ಕಾನೂನುಜಿಲ್ಲಾಸುದ್ದಿ

ಮಕ್ಕಳಿಗೆ ಕಾನೂನು ಅರಿವು ನೆರವು ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಬೇಕು:ನ್ಯಾಯಾಧೀಶ ವಿಜಯ ಕುಮಾರ್ ಜಾಟ್ಲಾ

ಕಲಬುರಗಿ, ಅ.24 – ಮಕ್ಕಳಿಗೆ ಕಾನೂನು ನೆರವಿನ ಬಗ್ಗೆ ಜಾಗೃತಿ ಮೂಡಿಸಬೇಕು ಹಾಗೂ ಮಕ್ಕಳು ಮತ್ತು ವಿದ್ಯಾರ್ಥಿಗಳು ಮುಗ್ಧರಾಗಿದ್ದು, ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದೆ. ತಂತ್ರಜ್ಞಾನದ ಸಕಾರಾತ್ಮಕ ಹಾಗೂ ನಕಾರಾತ್ಮಕ ಪರಿಣಾಮಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ವಿದ್ಯಾರ್ಥಿಗಳು ಮೊಬೈಲ್ ಮತ್ತು ಎಐ ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸಿಕೊಂಡು, ತಮ್ಮ ಭವಿಷ್ಯದ ಗುರಿಗಳತ್ತ ಗಮನಹರಿಸಬೇಕು ಎಂದು ಕಲಬುರಗಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಜಯಕುಮಾರ್ ಜಾಟ್ಲಾ ಹೇಳಿದರು.

ನಗರದ ಸೇಂಟ್ ಮೇರಿ ಶಾಲೆಯ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ, ದೆಹಲಿ ಮತ್ತು ಸೇಂಟ್ ಮೇರಿ ಶಾಲೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಪೋಕ್ಸೊ ಕಾಯ್ದೆ ಹಾಗೂ ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಮೊಬೈಲ್ ಬಳಕೆಯಲ್ಲಿ ಅನಗತ್ಯ ಹಾಗೂ ಹಾನಿಕಾರಕ ವಿಷಯಗಳಿಂದ ದೂರವಿದ್ದು, ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಪೋಷಕರ ನಂಬಿಕೆಯನ್ನು ಉಳಿಸಿಕೊಂಡು, ದುಶ್ಚಟಗಳಿಗೆ ಬಲಿಯಾಗದೆ ಶಿಕ್ಷಕರು ಬೋಧಿಸುವ ಪಾಠಗಳನ್ನು ಆಸಕ್ತಿಯಿಂದ ಕಲಿಯಬೇಕು. ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಮದುವೆ ಮಾಡುವ ಬದಲು ಉತ್ತಮ ಶಿಕ್ಷಣ ಕೊಡಿಸಿ, ವೈದ್ಯರು, ಎಂಜಿನಿಯರ್‌ಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಲು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ಬಾಲ್ಯವಿವಾಹವು ಮಕ್ಕಳ ಭವಿಷ್ಯಕ್ಕೆ ಅಡ್ಡಿಯಾಗುವುದರಿಂದ ಅದನ್ನು ತಡೆಗಟ್ಟಲು ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದು ಅವರು ತಿಳಿಸಿದರು.

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಗೌರವಾನ್ವಿತ ಅತಿಥಿಯಾಗಿ ಮಾತನಾಡಿ, ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಹಾಗೂ ಬಾಲ್ಯವಿವಾಹ ನಿರ್ಮೂಲನೆ ಮಾಡಲು ಮಕ್ಕಳಲ್ಲಿ ಕಾನೂನಿನ ಅರಿವು ಮತ್ತು ಶಿಕ್ಷಣದ ಮಹತ್ವವನ್ನು ಮೂಡಿಸುವುದು ಅಗತ್ಯ ಎಂದರು.

ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಇಂದಿಗೂ ನಡೆಯುತ್ತಿದ್ದು, ಇಂತಹ ಅನ್ಯಾಯಗಳ ವಿರುದ್ಧ ಧ್ವನಿ ಎತ್ತುವ ಧೈರ್ಯವನ್ನು ಮಕ್ಕಳು ಬೆಳೆಸಿಕೊಳ್ಳಬೇಕು.

