ಜಿಲ್ಲಾಸುದ್ದಿ

ಕರ್ತವ್ಯದಲ್ಲಿದ್ದಾಗಲೇ ಮದ್ಯಪಾನ: ಪೊಲೀಸ್ ಪೇದೆ ಅಮಾನತು

ಕಲಬುರಗಿ, ಅ.10: ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆಯೊಬ್ಬರು ಮಸೀದಿಯ ಚಾವಣಿಯ ಮೇಲೆ ನಿಂತು ಬಿಯರ್ ಕುಡಿಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದೆ.

ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮಹಾಗಾಂವ್ ಪೊಲೀಸ್ ಠಾಣೆಯ ಪೇದೆ ಹನುಮಂತ ಎಂಬುವವರು ಹರಸೂರು ಗ್ರಾಮದ ಮಸೀದಿಯ ಚಾವಣಿಯ ಮೇಲೆ ನಿಂತು ಬಿಯರ್ ಕುಡಿದಿದ್ದಾರೆ ಎನ್ನಲಾಗಿದೆ. ಈ ದೃಶ್ಯವನ್ನು ಗ್ರಾಮಸ್ಥರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ವಿಡಿಯೊ ವೈರಲ್ ಆಗುತ್ತಿದ್ದಂತೆಯೇ ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದ್ದು, ಪೇದೆಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಪೊಲೀಸ್ ಠಾಣಾ ವ್ಯಾಪ್ತಿಯ ಹರಸೂರು ಗ್ರಾಮದಲ್ಲಿ ಗಲಾಟೆ ನಡೆದ ಹಿನ್ನೆಲೆಯಲ್ಲಿ ಬಂದೋಬಸ್ತ್ ಕರ್ತವ್ಯಕ್ಕಾಗಿ ಹನುಮಂತರನ್ನು ನಿಯೋಜಿಸಲಾಗಿತ್ತು. ಆದರೆ, ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿಯೇ ಅವರು ಬಿಯರ್ ಸೇವಿಸಿರುವುದು ಇಲಾಖೆಯ ಶಿಸ್ತು ಮತ್ತು ಕರ್ತವ್ಯನಿಷ್ಠೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಪೇದೆಯನ್ನು ಅಮಾನತುಗೊಳಿಸುವಂತೆ ಆದೇಶಿಸಿದ್ದಾರೆ ಎಂದು ವರದಿಯಾಗಿದೆ.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button