೀಲ ವಂದಿಸಿದರು.
ಕಂಚಿನ ಪ್ರತಿಮೆ ಸ್ಥಾಪನೆಗೆ ನಿರ್ಧಾರ
ಚೆನ್ನಮ್ಮನ ಜೀವನ ಮತ್ತು ಹೋರಾಟ ಇಂದಿನ ಪೀಳಿಗೆಗೆ ದೇಶಭಕ್ತಿ ಹಾಗೂ ಸ್ವಾಭಿಮಾನದ ಪ್ರೇರಣೆ ನೀಡುವ ಉದ್ದೇಶದಿಂದ ನಗರದ ಚೆನ್ನಮ್ಮ ವೃತ್ತದಲ್ಲಿ ಅವರ ಭವ್ಯ ಕಂಚಿನ ಪ್ರತಿಮೆ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಜಯಂತಿ ಸಮಿತಿ ಸಂಚಾಲಕ ರೇವಣಸಿದ್ದಪ್ಪ ಜಲಾದೆ ತಿಳಿಸಿದರು.
ದಾನಿಗಳ ನೆರವಿನಿಂದ ಹಣ ಸಂಗ್ರಹಿಸಿ ಆದಷ್ಟು ಬೇಗ ಪ್ರತಿಮೆ ಸ್ಥಾಪನೆಯ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.
ನಗರದ ಬಸವೇಶ್ವರ ವೃತ್ತದಿಂದ ಚೆನ್ನಮ್ಮ ವೃತ್ತದವರೆಗಿನ ರಸ್ತೆಗೆ ಐದು ವರ್ಷಗಳ ಹಿಂದೆ ಜಿಲ್ಲಾಡಳಿತವು ‘ಚೆನ್ನಮ್ಮ ಮಾರ್ಗ’ ಎಂದು ಹೆಸರಿಟ್ಟು ಅನುಮೋದನೆ ನೀಡಿದೆ. ಈ ಕುರಿತು ಸೂಕ್ತ ಸ್ಥಳದಲ್ಲಿ ನಾಮಫಲಕ ಅಳವಡಿಸಲು ಮಹಾನಗರ ಪಾಲಿಕೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸಾಧಕಿಯರಿಗೆ ರಾಣಿ ಚೆನ್ನಮ್ಮ ಪ್ರಶಸ್ತಿ
ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಡಾ. ದೇವಿಕಾ ಅಶೋಕಕುಮಾರ ನಾಗೂರೆ ಮತ್ತು ಡಾ. ಎ.ಸಿ. ಲಲಿತಮ್ಮ ಹಾಗೂ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಉಪನ್ಯಾಸಕಿ ವಿದ್ಯಾವತಿ ಹಿರೇಮಠ ಅವರಿಗೆ ‘ಕಿತ್ತೂರು ರಾಣಿ ಚೆನ್ನಮ್ಮ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಧಕಿಯರು, ಚೆನ್ನಮ್ಮನ ತ್ಯಾಗ, ಹೋರಾಟ, ಸ್ವಾಭಿಮಾನ ಮತ್ತು ದೇಶಪ್ರೇಮದ ಆದರ್ಶಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಶಾಲಾ-ಕಾಲೇಜುಗಳಲ್ಲಿ ಚೆನ್ನಮ್ಮನ ಜೀವನ ಮತ್ತು ಸಾಧನೆ ಕುರಿತು ಚರ್ಚೆ, ಭಾಷಣ, ಪ್ರಬಂಧ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳಲ್ಲಿ ಇತಿಹಾಸದ ಅರಿವು ಮತ್ತು ದೇಶಪ್ರೇಮ ಬೆಳೆಸಲು ಸರ್ಕಾರ ಹಾಗೂ ಶಿಕ್ಷಣ ಸಂಸ್ಥೆಗಳು ಮುಂದಾಗಬೇಕು ಎಂದು ಹೇಳಿದರು.
ಇದಕ್ಕೂ ಮುನ್ನ ಬಸವನಗರದ ಬಸವೇಶ್ವರ ಮಂದಿರದಿಂದ ಕಾಳಿದಾಸನಗರ, ರಾಮಚೌಕ್ ಮಾರ್ಗವಾಗಿ ಚೆನ್ನಮ್ಮ ವೃತ್ತದವರೆಗೆ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ರಾಣಿ ಚೆನ್ನಮ್ಮನಿಗೆ ಜಯಘೋಷ ಮೊಳಗಿತು. ಕುದುರೆ ಮೇಲೆ ಚೆನ್ನಮ್ಮನ ವೇಷ ಧರಿಸಿ ಕುಳಿತಿದ್ದ ಯುವತಿ ಪೂಜಾ ಭಕ್ತರಾಜ ಅವರು ಜನರ ಗಮನ ಸೆಳೆದರು.