ವಿಶೇಷವಾಗಿ ಹೆಣ್ಣುಮಕ್ಕಳು ಅನ್ಯಾಯವನ್ನು ಸಹಿಸದೆ, ಅದರ ವಿರುದ್ಧ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇದಕ್ಕೆ ಶಿಕ್ಷಣದ ಜೊತೆಗೆ ಕಾನೂನಿನ ಅರಿವು ಕೂಡ ಅತ್ಯಂತ ಮುಖ್ಯವಾಗಿದೆ. ಪ್ರತಿಯೊಂದು ಮಗುವಿನ ಬದುಕಿನಲ್ಲಿ ಜ್ಞಾನ ಮತ್ತು ಅರಿವಿನ ದೀಪ ಬೆಳಗಿದಾಗ ಮಾತ್ರ ಅವರು ತಮ್ಮ ಹಕ್ಕುಗಳನ್ನು ಅರಿತು, ಸಂಕಷ್ಟದ ಸಂದರ್ಭಗಳಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಲಬುರಗಿ ಜಿಲ್ಲೆಯಲ್ಲಿ ಈ ವರ್ಷ 66 ಬಾಲ್ಯವಿವಾಹಗಳು ನಡೆದಿರುವುದು ಆತಂಕಕಾರಿ ಸಂಗತಿಯಾಗಿದೆ. ಬಡತನ, ಆರ್ಥಿಕ ಸಂಕಷ್ಟ ಹಾಗೂ ಹೆಣ್ಣುಮಕ್ಕಳು ಪ್ರಾಪ್ತ ವಯಸ್ಸಿಗೆ ಬಂದಿದ್ದಾರೆ, ಬೇಗ ಮದುವೆ ಮಾಡಿಬಿಡೋಣ ಎಂಬ ಮನೋಭಾವ ಬಾಲ್ಯವಿವಾಹಕ್ಕೆ ಪ್ರಮುಖ ಕಾರಣಗಳಾಗಿವೆ. ಆದರೆ, ಮದುವೆಯೇ ಸಮಸ್ಯೆಗೆ ಪರಿಹಾರವಲ್ಲ. ಮಕ್ಕಳನ್ನು ಶಾಲೆಗೆ ಕಳುಹಿಸಿ, ಉತ್ತಮ ಶಿಕ್ಷಣ ನೀಡುವ ಮೂಲಕ ಸ್ವಾವಲಂಬಿಗಳನ್ನಾಗಿ ಬೆಳೆಸಬೇಕು. ತಮ್ಮ ಬದುಕಿನ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಿದಾಗ ಮಾತ್ರ ನಿಜವಾದ ಸಬಲೀಕರಣ ಸಾಧ್ಯ ಎಂದು ತಿಳಿಸಿದರು.

ಹದಿಹರೆಯದಲ್ಲಿ ಪ್ರೀತಿ ಮತ್ತು ಆಕರ್ಷಣೆ ಉಂಟಾಗುವುದು ಸಹಜ. ಆದರೆ, ಆ ವಯಸ್ಸಿನಲ್ಲಿ ತಮ್ಮ ನಿರ್ಧಾರಗಳ ಪರಿಣಾಮ ಹಾಗೂ ಅವು ಭವಿಷ್ಯದ ಮೇಲೆ ಬೀರುವ ಪ್ರಭಾವದ ಬಗ್ಗೆ ಸಂಪೂರ್ಣ ಅರಿವು ಇರುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ವಯಸ್ಸು, ಶಿಕ್ಷಣ ಮತ್ತು ಭವಿಷ್ಯದ ಗುರಿಗಳಿಗೆ ಆದ್ಯತೆ ನೀಡಬೇಕು. ಭಾವನೆಗಳಿಗೆ ಒಳಗಾಗಿ ಶಿಕ್ಷಣದಿಂದ ದೂರವಾಗದೆ, ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಪೋಕ್ಸೊ ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ ತಮ್ಮ ಹಕ್ಕುಗಳ ಕುರಿತು ತಿಳಿದುಕೊಳ್ಳಬೇಕು. ಯಾರಾದರೂ ದೌರ್ಜನ್ಯ ಎಸಗಿದರೆ ಅಥವಾ ಬಾಲ್ಯವಿವಾಹಕ್ಕೆ ಒತ್ತಾಯಿಸಿದರೆ ಮೌನವಾಗಿರದೆ ಪೋಷಕರು, ಶಿಕ್ಷಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು

. ಕಾನೂನಿನ ಅರಿವು ಮಕ್ಕಳಿಗೆ ರಕ್ಷಣೆ ನೀಡುವುದರ ಜೊತೆಗೆ ಆತ್ಮವಿಶ್ವಾಸದಿಂದ ಬದುಕುವ ಶಕ್ತಿಯನ್ನೂ ನೀಡುತ್ತದೆ ಎಂದರು.
ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸುವುದು, ಅವರ ಶಿಕ್ಷಣವನ್ನು ಮುಂದುವರಿಸುವುದು ಹಾಗೂ ಬಾಲ್ಯವಿವಾಹ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಕರೆ ನೀಡಿದರು.

ವಿದ್ಯಾರ್ಥಿಗಳೊಂದಿಗೆ ಸಂವಾದ
ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ, ದೆಹಲಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಖ್ಯಾತ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಡಾ. ಚಂದ್ರಕಾಂತ ಪಾಟೀಲ (ಖೇಡಗಿ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಠೋಡ, ಸೇಂಟ್ ಮೇರಿ ಶಾಲೆಯ ವ್ಯವಸ್ಥಾಪಕ ಫಾದರ್ ಜೋಸೆಫ್ ಪ್ರವೀಣ್, ಕಲಬುರಗಿ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ ಜಮಖಂಡಿ, ದಕ್ಷಿಣ ವಲಯದ ಕ್ಷೇತ್ರ ಸಮನ್ವಯಾಧಿಕಾರಿ, ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಡಾ. ಅಶೋಕ್ ಗುತ್ತೇದಾರ್ ಬಡದಾಳ್, ಸೇಂಟ್ ಮೇರಿ ಪ್ರೌಢಶಾಲೆಯ ಸಿಸ್ಟರ್ ರೋಜಾ ಪೀನಾ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಜಿಲ್ಲಾ ಮಿಷನ್ ಶಕ್ತಿ ಸಂಯೋಜಕಿ ವಿಜಯಲಕ್ಷ್ಮೀ ಜಾಧವ ಸ್ವಾಗತಿಸಿದರು. ಸೇಂಟ್ ಮೇರಿ ಪ್ರೌಢಶಾಲೆಯ ಶಿಕ್ಷಕಿಯರಾದ ವೆರೋನಿಕ ಮತ್ತು ಶೋಭಾ ತಿಮೋತಿ ವಂದಿಸಿದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button