ಜಿಲ್ಲಾಸುದ್ದಿ

ಮತಪಟ್ಟಿಯಲ್ಲಿ 34,784 ಮತದಾರರು,ಎಂ.ಸಿ.ಸಿ. ಕಟ್ಟುನಿಟಾಗಿ ಪಾಲಿಸಲು ವಿವಿಧ ತಂಡಗಳ ರಚನೆ

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ:

ಕಲಬುರಗಿ,ಅ.10- ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಒಂದು ಸ್ಥಾನ ಆಯ್ಕೆಗೆ ಇದೇ ಅಕ್ಟೋಬರ್ 23 ರಂದು ಚುನಾವಣೆ ನಡೆಯಲಿದ್ದು, ಎಂ.ಎಲ್.ಎ-ಎಂ.ಪಿ ಚನಾವಣೆ ಮಾದರಿಯಲ್ಲಿಯೇ ಈ ಚುನಾವಣೆಗೂ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಲು ಕ್ಷೇತ್ರದಾದ್ಯಂತ ಜಿಲ್ಲಾ ಹಂತದಲ್ಲಿ ವಿವಿಧ ತಂಡಗಳನ್ನು ರಚಿಸಿದ್ದು, 24 ಗಂಟೆಗಳ ಕಾಲ ನಿರಂತರ ನಿಗಾ ಇಡಲಾಗುತ್ತಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಹೀರಾ ನಸೀಮ್ ತಿಳಿಸಿದರು.

ಇಲ್ಲಿನ ಪ್ರಾದೇಶಿಕ ಅಯುಕ್ತರ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಚುನಾವಣಾ ಅಂತಿಮ ಕಣದಲ್ಲಿ 13 ಅಭ್ಯರ್ಥಿಗಳು ಉಳಿದಿದ್ದಾರೆ. ಕ್ಷೇತ್ರದ ವ್ಯಾಪ್ತಿಗೆ ಕಲಬುರಗಿ ವಿಭಾಗದ ಕಲಬುರಗಿ, ಬೀದರ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳು ಬರಲಿದ್ದು, ಆಯಾ ಜಿಲ್ಲೆಗಳಲ್ಲಿ ಎಂ.ಸಿ.ಸಿ ಕಟ್ಟುನಿಟ್ಟಾಗಿ ಪಾಲನೆಗೆ ಫ್ಲೈಯಿಂಗ್ ಸ್ಕ್ವಾಡ್ ತಂಡ, ಸ್ಟ್ಯಾಟಿಕ್ ಸರ್ವೆಲೆನ್ಸ್ ತಂಡ, ವಿಡಿಯೋ ಸರ್ವೇಲೆನ್ಸ್ ತಂಡ, ವಿಡಿಯೋ ವೀಕ್ಷಣೆ ತಂಡ, ಎಂ.ಸಿ.ಸಿ ತಂಡ, ಎಂ.ಸಿ.ಎಂ.ಸಿ ಸಮಿತಿ, ದೂರು ಮೇಲ್ವಿಚಾರಣಾ ತಂಡ, ಮೀಡಿಯಾ ವೀವಿಂಗ್ ತಂಡ ರಚಿಸಲಾಗಿದೆ.

ಇನ್ನು ಸ್ಥಳೀಯವಾಗಿ ಲಾ & ಆರ್ಡರ್ ನಿರ್ವಹಣೆಗೆ ಸೆಕ್ಟರ್ ಆಫೀಸರ್ ಸಹ ನೇಮಿಸಲಾಗಿದೆ ಎಂದರು.ಚುನಾವಣೆ ಸಂಬಂಧಪಟ್ಟಂತ ಎಲ್ಲಾ ರೀತಿಯ ಪರವಾನಿಗೆಗಳನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಮುಖಾಂತರವೇ ನೀಡಲಾಗುತ್ತದೆ. ಸಂಪೂರ್ಣ ಕ್ಷೇತ್ರಕ್ಕೆ ಅನ್ವಯಿಸುವಂತೆ ಪ್ರಚಾರಕ್ಕಾಗಿ ಮಾತ್ರ ವಾಹನ ಪರವಾನಿಗೆಯನ್ನು ಚುನಾವಣಾಧಿಕಾರಿಗಳ ಕಾರ್ಯಾಲಯದಿಂದ ನೀಡಲಾಗುವುದು.

