ಶಿಕ್ಷಣ

ಯಾದವಾಡದಲ್ಲಿ ಅ. ೩೧ರಂದು ಗುರುನಮನ ಕಾರ್ಯಕ್ರಮ: ಪೂಜ್ಯರಿಗೆ ಅಧಿಕೃತ ಆಹ್ವಾನ

ಶ್ರೀ ಗುರುನೀಲಕಂಠ ಪ್ರೌಢಶಾಲೆಯ ೧೯೮೩–೮೪ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನೆಗೆ ಸಿದ್ಧತೆ; ಹಳೆಯ ಸಹಪಾಠಿಗಳ ನಡುವೆ ಆಹ್ವಾನ ವಿಚಾರವಾಗಿ ಅಸಮಾಧಾನ

ಬೆಳಗಾವಿ, ಅ. ೨೩: ಮೂಡಲಗಿ ತಾಲ್ಲೂಕಿನ ಯಾದವಾಡ ಗ್ರಾಮದ ಶ್ರೀ ಗುರುನೀಲಕಂಠ ಸ್ವಾಮಿ ಪ್ರೌಢಶಾಲೆಯ ೧೯೮೩–೮೪ನೇ ಸಾಲಿನ ವಿದ್ಯಾರ್ಥಿಗಳು ಅಕ್ಟೋಬರ್ ೩೧ರಂದು ಗುರುನಮನ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಮುಂಚೂಣಿ ಹಳೆಯ ವಿದ್ಯಾರ್ಥಿಗಳು ಪೂಜ್ಯರಿಗೆ ಅಧಿಕೃತ ಆಹ್ವಾನ ನೀಡಿ, ಕಾರ್ಯಕ್ರಮಕ್ಕೆ ಆಗಮಿಸಿ ಆಶೀರ್ವಚನ ನೀಡುವಂತೆ ವಿನಂತಿಸಿದರು.

ಗ್ರಾಮದ ಶ್ರೀ ಚೌಕೇಶ್ವರ ವಿರಕ್ತಮಠದ ವಿಶ್ವಾರಾಧ್ಯ ಮಹಾಸ್ವಾಮೀಜಿ ಹಾಗೂ ಸಿದ್ಧೇಶ್ವರ ಮಹಾಸ್ವಾಮೀಜಿ ಅವರಿಗೆ ಅಧಿಕೃತ ಆಹ್ವಾನ ನೀಡಲಾಯಿತು. ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳಾದ ರಾಜೇಂದ್ರ ಕಲ್ಯಾಣಿ, ಮೆಹಬೂಬ್ ತರಕಾರ, ವಿಷ್ಣುಪಂತ ಕಲಾಲ, ಬಸವರಾಜ ಮಾಳೇದ್, ಮಹಾದೇವ ಹಾವನ್ನವರ, ಗುರುಬಸಯ್ಯ ತುಪ್ಪದ್, ಅಮೀನಸಾಬ್ ಏಳೂರು, ಮಹಿಬೂಬ್ ಬಟಕುರ್ಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನೇತೃತ್ವ ವಹಿಸಿರುವ ಶಿಕ್ಷಕ ರಾಜೇಂದ್ರ ಕಲ್ಯಾಣಿ ಮಾತನಾಡಿ, ಗುರುನಮನ ಕಾರ್ಯಕ್ರಮದ ಸಿದ್ಧತೆಗಾಗಿ ಈಗಾಗಲೇ ಎರಡು ಪೂರ್ವಭಾವಿ ಸಭೆಗಳು ಹಾಗೂ ಹಲವು ಬಾರಿ ಅಂತರ್ಜಾಲದ ಮೂಲಕ ಸಭೆಗಳನ್ನು ನಡೆಸಲಾಗಿದೆ. ಎಲ್ಲ ಸಹಪಾಠಿಗಳೊಂದಿಗೆ ಚರ್ಚಿಸಿ ಅರ್ಥಪೂರ್ಣ ಕಾರ್ಯಕ್ರಮ ರೂಪಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚೌಕೇಶ್ವರ ವಿರಕ್ತಮಠದ ವಿಶ್ವಾರಾಧ್ಯ ಮಹಾಸ್ವಾಮೀಜಿ ಮತ್ತು ಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಚೆನ್ನಬಸಪ್ಪ ಹುಬ್ಬಳ್ಳಿ ಮುತ್ಯಾ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ಸಾಹಿತಿ ಹಾಗೂ ನಿವೃತ್ತ ಪ್ರಾಚಾರ್ಯ ವಿ.ಎಂ. ಯಾಕೊಳ್ಳಿ ಅತಿಥಿ ಉಪನ್ಯಾಸಕರಾಗಿ ಭಾಗವಹಿಸಲಿದ್ದಾರೆ. ಗುರುಗಳಾದ ಜಿ.ಜಿ. ಹುಬ್ಬಳ್ಳಿ, ಬಿ.ಎಂ. ಪರಗುಣಿ, ಎಸ್.ಸಿ. ಗಾಣಿಗೇರ ಹಾಗೂ ಸಿಬ್ಬಂದಿ ಬಸಲಿಂಗಪ್ಪ ಕಾಗವಾಡ ಅವರನ್ನು ಸನ್ಮಾನಿಸಲು ಉದ್ದೇಶಿಸಲಾಗಿದೆ. ಹಾಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಮತ್ತು ಗುರುಗಳ ಕುಟುಂಬದ ಸದಸ್ಯರಿಗೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಹಳೆಯ ಸಹಪಾಠಿಯ ಆಹ್ವಾನ ವಿಚಾರವಾಗಿ ಅಸಮಾಧಾನ

