ಕಬ್ಬಿಗೆ ಬೆಂಬಲ ಬೆಲೆ ಘೋಷಣೆಗೆ ಆಗ್ರಹ: ಅ.13ರಂದು ರೈತರಿಂದ ರಾಷ್ಟ್ರೀಯ ಹೆದ್ದಾರಿ ಬಂದ್ ಎಚ್ಚರಿಕೆ

ಕಲಬುರಗಿ, ಅ.10: ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ನಿಗದಿಪಡಿಸಬೇಕು ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಅಕ್ಟೋಬರ್ 13ರಂದು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಚಳವಳಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಮಹೇಶಗೌಡ ಎಂ. ಸುಬೇದಾರ್ ಎಚ್ಚರಿಕೆ ನೀಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಕಬ್ಬಿಗೆ ಪ್ರತಿ ಟನ್ಗೆ ₹400 ಹಾಗೂ ಉತ್ತರಾಖಂಡದಲ್ಲಿ ₹365ರಷ್ಟು ಬೆಲೆ ಮತ್ತು ಪ್ರೋತ್ಸಾಹಧನ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ರೈತರಿಗೆ ನ್ಯಾಯಯುತ ಬೆಲೆ ದೊರೆಯಬೇಕು ಎಂದು ಒತ್ತಾಯಿಸಿದರು.
ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸದಿದ್ದರೆ ಒಂಬತ್ತು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಕ್ಟೋಬರ್ 13ರಂದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ರೈತರ ಪ್ರಮುಖ ಬೇಡಿಕೆಗಳು
ಕೃಷಿ ಉತ್ಪಾದನಾ ವೆಚ್ಚ, ನೀರಾವರಿ ಸಾಲದ ಬಡ್ಡಿ ಹಾಗೂ ಭೂಮಿಯ ಬಾಡಿಗೆಯನ್ನು ಒಳಗೊಂಡಂತೆ ಕೃಷಿ ವೆಚ್ಚದ ಸಮಗ್ರ ವರದಿಯನ್ನು ಸಂಬಂಧಪಟ್ಟ ಆಯೋಗ ಮತ್ತು ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಸಿದ್ಧಪಡಿಸಬೇಕು ಎಂದು ಆಗ್ರಹಿಸಿದರು.
ಕಬ್ಬಿಗೆ ಪ್ರತಿ ಟನ್ಗೆ ₹5,500 ಬೆಲೆ ನಿಗದಿಪಡಿಸಬೇಕು. ಸಕ್ಕರೆಗೆ ಪ್ರತಿ ಕೆ.ಜಿ.ಗೆ ₹60 ದರ ನಿಗದಿಪಡಿಸಬೇಕು. ಕಬ್ಬು ಕಟಾವು ಮಾಡಿದ 14 ದಿನಗಳೊಳಗೆ ರೈತರಿಗೆ ಹಣ ಪಾವತಿಸಬೇಕು. ಪಾವತಿಯಲ್ಲಿ ವಿಳಂಬವಾದರೆ ಶೇ.15ರಷ್ಟು ಬಡ್ಡಿಯೊಂದಿಗೆ ಹಣ ನೀಡಬೇಕು ಎಂದು ಒತ್ತಾಯಿಸಿದರು.
ಸಕ್ಕರೆ ಇಳುವರಿ ಮತ್ತು ಸಕ್ಕರೆ ಪ್ರಮಾಣದ ಆಧಾರದ ಮೇಲೆ ರೈತರಿಗೆ ನ್ಯಾಯಯುತ ಬೆಲೆ ದೊರೆಯುವಂತೆ ವ್ಯವಸ್ಥೆ ರೂಪಿಸಬೇಕು. ಸಕ್ಕರೆ ಇಳುವರಿ ಪರಿಶೀಲನೆ ಸಂದರ್ಭದಲ್ಲಿ ಕಾರ್ಖಾನೆ ಆಡಳಿತ ಮಂಡಳಿ, ರೈತರು ಹಾಗೂ ರೈತ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ಇರಬೇಕು. ಈ ಸಮಿತಿಯ ಸಮ್ಮುಖದಲ್ಲಿಯೇ ಇಳುವರಿ ಪರೀಕ್ಷೆ ನಡೆಸಬೇಕು ಎಂದು ಹೇಳಿದರು.
ಸಕ್ಕರೆ ಕಾರ್ಖಾನೆಗಳ ಆದಾಯದಲ್ಲೂ ರೈತರಿಗೆ ಪಾಲು ಸಿಗಲಿ
ಕಬ್ಬಿನಿಂದ ಸಕ್ಕರೆ ಮಾತ್ರವಲ್ಲದೆ ಎಥನಾಲ್, ಮೊಲಾಸಸ್, ಪ್ರೆಸ್ಮಡ್, ಬಗಾಸ್ ಹಾಗೂ ವಿದ್ಯುತ್ ಉತ್ಪಾದನೆಯ ಮೂಲಕವೂ ಸಕ್ಕರೆ ಕಾರ್ಖಾನೆಗಳು ಮತ್ತು ಸರ್ಕಾರಕ್ಕೆ ಆದಾಯ ಬರುತ್ತದೆ. ಆದ್ದರಿಂದ ಕೇವಲ ಸಕ್ಕರೆಯ ಬೆಲೆಯನ್ನು ಆಧರಿಸಿ ರೈತರಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು ನಿರ್ಧರಿಸಬಾರದು. ಉಪ ಉತ್ಪನ್ನಗಳಿಂದ ಬರುವ ಆದಾಯವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕು ಎಂದು ಮಹೇಶಗೌಡ ಒತ್ತಾಯಿಸಿದರು.
ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚವನ್ನು ಕಾರ್ಖಾನೆಗಳೇ ಭರಿಸಬೇಕು. ಕಟಾವು ಕಾರ್ಮಿಕರು ರೈತರಿಂದ ಹೆಚ್ಚುವರಿಯಾಗಿ ₹8 ಸಾವಿರದಿಂದ ₹10 ಸಾವಿರದವರೆಗೆ ವಸೂಲಿ ಮಾಡುವುದನ್ನು ತಡೆಯಬೇಕು. ಇಲ್ಲವಾದಲ್ಲಿ ಕಟಾವು ಕಾರ್ಮಿಕರ ಕೂಲಿಯನ್ನು ಕಾರ್ಖಾನೆಗಳೇ ಪಾವತಿಸಬೇಕು ಎಂದು ಆಗ್ರಹಿಸಿದರು.
ಕಬ್ಬು ಕಟಾವಿನ ನಂತರ ತೂಕದಲ್ಲಿ ವಂಚನೆ ನಡೆಯದಂತೆ ಎಲ್ಲ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಸರ್ಕಾರದ ವತಿಯಿಂದ ಡಿಜಿಟಲ್ ತೂಕದ ಯಂತ್ರಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು.
ತೊಗರಿಗೆ ₹15 ಸಾವಿರ ಬೆಲೆ ನಿಗದಿಗೆ ಆಗ್ರಹ
ಕಬ್ಬಿನ ಬೆಲೆಯ ಜೊತೆಗೆ ಇತರ ಕೃಷಿ ಉತ್ಪನ್ನಗಳಿಗೂ ನ್ಯಾಯಯುತ ಬೆಲೆ ನಿಗದಿಪಡಿಸಬೇಕು ಎಂದು ರೈತ ಸಂಘ ಆಗ್ರಹಿಸಿದೆ. ತೊಗರಿಗೆ ಪ್ರತಿ ಕ್ವಿಂಟಲ್ಗೆ ₹15 ಸಾವಿರ, ಭತ್ತಕ್ಕೆ ₹5 ಸಾವಿರ ಹಾಗೂ ಹತ್ತಿಗೆ ₹15 ಸಾವಿರ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಇತರ ಬೆಳೆಗಳ ಬೆಲೆ ನಿರ್ಧರಿಸುವಾಗ ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿಯ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಅ.13ರಿಂದ ಅನಿರ್ದಿಷ್ಟಾವಧಿ ಹೋರಾಟದ ಎಚ್ಚರಿಕೆ
ರೈತರ ಬೇಡಿಕೆಗಳ ಕುರಿತು ಕೇಂದ್ರ ಸರ್ಕಾರವು ದೆಹಲಿಯ ಕೃಷಿ ಭವನದಲ್ಲಿ ಸಭೆ ನಡೆಸಿದೆ. ಆ ಸಭೆಯಲ್ಲಿ ಚರ್ಚಿಸಲಾದ ಬೇಡಿಕೆಗಳನ್ನು ಈಡೇರಿಸದಿದ್ದರೆ ಅಕ್ಟೋಬರ್ 13ರಿಂದ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ಅನಿರ್ದಿಷ್ಟಾವಧಿಗೆ ಬಂದ್ ಮಾಡಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಗುಲ್ಬರ್ಗಾಪುರದಲ್ಲಿ ನಡೆಯುತ್ತಿರುವ ಹೋರಾಟದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿರುವ ಸಕ್ಕರೆ ಕಾರ್ಖಾನೆಗಳು ಕಾರ್ಯಾಚರಣೆ ಆರಂಭಿಸಬಾರದು ಎಂದು ಅವರು ಒತ್ತಾಯಿಸಿದರು. ಕಾರ್ಖಾನೆಗಳು ಕಾರ್ಯಾರಂಭ ಮಾಡಿದರೆ ಉಂಟಾಗುವ ಅನಾಹುತಗಳಿಗೆ ಜಿಲ್ಲಾಡಳಿತ ಮತ್ತು ಕಾರ್ಖಾನೆಗಳೇ ನೇರ ಹೊಣೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಸವರಾಜ್ ಸಿ. ಕೋರಿ, ವಿಜಯಕುಮಾರ್ ಮುಟ್ಟೂರು, ಜಗದೀಶ್ ಪಾಟೀಲ, ಶಾಂತಮಲ್ಲಪ್ಪ ಕಲಬುರಗಿ, ಕರಬಸಪ್ಪ ಉಜ್ಜಾ ಹರಸೂರು, ಸಿದ್ದರಾಮ ಧನ್ನೂರ್, ಸಂತೋಷ್ ಜಿ. ಮಳಗೋಂಡ, ಶರಣಗೌಡ ಪಾಟೀಲ, ಅಶೋಕ್ ಹೂಗಾರ್, ವಿಶ್ವನಾಥ ಹೂಗಾರ್, ಶರಣು ಕೌಲಗಿ, ಸಚಿನ್ ಕೋಳಿ, ದತ್ತು ರಾಠೋಡ್ ಸೇರಿದಂತೆ ರೈತ ಸಂಘದ ಮುಖಂಡರು ಉಪಸ್ಥಿತರಿದ್ದರು.