ನಿಷ್ಪಕ್ಷಪಾತ, ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ಚನಾವಣೆ ನಡೆಸಲು ಅಕ್ಟೋಬರ್ 23ರಂದು ನಡೆಯುವ ಮತದಾನ ಮತ್ತು ಅಕ್ಟೋಬರ್ 27 ರಂದು ನಡೆಯುವ ಮತ ಎಣಿಕೆಗೆ ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇನ್ನು ಈ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಖರ್ಚು ವೆಚ್ಚದ ಮಿತಿ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಹಾಗಂತ ಮತದಾರರಿಗೆ ಹಣದ ಆಮೀಷ ನೀಡುವಂತಿಲ್ಲ ಎಂದಿದ್ದಾರೆ.

ಪ್ರತಿಯೊಂದು ಮತದಾನ ಕೇಂದ್ರಕ್ಕೆ ಮತಗಟ್ಟೆ ಅಧಿಕಾರಿ-ಸಿಬ್ಬಂದಿಗಳನ್ನು ಹಾಗೂ ಮತ ಎಣಿಕೆಯ ಪ್ರತಿ ಟೇಬಲ್‌ಗೆ ಮೈಕ್ರೋ ವೀಕ್ಷರನ್ನು ಜಿಲ್ಲಾಧಿಕಾರಿಗಳ ಮುಖಾಂತರ ನೇಮಿಸಲಾಗಿದ್ದು, ಮೊದಲನೆ ಸುತ್ತಿನ ತರಬೇತಿಯನ್ನು ಇದೇ ಅಕ್ಟೋಬರ್ 12ಕ್ಕೆ ಮತ್ತು ಎರಡನೇ ಸುತ್ತಿನ ತರಬೇತಿ ಅಕ್ಟೋಬರ್ 17ಕ್ಕೆ ಜಿಲ್ಲಾ ಮಟ್ಟದಲ್ಲಿ ನಡೆಸಲಾಗುತ್ತದೆ. ಇನ್ನು ಎಲ್ಲಾ ಮತದಾನ ಕೇಂದ್ರಗಳಿಗೂ ಹೊರಗಡೆಯಿಂದ ಹಾಗೂ ಒಳಗಡೆಯಿಂದ ವೆಬ್‌ಕಾಸ್ಟಿಂಗ್ ಸೌಲಭ್ಯ ಸಹ ಕಲ್ಪಿಸಲಾಗುತ್ತಿದೆ ಎಂದರು.ಕ್ಷೇತ್ರದಾದ್ಯಂತ 34,784 ಮತದಾರರು,ಕಲಬುರಗಿಯಲ್ಲಿಯೆ ಹೆಚ್ಚು:ಈಶಾನ್ಯ ಶಿಕ್ಷಕರ ಕ್ಷೇತ್ರದಾದ್ಯಂತ ಪುರುಷ 20,040 ಹಾಗೂ ಮಹಿಳಾ 14,744 ಸೇರಿದಂತೆ ಒಟ್ಟು 34,784 ಮತದಾರರು ಮತ ಚಲಾವಣೆಗೆ ಹೆಸರು ನೊಂದಣಿ ಮಾಡಿಕೊಂಡಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ 1,813 ಪುರುಷ, 1,580 ಮಹಿಳೆ ಸೇರಿ 3,393, ವಿಜಯನಗರ ಜಿಲ್ಲೆಯಲ್ಲಿ 2,190 ಪುರುಷ, 1,136 ಮಹಿಳೆ ಸೇರಿ 3,326, ಬೀದರ ಜಿಲ್ಲೆಯಲ್ಲಿ 3,794 ಪುರುಷ, 3,244 ಮಹಿಳೆ ಸೇರಿ 7,038, ಕಲಬುರಗಿ ಜಿಲ್ಲೆಯಲ್ಲಿ 5,672 ಪುರುಷ, 4,980 ಮಹಿಳೆ ಸೇರಿ 10,652, ಯಾದಗಿರಿ ಜಿಲ್ಲೆಯಲ್ಲಿ 1,548 ಪುರುಷ, 711 ಮಹಿಳೆ ಸೇರಿ 2,259, ಕೊಪ್ಪಳ ಜಿಲ್ಲೆಯಲ್ಲಿ 1,845 ಪುರುಷ, 869 ಮಹಿಳೆ ಸೇರಿ 2,714 ಹಾಗೂ ರಾಯಚೂರು ಜಿಲ್ಲೆಯಲ್ಲಿ 3,178 ಪುರುಷ, 2,224 ಮಹಿಲೆ ಸೇರಿ 5,402 ಮತದಾರರು ಇದ್ದಾರೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದರು.