ಗುರುನಮನ ಕಾರ್ಯಕ್ರಮದ ಸಿದ್ಧತೆಯ ನಡುವೆ, ೧೯೮೩–೮೪ನೇ ಸಾಲಿನ ವಿದ್ಯಾರ್ಥಿಯಾಗಿರದ ಬಸಲಿಂಗಪ್ಪ ಉಂಡೋಡಿ ಅವರನ್ನು ಹಳೆಯ ಸಹಪಾಠಿಯೆಂದು ಪರಿಗಣಿಸಿ ಆಹ್ವಾನಿಸಿರುವ ವಿಚಾರ ವಿವಾದಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಆಯೋಜಕರ ಪ್ರಕಾರ, ಆ ಸಾಲಿನಲ್ಲಿ ಒಟ್ಟು ೭೯ ವಿದ್ಯಾರ್ಥಿಗಳಿದ್ದು, ಅವರಲ್ಲಿ ೧೫ ಮಂದಿ ಮೃತಪಟ್ಟಿದ್ದಾರೆ. ಉಳಿದ ಸಹಪಾಠಿಗಳು ಕಾರ್ಯಕ್ರಮದ ಸಿದ್ಧತೆಗಾಗಿ ಸಭೆಗಳನ್ನು ನಡೆಸಿದ್ದಾರೆ. ಈ ನಡುವೆ, ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಬಸಲಿಂಗಪ್ಪ ಉಂಡೋಡಿ ಅವರನ್ನು ಹಳೆಯ ಸಹಪಾಠಿಯಲ್ಲದಿದ್ದರೂ ಸಹಪಾಠಿಯೆಂದು ಪರಿಚಯಿಸಿ, ಸಭೆಗಳಿಗೆ ಆಹ್ವಾನಿಸಿರುವುದು ಕೆಲವರ ಆಕ್ಷೇಪಕ್ಕೆ ಕಾರಣವಾಗಿದೆ.

ಉಂಡೋಡಿ ಅವರು ಕಾರ್ಯಕ್ರಮಕ್ಕೆ ₹೧೫,೦೦೦ ದೇಣಿಗೆ ನೀಡಿರುವುದಾಗಿ ತಿಳಿದುಬಂದಿದೆ. ಅವರ ಕೊಡುಗೆಯನ್ನು ಸ್ವಾಗತಿಸುವುದರ ಜೊತೆಗೆ, ೧೯೮೩–೮೪ನೇ ಸಾಲಿನ ವಿದ್ಯಾರ್ಥಿಯಲ್ಲದ ವ್ಯಕ್ತಿಯನ್ನು ಸಹಪಾಠಿಯೆಂದು ಪರಿಗಣಿಸಿ ಆಹ್ವಾನಿಸುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮಕ್ಕೆ ಹಣ ನೀಡದವರನ್ನು ವಿದ್ಯಾರ್ಥಿಗಳ ಪಟ್ಟಿಯಿಂದ ಕೈಬಿಡುವ ಕುರಿತು ನಡೆದ ಚರ್ಚೆಯೂ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.

ಈ ವಿಚಾರದಲ್ಲಿ ಶಿಕ್ಷಕರಾದ ಮಲ್ಲಿಕಾರ್ಜುನ ಹುಲಗಬಾಳಿ, ವೆಂಕಟೇಶ ಲಕ್ಷಾಣಿ ಮತ್ತು ರಾಜೇಂದ್ರ ಕಲ್ಯಾಣಿ ಅವರ ನಡೆ ಕುರಿತು ಕೆಲ ಸಹಪಾಠಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಉಂಡೋಡಿ ಅವರು ನೀಡಿದ ದೇಣಿಗೆಯನ್ನು ಗೌರವಿಸಬೇಕು; ಅಗತ್ಯವಿದ್ದರೆ ಕಾರ್ಯಕ್ರಮದಲ್ಲಿ ಸನ್ಮಾನಿಸಬಹುದು. ಆದರೆ ಅವರನ್ನು ೧೯೮೩–೮೪ನೇ ಸಾಲಿನ ಸಹಪಾಠಿಯೆಂದು ಬಿಂಬಿಸುವುದು ಮತ್ತು ಅಧಿಕೃತವಾಗಿ ಆಹ್ವಾನಿಸುವುದು ಸೂಕ್ತವಲ್ಲ ಎಂಬುದು ಆಕ್ಷೇಪ ವ್ಯಕ್ತಪಡಿಸಿರುವವರ ಅಭಿಪ್ರಾಯವಾಗಿದೆ.

ಗುರುನಮನ ಕಾರ್ಯಕ್ರಮವು ಗುರುಗಳಿಗೆ ಗೌರವ ಸಲ್ಲಿಸುವ ಮತ್ತು ಹಳೆಯ ವಿದ್ಯಾರ್ಥಿಗಳ ಬಾಂಧವ್ಯವನ್ನು ಗಟ್ಟಿಗೊಳಿಸುವ ಉದ್ದೇಶ ಹೊಂದಿದೆ. ಆದ್ದರಿಂದ ಆಹ್ವಾನ ಹಾಗೂ ದೇಣಿಗೆಗೆ ಸಂಬಂಧಿಸಿದ ಭಿನ್ನಾಭಿಪ್ರಾಯಗಳನ್ನು ಪರಸ್ಪರ ಚರ್ಚೆಯ ಮೂಲಕ ಪರಿಹರಿಸಿ, ಕಾರ್ಯಕ್ರಮದ ಗೌರವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button