ಜಿಲ್ಲಾಸುದ್ದಿ

ಅಂತರ್ಜಾತಿ ವಿವಾಹ ಪ್ರೋತ್ಸಾಹಧನದ ಹೆಸರಿನಲ್ಲಿ ಗೋಲ್‌ಮಾಲ್ ಆರೋಪ: ತನಿಖೆಗೆ ಸೂಚನೆ

ಕಲಬುರಗಿ, ಅ. 10: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ಅಂತರ್ಜಾತಿ ವಿವಾಹ ಪ್ರೋತ್ಸಾಹಧನದ ಹೆಸರಿನಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದ್ದು, ನಕಲಿ ಜೋಡಿಗಳನ್ನು ಸೃಷ್ಟಿಸಿ ಲಕ್ಷಾಂತರ ರೂಪಾಯಿ ಲೂಟಿ ಮಾಡಲಾಗಿದೆ ಎಂಬ ಗಂಭೀರ ಅನುಮಾನ ವ್ಯಕ್ತವಾಗಿದೆ.

ತಾಲ್ಲೂಕಿನಲ್ಲಿ 170ಕ್ಕೂ ಹೆಚ್ಚು ವಿವಾಹಗಳ ಸತ್ಯಾಸತ್ಯತೆ ಬಗ್ಗೆ ಸಂಶಯ ಮೂಡಿದ್ದು, ಈ ಪ್ರಕರಣದ ಕುರಿತು ಸಮಾಜ ಕಲ್ಯಾಣ ಇಲಾಖೆಯಿಂದ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಪ್ರೀತಿ ದೊಡ್ಡಮನಿ ತಿಳಿಸಿದ್ದಾರೆ.

ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಅರ್ಹ ದಂಪತಿಗಳಿಗೆ ಆರ್ಥಿಕ ನೆರವು ನೀಡುತ್ತದೆ. ಅಂತರ್ಜಾತಿ ವಿವಾಹವಾದ ಜೋಡಿಗೆ ಸಮಾಜ ಕಲ್ಯಾಣ ಇಲಾಖೆಯ ಮೂಲಕ ₹5 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತದೆ. ಇದಕ್ಕಾಗಿ ದಂಪತಿಗಳು ಕಡ್ಡಾಯವಾಗಿ ವಿವಾಹ ನೋಂದಣಿ ಮಾಡಿಸಿರಬೇಕು. ಅಲ್ಲದೆ, ₹3 ಲಕ್ಷವನ್ನು ಜಂಟಿ ಖಾತೆಯಲ್ಲಿ ಠೇವಣಿ ಇಡಬೇಕೆಂಬ ನಿಯಮವೂ ಇದೆ.

ಆದರೆ, ಚಿಂಚೋಳಿ ತಾಲ್ಲೂಕಿನಲ್ಲಿ ಈ ಯೋಜನೆಯ ಹೆಸರಿನಲ್ಲಿ ಅಕ್ರಮ ನಡೆದಿರುವ ಆರೋಪಗಳು ಕೇಳಿಬಂದಿವೆ. ಹಲವು ಪ್ರಕರಣಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿಲ್ಲ ಎಂಬ ಆರೋಪವೂ ವ್ಯಕ್ತವಾಗಿದೆ. ಕೆಲವು ಮಧ್ಯವರ್ತಿಗಳು ಅಧಿಕಾರಿಗಳೊಂದಿಗೆ ಶಾಮೀಲಾಗಿ ಲಕ್ಷಾಂತರ ರೂಪಾಯಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಅಂತರ್ಜಾತಿ ವಿವಾಹಗಳಿಗೆ ನೀಡುವ ಪ್ರೋತ್ಸಾಹಧನದ ದುರುಪಯೋಗದ ಆರೋಪ ಗಂಭೀರ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ತನಿಖೆ ಕೈಗೊಂಡಿದ್ದು, ಪ್ರಕರಣದಲ್ಲಿ ಯಾರ ಪಾತ್ರವಿದೆ ಎಂಬುದು ತನಿಖೆಯಿಂದ ಬಹಿರಂಗವಾಗಬೇಕಿದೆ.

ಆರೋಪಗಳ ಸತ್ಯಾಸತ್ಯತೆ, ಪ್ರೋತ್ಸಾಹಧನ ಪಡೆದ ವಿವಾಹಗಳ ಅರ್ಹತೆ ಹಾಗೂ ಹಣದ ಬಳಕೆಯ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ವ್ಯಕ್ತವಾಗಿದೆ.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button