144 ಮತಗಟ್ಟೆ ಸ್ಥಾಪನೆ:ಅಕ್ಟೋಬರ್ 23 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿದ್ದು, ಆಯೋಗವು ನಿಗಧಿಪಡಿಸಿರುವ 14 ದಾಖಲೆಗಳಲ್ಲಿ ಯಾವುದಾದರೊಂದು ದಾಖಲೆ ತೋರಿಸಿ ಮತ ಚಲಾಯಿಸಬಹುದಾಗಿದೆ. ಕಲಬುರಗಿ-40, ಬೀದರ-33, ರಾಯಚೂರು-16, ಬಳ್ಳಾರಿ-9, ಕೊಪ್ಪಳ-20, ಯಾದಗಿರಿ-8, ವಿಜಯನಗರ-18 ಮತಗಟ್ಟೆಗಳು ಸೇರಿದಂತೆ ಕ್ಷೇತ್ರದಾದ್ಯಂತ ಒಟ್ಟು 144 ಮತಗಟ್ಟೆಗಳು ಸ್ಥಾಪಿಸಲಾಗಿದೆ. ಇನ್ನು ಅಕ್ಟೋಬರ್ 27ಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ್ ಹಾಲ್‌ನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಜಹೀರಾ ನಸೀಮ್ ತಿಳಿಸಿದರು.ಮತ ಅಮಾನ್ಯವಾಗದಂತೆ ಎಚ್ಚರ ವಹಿಸಿ:ಈ ಚುನಾವಣೆಯಲ್ಲಿ ಮತದಾನವು ಮತಪತ್ರ ಮುಖಾಂತರ ಪ್ರಾಶಸ್ತ ಮತ ನೀಡಲು ಅವಕಾಶವಿರುತ್ತದೆ.

ಇಲ್ಲಿ ನೋಟಾಗೆ ಅವಕಾಶ ಇರುವುದಿಲ್ಲ. ಚುನಾವಣಾ ಕಣದಲ್ಲಿ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗೂ ಪ್ರಾಶಸ್ತ್ಯದ ರೂಪದಲ್ಲಿ ಮತದಾರ ಮತ ನೀಡಬಹುದಾಗಿದೆ. ಪ್ರಾಶಸ್ತ್ಯ ಮತ ನೀಡುವಾಗ ಕ್ರಮ ಸಂಖ್ಯೆ ಕೈಬಿಟ್ಟು ಚಲಾಯಿಸಿದ ನಂತರದ ಮತಗಳು ಅಮಾನ್ಯವಾಗಲಿದ್ದು, ಮತದಾರರು ಇದನ್ನು ಮುಖ್ಯವಾಗಿ ಗಮನಿಸಬೇಕು. ಇನ್ನು ಮತಪತ್ರದಲ್ಲಿ ಆಯೋಗದಿಂದ ನೀಡಲಾಗಿರುವ ನೆರಳೆ ಬಣ್ಣದ (Violet sketch Pen) ಪೆನ್ನಿನ ಮುಖಾಂತರ ಮಾತ್ರ ಪ್ರಾಶಸ್ತ ಮತವನ್ನು ಚಲಾಯಿಸತಕ್ಕದ್ದು. ಬೇರೆ ಇತರೆ ಬಣ್ಣದ ಪೆನ್ನಿನಿಂದ ಮತ ಚಲಾಯಿಸಿದ್ದಲ್ಲಿ ಹಾಗೂ ಗುರುತುಗಳನ್ನೊಳಗೊಂಡ ಚಲಾಯಿಸಲಾದ ಮತಗಳು ಅಮಾನ್ಯಗೊಳ್ಳಲಿವೆ ಎಂದು ಜಹೀರಾ ನಸೀಮ್ ಸ್ಪಷ್ಟಪಡಿಸಿದರು.

ಸಹಾಯವಾಣಿ ಸ್ಥಾಪನೆ:ಚುನಾವಣೆ ವಿಷಯ ಕುರಿತು ಏನು ದೂರುಗಳಿದಲ್ಲಿ ಸಾರ್ವಜನಿಕರು, ರಾಜಕೀಯ ಪಕ್ಷಗಳು ಸಲ್ಲಿಸಲು ಅನುಕೂಲವಾಗುವಂತೆ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ 08472-200255 ತೆರೆಯಲಾಗಿದ್ದು, 24 ಗಂಟೆಗಳ ಕಾಲ ನಿರ್ವಹಿಸುತ್ತಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಹಾಯಕ ಚುನಾವಣಾಧಿಕಾರಿಯಾಗಿರುವ ಕಲಬುರಗಿ ಜಿಲ್ಲಾಧಿಕಾರಿ ಇಕ್ರಂ ಶರೀಫ್, ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾಗಿರುವ ಪ್ರಮೀಳಾ ಎಂ.ಕೆ. ಇದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button